ಸ್ವಾಮೀಜಿ ಆಶೀರ್ವಾದ ಪಡೆದಿದ್ದ ಆರು ಖಾಕಿಗಳ ವರ್ಗ!

KannadaprabhaNewsNetwork | Published : Mar 15, 2025 1:05 AM

ಸಾರಾಂಶ

ಕರ್ತವ್ಯನಿರತ ಪೊಲೀಸರು ಕಾರಿನಲ್ಲಿ ಹೋಗುತ್ತಿದ್ದ ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲೂಕಿನ ಸಿದ್ಧನಕೊಳ್ಳ ಮಠದ ಶಿವಕುಮಾರ ಸ್ವಾಮೀಜಿ ಅವರ ಕಾಲಿಗೆ ನಮಸ್ಕರಿಸಿರುವ ಮತ್ತು ಸ್ವಾಮೀಜಿ ಪೊಲೀಸರಿಗೆ ಹಣ ನೀಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನಡೆದಿದ್ದು, ಈ ವಿಡಿಯೋ ಭಾರೀ ವೈರಲ್‌ ಆಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕರ್ತವ್ಯನಿರತ ಪೊಲೀಸರು ಕಾರಿನಲ್ಲಿ ಹೋಗುತ್ತಿದ್ದ ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲೂಕಿನ ಸಿದ್ಧನಕೊಳ್ಳ ಮಠದ ಶಿವಕುಮಾರ ಸ್ವಾಮೀಜಿ ಅವರ ಕಾಲಿಗೆ ನಮಸ್ಕರಿಸಿರುವ ಮತ್ತು ಸ್ವಾಮೀಜಿ ಪೊಲೀಸರಿಗೆ ಹಣ ನೀಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನಡೆದಿದ್ದು, ಈ ವಿಡಿಯೋ ಭಾರೀ ವೈರಲ್‌ ಆಗಿದೆ.

ಇದರ ನಡುವೆಯೇ ಸಮವಸ್ತ್ರದಲ್ಲಿಯೇ ಸ್ವಾಮೀಜಿಗೆ ನಮಸ್ಕರಿಸಿದ ಹಿನ್ನೆಲೆಯಲ್ಲಿ ಆರು ಜನ ಪೊಲೀಸರ ವರ್ಗಾವಣೆ ಮಾಡಿ ಬಾಗಲಕೋಟೆ ಎಸ್​ಪಿ ಅಮರನಾಥ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಎಎಸ್​​ಐ ಜಿಬಿ ದಳವಾಯಿ ಅವರನ್ನು ಹುನಗುಂದ ಠಾಣೆಗೆ, ಡಿಜೆ ಶಿವಪುರ ಎಎಸ್​​ಐ ಬಾಗಲಕೋಟೆ ಗ್ರಾಮೀಣ ಠಾಣೆ, ನಾಗರಾಜ ಅಂಕೋಲೆ ಬೀಳಗಿ ಠಾಣೆ, ಜಿಬಿ ಅಂಗಡಿ ಇಳಕಲ್ ನಗರ ಠಾಣೆ, ರಮೇಶ್ ಈಳಗೇರ ಬಾಗಲಕೋಟೆ ಗ್ರಾಮೀಣ ಠಾಣೆ, ರಮೇಶ್ ಹುಲ್ಲೂರು ಜಿಲ್ಲಾ ಪೊಲೀಸ್ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಎಸ್ಪಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ, ವರ್ಗಾವಣೆಯಾದ ಸಿಬ್ಬಂದಿ ಸದ್ಯ ವಾಸವಿರುವ ವಸತಿಗೃಹ ಕೂಡ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.

ಏನಿದು ಘಟನೆ?:

ಸಿದ್ಧನಕೊಳ್ಳ ಶಿವಕುಮಾರ ಸ್ವಾಮೀಜಿ ಅವರು ಕಾರಿನಲ್ಲಿ ಹೋಗುತ್ತಿರುವಾಗ ಕರ್ತವ್ಯನಿರತ ಪೊಲೀಸರು ಕಾರಿನಲ್ಲಿದ್ದ ಅವರ ಕಾಲಿಗೆ ಬೀಳುತ್ತಾರೆ. ಆಗ ಸ್ವಾಮೀಜಿ, ಅಲ್ರಲೆ ಎಲ್ಲಾರೂ ಇಲ್ಲೇ ನಿಂತರಲ್ಲ. ಮಂದಿಗೆ ಅಡ್ಡಾಡಕರ ಬಿಡ್ತಿರಿ ಇಲ್ಲಾ. ಡ್ರೆಸ್‌ ಮ್ಯಾಲೆ ಇದ್ದಾಗ ನಮಸ್ಕಾರ ಮಾಡಬಾರ್ದು. ಯಾವ ಜಗದ್ಗುರುಗೂ ಮಾಡಬಾರ್ದು ಲೆ. ನಾ ಅಂತಾ ಸ್ವಾಮಿಗಳ ಅಲ್ಲಾ ಎಂದು ಹೇಳುತ್ತ ಜೇಬಿನಿಂದ ಹಣ ತೆಗೆದು ಪೊಲೀಸರಿಗೆ ಕೊಡುತ್ತಾರೆ. ಅದನ್ನು ಖರ್ಚು ಮಾಡದಂತೆಯೂ ಶ್ರೀಗಳು ಸೂಚಿಸಿರುವುದು ವಿಡಿಯೋದಲ್ಲಿದೆ.

ಮೊದಲಿನಿಂದಲೂ ದುಡ್ಡು ಕೊಟ್ಟು ಆಶೀರ್ವಾದ:

ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿರುವ ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ ಅವರು, ಪೊಲೀಸರು ದುಡ್ಡು ಪಡೆದು ಕಾಲಿಗೆ ನಮಸ್ಕಾರ ಮಾಡಿರುವುದನ್ನು ಅನ್ಯಥಾ ಭಾವಿಸಬಾರದು. ನಮ್ಮ ಮಠದ್ದು ಮೊದಲಿಂದಲೂ ದುಡ್ಡು ಕೊಟ್ಟು ಆಶೀರ್ವಾದ ಮಾಡುವ ಪರಂಪರೆ ಇದೆ. ನಾವು ದಿನದ ದಾಸೋಹಕ್ಕೆ ಎಷ್ಟು ಹಣ ಬೇಕು ಅಷ್ಟು ಇಟ್ಟುಕೊಂಡು, ಉಳಿದ ಹಣವನ್ನು ಭಕ್ತರಿಗೆ ಕೊಡುತ್ತೇವೆ. ಇದು ಭಕ್ತರನ್ನು ಬೆಳೆಸುವ ಮಠವಾಗಿದೆ. ಹೀಗಾಗಿ ಅದರಲ್ಲಿ ಅನ್ಯಥಾ ಭಾವಿಸಬಾರದು ಎಂದು ಹೇಳಿದ್ದಾರೆ.

ಬಾದಾಮಿಯಲ್ಲಿ ನಾನು ಒಂದು ಕಾರ್ಯಕ್ರಮಕ್ಕೆ ಹೊರಟಾಗ ಆ ಹುಡುಗ ಮೊದಲು ಕಾಲು ಬಿದ್ದ, ಆತ ಹತ್ತು ವರ್ಷದಿಂದಲೂ ಮಠಕ್ಕೆ ಬರುತ್ತಿದ್ದ. ಆತನನ್ನು ನೋಡಿ ಕಾರು ನಿಲ್ಲಿಸಿದೆ. ಅಷ್ಟರಲ್ಲಿ ಅವರೆಲ್ಲಾ ಸಂಪ್ರದಾಯದಂತೆ ಕಾಲಿಗೆ ನಮಸ್ಕಾರ ಮಾಡಿದ್ರು. ಆಶೀವಾದ ಮಾಡಿ ದುಡ್ಡು ಕೊಟ್ಡಿದ್ದೇನೆ. ಇದನ್ನು ದೊಡ್ಡ ವಿವಾದ ಮಾಡಿ ವೈರಲ್‌ ಮಾಡೋದರಲ್ಲಿ ಅರ್ಥವಿಲ್ಲ. ನಾವು ಅವರಿಗೆ ಲಂಚ‌ ಕೊಟ್ಟಿಲ್ಲ. ಮೊದಲಿಂದಲೂ ಅವರು ನಮ್ಮ ಮಠಕ್ಕೆ ನಡಕೊಂಡು ಬಂದಿದ್ದಾರೆ. ಅವರಿಗಷ್ಟೇ ಅಲ್ಲ, ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಎಲ್ಲರಿಗೂ ದುಡ್ಡು ಕೊಟ್ಟಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೂ ದುಡ್ಡು ಕೊಟ್ಟು ಆಶೀರ್ವಾದ ಮಾಡಿದ್ದೇವೆ. ರಾಜಕಾರಣಿಗಳಿಂದ ಹಿಡಿದು ಪೊಲೀಸ್ ಇಲಾಖೆ ಅಧಿಕಾರಿಗಳು, ಬಡವರಿಂದ ಹಿಡಿದು ದೊಡ್ಡವರಿಗೂ ಆಶೀರ್ವಾದ ಮಾಡುತ್ತಾ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಆ ಹಣವನ್ನು ಭಕ್ತರು ಮನೆಯಲ್ಲಿಟ್ಟು ಪೂಜೆ ಮಾಡ್ತಾರೆ. ಆ ರೀತಿ ಪರಂಪರೆ ಇದೆ. ಈ ರೀತಿ ವೈರಲ್‌ ಮಾಡಿ ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸ‌ ಮಾಡಬಾರದು. ನಾನು ಡ್ರೆಸ್ ಮೇಲೆ ನಮಸ್ಕಾರ ಮಾಡಬೇಡಿ ಎಂದು ಹೇಳಿದೆ. ಆದರೆ ಗುರುಗಳು ಕಂಡಾಗ ನಮಸ್ಕಾರ ‌ಮಾಡೋದು ಅವರ ಭಾವನೆ, ಭಾರತೀಯ ಸಂಸ್ಕೃತಿ. ಅದನ್ನು ದೊಡ್ಡ ವಿವಾದ ಮಾಡಿ ಗುಬ್ಬಿ ‌ಮೇಲೆ‌ ಬ್ರಹ್ಮಾಸ್ತ್ರ ಮಾಡೋದು ಸರಿಯಲ್ಲ. ಪೊಲೀಸ್ ಇಲಾಖೆ‌ಯವರ ಮೇಲೆ‌ ಯಾವುದೇ ರೀತಿ ಕ್ರಮ ಜರುಗಿಸದೆ ಅವರ ಕುಟುಂಬಕ್ಕೆ ಅನ್ಯಾಯ ಆಗದ ಹಾಗೆ ನೋಡಿಕೊಳ್ಳಬೇಕೆಂದು‌ ಮನವಿ‌ ಮಾಡಿದರು.

Share this article