ಬೆಂಗಳೂರು : ಆರ್‌ಸಿಬಿ ಸಂಭ್ರಮೋತ್ಸವದಲ್ಲಿ ಭಾಗಿಯಾಗಲು ಬಂದ ವೇಳೆ ಕಾಲ್ತುಳಿತಕ್ಕೆ 11 ಜನರು ಮೃತಪಟ್ಟಿರುವುದು ರಾಜ್ಯದ ಕಾಲ್ತುಳಿತ ದುರಂತದ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಘಟನೆಯಾಗಿದೆ.
1981ರಲ್ಲಿ ಬೆಂಗಳೂರಿನಲ್ಲಿ ವೀನಸ್ ಸರ್ಕಸ್ ಅಗ್ನಿ ಅವಘಡದಿಂದಾಗಿ ಸಂಭವಿಸಿದ ಕಾಲ್ತುಳಿತದಿಂದಾಗಿ 92 ಮಂದಿ ಮೃತಪಟ್ಟಿದ್ದರು. ಇದು ರಾಜ್ಯದಲ್ಲಿ ಈವರೆಗೆ ಸಂಭವಿಸಿದ ಅತಿದೊಡ್ಡ ಕಾಲ್ತುಳಿತ ದುರಂತವಾಗಿದೆ.
1981ರ ಫೆಬ್ರವರಿ 7ರಂದು ಜಕ್ಕರಾಯನಕೆರೆಯಲ್ಲಿ ವೀನಸ್ ಸರ್ಕಸ್‌ನ ಪ್ರದರ್ಶನದ ವೇಳೆ ಎಲೆಕ್ಟ್ರಿಕ್ ಕೇಬಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಸರ್ಕಸ್‌ನ ಟೆಂಟ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಸರ್ಕಸ್ ಟೆಂಟ್ ಒಳಗೆ ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಜನರು ಸರ್ಕಸ್ ವೀಕ್ಷಣೆಯಲ್ಲಿದ್ದರು. ಬೆಂಕಿ ಕಾಣಿಸಿಕೊಂಡ ಕೂಡಲೇ ಎಲ್ಲರೂ ಒಮ್ಮೇಲೆ ಟೆಂಟ್‌ನಿಂದ ಹೊರಗೆ ಓಡಿ ಹೋಗಲು ಮುಂದಾದಾಗ ಹಲವರು ಕಾಲ್ತುಳಿತಕ್ಕೆ, ಮತ್ತೆ ಕೆಲವರು ಬೆಂಕಿಗೆ ಸಿಲುಕಿದ್ದರು. ಈ ದುರ್ಘಟನೆಯಲ್ಲಿ 56 ಮಕ್ಕಳು ಸೇರಿದಂತೆ 92 ಮಂದಿ ಸಾವನ್ನಪ್ಪಿದ್ದರು. 300ಕ್ಕೂ ಹೆಚ್ಚಿನ ಮಂದಿ ಗಂಭೀರ ಮತ್ತು ಸುಟ್ಟ ಗಾಯಗಳಿಗೆ ತುತ್ತಾಗಿದ್ದರು.
ಅದಾದ ನಂತರ 2016ರಲ್ಲಿ ಬೆಂಗಳೂರಿನ ಬಂಬೂ ಬಜಾರ್‌ನ ಎಕೆಪಿ ಕನ್ವೆನ್ಷನ್ ಸೆಂಟರ್‌ನಲ್ಲಿ ರೇಷನ್ ಟೋಕನ್ ನೀಡುವ ಸಂದರ್ಭದಲ್ಲಿ ನೂಕು ನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿತ್ತು. ಟೋಕನ್ ಪಡೆಯಲು ಒಮ್ಮೇಲೆ ಸಾವಿರಾರು ಮಂದಿ ಬಂದ ಕಾರಣದಿಂದ ನೂಕು ನುಗ್ಗಲು ಸಂಭವಿಸಿತ್ತು. ಅದರಿಂದ ಉಂಟಾದ ಕಾಲ್ತುಳಿತಕ್ಕೆ ಜೀನತ್ ಉನ್ನೀಸಾ (40) ಎಂಬುವರು ಸಾವನ್ನಪ್ಪಿದ್ದರು.
ವಿಜಯಪುರದ ಲಚಾಣ್ಯ ಗ್ರಾಮದಲ್ಲಿ ಸಿದ್ದಲಿಂಗ ಮಹಾರಾಜರ ರಥೋತ್ಸವ ಸಂದರ್ಭದಲ್ಲಿ ಎರಡು ದಿನಗಳ ಕಾಲ ಕಾಲ್ತುಳಿತ ಸಂಭವಿಸಿ 5 ಮಂದಿ ಸಾವನ್ನಪ್ಪಿದ್ದರು. 2024ರ ಏ.28ರಂದು ರಥೋತ್ಸವದ ಆರಂಭದ ದಿನ ಕಾಲ್ತುಳಿತ ಸಂಭವಿಸಿ ಇಬ್ಬರು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿದ್ದರು. ಅದರ ಮರುದಿನ ಏ.29ರಂದು ರಥ ಎಳೆಯುವ ಸಂದರ್ಭದಲ್ಲಿ ತಳ್ಳಾಟ ಉಂಟಾಗಿ ಏಳು ಮಂದಿ ಬೃಹತ್ ರಥದ ಚಕ್ರದ ಕೆಳಗೆ ಸಿಲುಕಿದ್ದರು. ಅದರಿಂದ ಮೂವರು ಸಾವನ್ನಪ್ಪಿ, ನಾಲ್ವರು ಗಂಭೀರ ಗಾಯಕ್ಕೆ ತುತ್ತಾಗಿದ್ದರು.
2023ರ ನ.10ರಂದು ಹಾಸನದ ಹಾಸನಾಂಬ ಉತ್ಸವದ ಸಂದರ್ಭದಲ್ಲಿ ಎಲೆಕ್ಟ್ರಿಕ್ ಶಾಕ್ ಸಂಭವಿಸಿ, ಆತಂಕ ಸೃಷ್ಟಿಯಾದ ಕಾರಣ ನೂಕು ನುಗ್ಗಲು ಸೃಷ್ಟಿಯಾಗಿತ್ತು. ಅದರ ಪರಿಣಾಮ ಮೂವರಿಗೆ ಗಂಭೀರ ಗಾಯಗಳಾಗಿದ್ದವು.