ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಕ್ಯಾನ್ಸರ್ ಹಾಗೂ ಗಂಭೀರ ಕಾಯಿಲೆಗಳಿಗೆ ನುರಿತ ವೈದ್ಯರಿಂದ ತಪಾಸಣೆ ಮಾಡಲಾಗುತ್ತದೆ ಎಂದು ಬೃಹತ್ ಆರೋಗ್ಯ ಮೇಳದ ಪ್ರಕಟಣೆ ನೀಡಿದ್ದರೂ ಸಾರ್ವಜನಿಕ ಆಸ್ಪತ್ರೆಯ ವೈದ್ಯರನ್ನೇ ಬಳಸಿಕೊಂಡು ಆರೋಗ್ಯ ಮೇಳದ ಆಯೋಜನೆ ಮಾಡಿದ್ದು ಸರ್ಕಾರದ ಅನುದಾನದ ದುರ್ಬಳಕೆಯಾ? ಅಥವಾ ಭ್ರಷ್ಟಚಾರಿಗಳ ಹೂಡಿರುವ ಸಂಚಿಗೆ ಜಿಲ್ಲಾಡಳಿತ ಜತೆಗೆ ತಾಲೂಕು ಆಡಳಿತ ಬಲಿಯಾಗಿದೆಯೋ? ಅಥವಾ ಮೆಡಿಕಲ್ ಮಾಫಿಯಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.ಸಾರ್ವಜನಿಕ ಆಸ್ಪತ್ರೆಯ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಬೃಹತ್ ಆರೋಗ್ಯ ಮೇಳವೆಂದು ಹಾಕಿರುವ ಬ್ಯಾನರ್ ಅಡಿಯಲ್ಲಿ ಆಯೋಜಿಸಿರುವ ಸ್ಥಳದಲ್ಲಿ ಏಳೆಂಟು ಟೇಬಲ್‌ನಲ್ಲಿ ಆಸ್ಪತ್ರೆಯ ಶುಶ್ರೂಷಕರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೌಕರರು ಹಾಗೂ ಕೆಲವು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕುಳಿತು ಬಿಪಿ, ಶುಗರ್ ಪರೀಕ್ಷೆ ನಡೆಸಿದರು. ಆಸ್ಪತ್ರೆಯ ಒಳಗೆ ವೈದ್ಯರು ದೊರೆಯುವ ಕೊಠಡಿಯ ಸಂಖ್ಯೆ ತಿಳಿಸಿ, ಅಲ್ಲಿಗೆ ಹೋಗಿ ವೈದ್ಯರನ್ನು ಭೇಟಿ ಮಾಡಿ ಎನ್ನುತ್ತಿದ್ದರು. ಆದರೆ ಟೇಬಲ್ ಮೇಲೆ ಜೋಡಿಸಿದ್ದ ಹಲವು ಔಷಧಿಗಳು ಪ್ರದರ್ಶನಕ್ಕೆ ಇಟ್ಟಂತಿತ್ತು. ಜತೆಗೆ ತಾಲೂಕು ಆಡಳಿತದ ಶೀರ್ಷಿಕೆಯಡಿ ಆಯೋಜನೆ ಮಾಡಿದ್ದ ಬೃಹತ್ ಆರೋಗ್ಯ ಮೇಳವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನುರಿತ ೨೮ಕ್ಕೂ ಹೆಚ್ಚು ವೈದ್ಯರು ಸೇವೆ ಸಲ್ಲಿಸುತ್ತಿದ್ದು, ಈಗಾಗಲೇ ನುರಿತ ವೈದ್ಯರ ಕಾರ್ಯದಕ್ಷತೆಯಿಂದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಬೀಗುತ್ತಿರುವ ಆಸ್ಪತ್ರೆಗೆ ಇತರೆ ತಾಲೂಕುಗಳನ್ನು ಸೇರಿ ಪ್ರತಿನಿತ್ಯ ಸಾವಿರಾರು ರೋಗಿಗಳು ಭೇಟಿ ನೀಡಿ, ಚಿಕಿತ್ಸೆ ಪಡೆದು ತೆರಳುತ್ತಿದ್ದಾರೆ. ಇಂತಹ ಸನ್ನಿವೇಶ ನಿರ್ಮಾಣವಾಗಿರುವ ಸಂದರ್ಭದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಬೃಹತ್ ಆರೋಗ್ಯ ಮೇಳವೆಂದು ಪ್ರಕಟಣೆ ನೀಡಿದ್ದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳನ್ನೇ ಬಳಸಿಕೊಂಡು, ಆಸ್ಪತ್ರೆಯ ಕೊಠಡಿಯಲ್ಲಿ ವೈದ್ಯರ ಭೇಟಿಗೆ ತಿಳಿಸುವ ಆರೋಗ್ಯ ಮೇಳ ಆಯೋಜನೆಯೂ ಸಾರ್ವಜನಿಕರಲ್ಲಿ ನಾನಾ ರೀತಿಯ ಪ್ರಶ್ನೆಗಳನ್ನು ಮೂಡಿಸುವ ಜತೆಗೆ ಇದು ಹಿರಿಯ ಅಧಿಕಾರಿಗಳ ಮೂಗಿನಡಿಯಲ್ಲಿ ನಡೆದಿರುವ ಮೆಡಿಕಲ್ ಸ್ಕ್ಯಾಮ್ ಎಂದು ಆರೋಪಿಸಿದ್ದಾರೆ. ತಹಸೀಲ್ದಾರ್, ತಾ. ಆರೋಗ್ಯಾಧಿಕಾರಿಯಿಂದ ತಪ್ಪು ಮಾಹಿತಿ:ಪಟ್ಟಣದ ತಾಲೂಕು ಕಚೇರಿಯಲ್ಲಿ ಆಗಸ್ಟ್ ೩೧ರಂದು ಆಯೋಜನೆ ಮಾಡಿದ್ದ ಆರೋಗ್ಯ ತಪಾಸಣೆ ಶಿಬಿರದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸೆಪ್ಟೆಂಬರ್ ೯ರ ಮಂಗಳವಾರ ಬೃಹತ್ ಆರೋಗ್ಯ ಮೇಳ ಆಯೋಜನೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದ್ದರು. ಡಾ. ರಾಜೇಶ್ ಮಾತನಾಡಿ ಅನುಭವಿ ವೈದ್ಯರ ತಂಡದಿಂದ ಸಾಮಾನ್ಯ ಕಾಯಿಲೆಗಳು, ಕ್ಯಾನ್ಸರ್‌ನಂತ ಗಂಭೀರ ಕಾಯಿಲೆಗಳಿಗೆ ನುರಿತ ವೈದ್ಯರಿಂದ ಉಚಿತ ತಪಾಸಣೆ ಹಾಗೂ ಸಲಹೆಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.