ಪ್ಲಾಸ್ಟಿಕ್ ತ್ಯಜಿಸಿ ಸ್ವಚ್ಛ ಪರಿಸರ ನಮ್ಮೆಲ್ಲರ ಹೊಣೆ

KannadaprabhaNewsNetwork |  
Published : Jun 05, 2026, 01:45 AM IST
4ಎಚ್ಎಸ್ಎನ್12 : ಲತಾಕುಮಾರಿ ಹಸಿರು ಬಾವುಟ ಪ್ರದರ್ಶಿಸಿ ತಾವೆ ಸ್ವತಃ ಪರಿಸರ ಸ್ನೇಹಿ ಸೈಕಲ್ ತುಣಿದು ಮತ್ತು ಕಾರು ಚಾಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು  ಉದ್ಘಾಟಿಸಿದರು. | Kannada Prabha

ಸಾರಾಂಶ

ವೇಗವಾಗಿ ಹೆಚ್ಚುತ್ತಿರುವ ಮಾಲಿನ್ಯ, ಹವಾಮಾನ ವೈಪರೀತ್ಯ, ಅರಣ್ಯನಾಶ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಅಪಾರ ಹಾನಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಕಾಲದ ಅಗತ್ಯವಾಗಿದೆ ಎಂದರು. ಉತ್ತಮ ಪರಿಸರಕ್ಕಾಗಿ ಪ್ರತಿಯೊಬ್ಬರೂ ಸಣ್ಣಸಣ್ಣ ಬದಲಾವಣೆಗಳಿಂದ ದೊಡ್ಡ ಪರಿಣಾಮ ತರಬಹುದು. ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಸೈಕಲ್, ಸಾರ್ವಜನಿಕ ಸಾರಿಗೆ ಹಾಗೂ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚಿಸಬೇಕು. ಮರಗಳನ್ನು ನೆಡುವುದರ ಜೊತೆಗೆ ಅವುಗಳನ್ನು ಉಳಿಸುವ ಜವಾಬ್ದಾರಿಯನ್ನೂ ನಾವು ವಹಿಸಬೇಕು. ಹಸಿರು ಉಳಿದರೆ ಮಾತ್ರ ಭವಿಷ್ಯದ ಪೀಳಿಗೆ ಆರೋಗ್ಯಕರ ಬದುಕು ನಡೆಸಲು ಸಾಧ್ಯ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಪರಿಸರ ಸಂರಕ್ಷಣೆ ಇಂದಿನ ಜಗತ್ತಿನ ಅತ್ಯಂತ ಮಹತ್ವದ ಸವಾಲಾಗಿದ್ದು, ಪ್ರತಿಯೊಬ್ಬ ನಾಗರಿಕನು ಪ್ರಕೃತಿಯ ರಕ್ಷಣೆಗೆ ತನ್ನದೇ ಆದ ಕೊಡುಗೆ ನೀಡಬೇಕು ಎಂಬ ಸಂದೇಶ ಸಾರುವ ಉದ್ದೇಶದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಹಾಸನ ನಗರದಲ್ಲಿ ಬೃಹತ್ ಪರಿಸರ ಜಾಗೃತಿ ಜಾಥಾ ನಡೆಸಲಾಯಿತು.

ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಹಾಗೂ ಕೈಗಾರಿಕೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭವಾದ ಜಾಥಾಕ್ಕೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಸಿರು ಬಾವುಟ ಪ್ರದರ್ಶಿಸಿ ತಾವೇ ಸ್ವತಃ ಪರಿಸರ ಸ್ನೇಹಿ ಸೈಕಲ್ ತುಳಿದು ಮತ್ತು ಕಾರು ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ, ವೇಗವಾಗಿ ಹೆಚ್ಚುತ್ತಿರುವ ಮಾಲಿನ್ಯ, ಹವಾಮಾನ ವೈಪರೀತ್ಯ, ಅರಣ್ಯನಾಶ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಅಪಾರ ಹಾನಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಕಾಲದ ಅಗತ್ಯವಾಗಿದೆ ಎಂದರು. ಉತ್ತಮ ಪರಿಸರಕ್ಕಾಗಿ ಪ್ರತಿಯೊಬ್ಬರೂ ಸಣ್ಣಸಣ್ಣ ಬದಲಾವಣೆಗಳಿಂದ ದೊಡ್ಡ ಪರಿಣಾಮ ತರಬಹುದು. ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಸೈಕಲ್, ಸಾರ್ವಜನಿಕ ಸಾರಿಗೆ ಹಾಗೂ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚಿಸಬೇಕು. ಮರಗಳನ್ನು ನೆಡುವುದರ ಜೊತೆಗೆ ಅವುಗಳನ್ನು ಉಳಿಸುವ ಜವಾಬ್ದಾರಿಯನ್ನೂ ನಾವು ವಹಿಸಬೇಕು. ಹಸಿರು ಉಳಿದರೆ ಮಾತ್ರ ಭವಿಷ್ಯದ ಪೀಳಿಗೆ ಆರೋಗ್ಯಕರ ಬದುಕು ನಡೆಸಲು ಸಾಧ್ಯ ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಿಣಿ ಮಾತನಾಡಿ, ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಆಹಾರ ಉತ್ಪಾದನೆ ಎಲ್ಲವೂ ಪ್ರಕೃತಿಯ ಕೊಡುಗೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ, ಅತಿಯಾದ ತ್ಯಾಜ್ಯ ಉತ್ಪಾದನೆ ಮತ್ತು ಅರಣ್ಯ ನಾಶದಿಂದ ಪರಿಸರ ಸಮತೋಲನ ಹದಗೆಡುತ್ತಿದೆ. ನಾವು ಮುಂದಿನ ಪೀಳಿಗೆಗೆ ಹಣ-ಆಸ್ತಿ ಮಾತ್ರವಲ್ಲ, ಸ್ವಚ್ಛ ಮತ್ತು ಸುರಕ್ಷಿತ ಪರಿಸರವನ್ನೂ ಉಡುಗೊರೆಯಾಗಿ ನೀಡಬೇಕು. ಅದಕ್ಕಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಪರಿಸರ ಸ್ನೇಹಿ ಪರ್ಯಾಯಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಜಾಥಾದಲ್ಲಿ ಪರಿಸರ ಸ್ನೇಹಿ ವಾಹನಗಳು, ಎಲೆಕ್ಟ್ರಿಕ್ ಕಾರುಗಳು, ಬೈಕ್‌ಗಳು, ಸೈಕಲ್‌ಗಳು ಹಾಗೂ ಕಾಲ್ನಡಿಗೆ ತಂಡಗಳು ಭಾಗವಹಿಸಿ ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದವು. ವಿಶೇಷವಾಗಿ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಸ್ವತಃ ಎಲೆಕ್ಟ್ರಿಕ್ ಕಾರು ಚಾಲನೆ ಮಾಡುವ ಮೂಲಕ ಪರಿಸರ ಸ್ನೇಹಿ ಸಾರಿಗೆ ಬಳಕೆಯ ಮಹತ್ವವನ್ನು ಸಾರಿದರು. ಅವರೊಂದಿಗೆ ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಿಣಿ ಸಹ ಭಾಗವಹಿಸಿದರು. ಜಾಥಾ ವೇಳೆ ಪ್ರಕೃತಿಯಿಂದ ಪ್ರೇರಿತಗೊಂಡ ಉತ್ತಮ ಹವಾಮಾನಕ್ಕಾಗಿ ಹಾಗೂ ನಮ್ಮ ಭವಿಷ್ಯಕ್ಕಾಗಿ ಕಾಲ್ನಡಿಗೆ ಜಾಥಾ ಎಂಬ ಘೋಷಣೆಗಳು ಮೊಳಗಿದವು. ವಿದ್ಯಾರ್ಥಿಗಳು, ಯುವಕರು, ಸ್ವಯಂಸೇವಕರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಫಲಕಗಳನ್ನು ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದರು.ಈ ಜಾಥಾದಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್‌, ಪರಿಸರ ಅಧಿಕಾರಿ ಆರ್‌. ಭಾಸ್ಕರ್, ಸ್ಕೌಟ್ಸ್ ಮತ್ತು ಗೈಡ್ಸ್ ಮುಖಂಡರಾದ ವೈ.ಎಸ್. ವೀರಭದ್ರಪ್ಪ, ಎಚ್. ಜಿ. ಕಾಂಚನಮಾಲಾ, ಆರ್‌.ಜೆ. ಗಿರೀಶ್, ಎಚ್.ಎಂ. ಪ್ರಿಯಾಂಕ, ಭಾರತ್ ಸೇವಾದಳದ ಸಂಘಟಕಿ ವಿ.ಎಸ್. ರಾಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಪರಿಸರ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಲಾವಿದ ಹಾಗೂ ಪ್ರಶಸ್ತಿ ವಿಜೇತ ಬಿ.ಟಿ. ಮಾನವ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸತತ 3ನೇ ದಿನವೂ ದಿಲ್ಲೀಲಿ ಡಿಕೆಶಿ ರಾಜ್ಯಾಭಿವೃದ್ಧಿ ಮಂತ್ರ
27 ಪಡಿತರ ಗೋದಾಮುಗಳ ಮೇಲೆ ಲೋಕಾಯುಕ್ತ ದಾಳಿ