ಇಲ್ಲಿನ ತುಮರಿ ಸರ್ಕಾರಿ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ಸಂತೆಯು ಸಾರ್ವಜನಿಕರ ಗಮನ ಸೆಳೆಯಿತು. ಶಾಲಾ ಆವರಣವು ಅಕ್ಷರಶಃ ಒಂದು ಹಳ್ಳಿಯ ಮಾರುಕಟ್ಟೆಯಂತೆ ಮಾರ್ಪಟ್ಟಿತ್ತು.
ಕನ್ನಡಪ್ರಭ ವಾರ್ತೆ ಬ್ಯಾಕೋಡು
ಇಲ್ಲಿನ ತುಮರಿ ಸರ್ಕಾರಿ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ಸಂತೆಯು ಸಾರ್ವಜನಿಕರ ಗಮನ ಸೆಳೆಯಿತು. ಶಾಲಾ ಆವರಣವು ಅಕ್ಷರಶಃ ಒಂದು ಹಳ್ಳಿಯ ಮಾರುಕಟ್ಟೆಯಂತೆ ಮಾರ್ಪಟ್ಟಿತ್ತು.
ಬೆಳಿಗ್ಗೆಯಿಂದಲೇ ಆರಂಭವಾದ ಈ ಸಂತೆಯಲ್ಲಿ ಮಕ್ಕಳು ತಾಜಾ ತರಕಾರಿಗಳು, ಹಣ್ಣುಗಳು, ವಿವಿಧ ಧಾನ್ಯಗಳು ಹಾಗೂ ಮನೆಯಲ್ಲಿ ತಯಾರಿಸಿದ ರುಚಿಕರವಾದ ತಿಂಡಿ-ತಿನಿಸುಗಳು, ಬಟ್ಟೆ, ಗೃಹ ಬಳಕೆ ವಸ್ತುಗಳನ್ನು ಮಾರಾಟ ಮಾಡಿದರು.
ಪ್ರಾಯೋಗಿಕವಾಗಿ ವ್ಯವಹಾರ ಜ್ಞಾನ, ಲೆಕ್ಕಾಚಾರ ಮತ್ತು ಗ್ರಾಹಕರೊಂದಿಗೆ ಮಾತನಾಡುವ ಕಲೆಯನ್ನು ಮಕ್ಕಳು ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಸಂತೆಯಲ್ಲಿ ಒಟ್ಟು ಹತ್ತಕ್ಕೂ ಹೆಚ್ಚು ಮಳಿಗೆಗಳಿದ್ದವು. ಮಕ್ಕಳ ಆಟಿಕೆಗಳು ಜನಮನ ಗೆದ್ದವು. ಪೋಷಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಕ್ಕಳಿಂದ ವಸ್ತುಗಳನ್ನು ಖರೀದಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ ಕುಮಾರ ಶೆಟ್ಟಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಇಂತಹ ಪ್ರಾಯೋಗಿಕ ಶಿಕ್ಷಣದ ಅವಶ್ಯಕತೆ ಇದೆ. ಸಂತೆ ಎನ್ನುವುದು ಬರಿ ವ್ಯಾಪಾರವಲ್ಲ, ಅದು ಸಾಮಾಜಿಕ ಸಂವಹನದ ಪಾಠಶಾಲೆ. ಮಕ್ಕಳಲ್ಲಿರುವ ಆತ್ಮವಿಶ್ವಾಸ ಮತ್ತು ಆರ್ಥಿಕ ಶಿಸ್ತನ್ನು ಬೆಳೆಸಲು ಈ ಸಂತೆ ಪೂರಕವಾಗಿದೆ ಎಂದು ಶ್ಲಾಘಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ವನಜಾಕ್ಷಿ, ಹಾಗೂ ಶಿಕ್ಷಕ ವೃಂದ ಹಾಗೂ ಪೋಷಕ ಸಮಿತಿಯ ಸದಸ್ಯರು ಈ ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಪ್ಲಾಸ್ಟಿಕ್ ಮುಕ್ತ ಸಂತೆ ಎಂಬ ಘೋಷಣೆಯೊಂದಿಗೆ ಪರಿಸರ ಜಾಗೃತಿಯನ್ನೂ ಮೂಡಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.