ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕ್ಷೇತ್ರಕ್ಕೆ ಚಿಕ್ಕಬಳ್ಳಾಪುರ ಎಂಬ ಹೆಸರಿದ್ದರೂ, ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಕ್ಷೇತ್ರದ ಭಾಗವಾಗಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮತ್ತು ಹೊಸಕೋಟೆ ವಿಧಾನಸಭಾ ಕ್ಷೇತ್ರಗಳು, ಬೆಂಗಳೂರು ನಗರ ಜಿಲ್ಲೆಯ ಯಲಹಂಕ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ಕ್ಷೇತ್ರಗಳನ್ನು ಒಳಗೊಂಡಿದೆ.
ಪ್ರಸ್ತುತ ಈ ಕ್ಷೇತ್ರದಲ್ಲಿ ಒಟ್ಟಾರೆ 9,80,641 ಮಹಿಳಾ ಹಾಗೂ 9,69,538 ಪುರುಷ ಮತದಾರರು ಸೇರಿ ಒಟ್ಟು 19,50,179 ಮತದಾರರಿದ್ದಾರೆ. ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿರುವ ರಾಜ್ಯದ ಕೆಲವೇ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ಈ ಪೈಕಿ ಯಲಹಂಕ ಅತಿಹೆಚ್ಚು ಮತದಾರರನ್ನು ಹೊಂದಿರುವ ವಿಧಾನಸಭಾ ಕ್ಷೇತ್ರವಾಗಿದೆ.ಕಾಂಗ್ರೆಸ್ ಪ್ರಾಬಲ್ಯದ ಕ್ಷೇತ್ರ:
ಪ್ರಸ್ತುತ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಕಾಂಗ್ರೆಸ್, 2ರಲ್ಲಿ ಬಿಜೆಪಿ ಮತ್ತು 1 ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ಪಕ್ಷೇತರ ಶಾಸಕರಿದ್ದಾರೆ. ಕಾಂಗ್ರೆಸ್‌ನಿಂದ ಚಿಕ್ಕಬಳ್ಳಾಪುರದ ಪ್ರದೀಪ್ ಈಶ್ವರ್ , ಬಾಗೇಪಲ್ಲಿಯ ಎಸ್.ಎನ್.ಸುಬ್ಬಾರೆಡ್ಡಿ, ದೇವನಹಳ್ಳಿಯ ಕೆ.ಎಚ್.ಮುನಿಯಪ್ಪ, ಹೊಸಕೋಟೆಯ ಶರತ್ ಬಚ್ಚೇಗೌಡ ಮತ್ತು ನೆಲಮಂಗಲದ ಶ್ರೀನಿವಾಸ್, ಬಿಜೆಪಿಯಿಂದ ದೊಡ್ಡಬಳ್ಳಾಪುರದ ಧೀರಜ್ ಮುನಿರಾಜ್, ಯಲಹಂಕದ ಎಸ್.ಆರ್.ವಿಶ್ವನಾಥ್, ಪಕ್ಷೇತರ ಗೌರಿಬಿದನೂರಿನ ಪುಟ್ಟಸ್ವಾಮಿಗೌಡ ಶಾಸನಸಭೆಯನ್ನು ಪ್ರತಿನಿಧಿಸುತ್ತಿದ್ದಾರೆ.
ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಕ್ಷೇತ್ರದಲ್ಲಿ ಪಕ್ಷದಿಂದ ಆರಂಭದಿಂದಲೂ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ ಹೆಸರು ಮುಂಚೂಣಿಯಲ್ಲಿದೆ. ಆದರೂ ಅನುಭವಿ ರಾಜಕಾರಣಿ ಹಾಗೂ 2 ಬಾರಿ ಸಂಸದರಾಗಿದ್ದ ವೀರಪ್ಪ ಮೊಯ್ಲಿ ಅವರನ್ನು ಕಡೆಗಣಿಸುವುದು ಸುಲಭವಲ್ಲ. ಜೊತೆಗೆ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ಎಚ್.ಎನ್.ಶಿವಶಂಕರರೆಡ್ಡಿ ಕೂಡ ಆಕಾಂಕ್ಷಿಯಾಗಿದ್ದಾರೆ. ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ಬಿಜೆಪಿಯ ನಡೆ ಮೇಲೆ ತೀವ್ರ ನಿಗಾ ಇಟ್ಟಿದ್ದು, ಶತಾಯಗತಾಯ ಕ್ಷೇತ್ರವನ್ನು ಮರುವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.
ಸದ್ಯ ಬಿಜೆಪಿಯ ಸಂಸದರು ಪ್ರತಿನಿಧಿಸುತ್ತಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಈ ಬಾರಿಯೂ ಉಳಿಸಿಕೊಳ್ಳುವ ಸಂಕಲ್ಪ ಮಾಡಿರುವ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದೆ. ಈ ಪೈಕಿ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್, ಬಿಡಿಎ ಮಾಜಿ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಹೆಸರು ಮುಂಚೂಣಿಯಲ್ಲಿವೆ. ಈ ಮಧ್ಯೆ ಎಸ್.ಆರ್.ವಿಶ್ವನಾಥ್ ತಾವೂ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದಾರೆ. ಜೊತೆಗೆ ಟಿಕೆಟ್ ವಂಚಿತರಾಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಂಡ್ಯ ಸಂಸದೆ ಸುಮಲತಾ, ಮಾಜಿ ಶಾಸಕ ಸಿ.ಟಿ.ರವಿ ಹೆಸರುಗಳೂ ಕೇಳಿ ಬರುತ್ತಿದ್ದು, ಅಧಿಕೃತ ಅಭ್ಯರ್ಥಿ ಘೋಷಣೆಯ ಕುತೂಹಲ ಹೆಚ್ಚಿಸಿದೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಜಾತಿ ಲೆಕ್ಕಾಚಾರದಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಸೂಕ್ತ ಎಂಬ ಜಿಜ್ಞಾಸೆಯಲ್ಲಿವೆ. ಅಹಿಂದ ಮತಗಳನ್ನು ಸೆಳೆಯುವ ಶಕ್ತಿಯುಳ್ಳ, ಇತರೆ ಸಮುದಾಯದ ವಿಶ್ವಾಸವನ್ನೂ ಗಳಿಸುವ ಅಭ್ಯರ್ಥಿಯ ಗೆಲುವು ನಿರಾಯಾಸ ಎನಿಸಿದರೂ, ರಾಷ್ಟ್ರ ರಾಜಕಾರಣ, ರಾಜ್ಯದ ರಾಜಕೀಯ ಬೆಳವಣಿಗೆಗಳ ಆಧಾರದಲ್ಲಿ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿನ ಅಖಾಡವಾಗಲಿದೆ ಎಂಬುದು ಸುಳ್ಳಲ್ಲ.
ಈವರೆಗೆ ಕ್ಷೇತ್ರದಲ್ಲಿ ನಡೆದಿರುವ 12 ಚುನಾವಣೆಗಳಲ್ಲಿ 6 ಬಾರಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿದ್ದರೆ, 3 ಬಾರಿ ಬ್ರಾಹ್ಮಣ, 2 ಬಾರಿ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಸಂಸದರಾಗಿದ್ದಾರೆ. ಕಳೆದ 2019 ರಲ್ಲಿ ಬಿಜೆಪಿಯ ಬಿ.ಎನ್. ಬಚ್ಚೇಗೌಡ 7,45,912 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ(5,63,802) ಅವರನ್ನು ಒಂದೂವರೆ ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ವೀರಪ್ಪ ಮೊಯ್ಲಿ 4,24,800 ಮತ ಗಳಿಸಿ ಬಿಜೆಪಿಯ ಬಿಎನ್ ಬಚ್ಚೇಗೌಡ (4,15,280) ಮತ್ತು ಜೆಡಿಎಸ್ ನ ಎಚ್.ಡಿ.ಕುಮಾರ ಸ್ವಾಮಿ, (3,46,339) ಅವರನ್ನು ಮಣಿಸಿ ಆಯ್ಕೆಯಾಗಿದ್ದರು. 2009 ರಲ್ಲಿಯೂ ಕಾಂಗ್ರೆಸ್ ನ ವೀರಪ್ಪ ಮೊಯ್ಲಿ ಬಿಜೆಪಿಯ ಸಿ. ಅಶ್ವಥನಾರಾಯಣ್ ವಿರುದ್ಧ ಗೆಲುವು ಸಾಧಿಸಿದ್ದರು.