ಬಣ್ಣದಲ್ಲಿ ಮಿಂದೆದ್ದ ಕರಾವಳಿ ನಗರಿ

KannadaprabhaNewsNetwork |  
Published : Mar 05, 2026, 02:15 AM IST
 | Kannada Prabha

ಸಾರಾಂಶ

ಕರಾವಳಿ ನಗರಿ ಕಾರವಾರದಲ್ಲಿ ಬಣ್ಣಗಳ ಹಬ್ಬ ಹೋಳಿಯನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದ ಸಾರ್ವಜನಿಕರು । ತಮಟೆ ವಾದನಕ್ಕೆ ಯುವಕರ ತಂಡ ಹೆಜ್ಜೆ

ಕನ್ನಡಪ್ರಭವಾರ್ತೆ ಕಾರವಾರ

ಕರಾವಳಿ ನಗರಿ ಕಾರವಾರದಲ್ಲಿ ಬಣ್ಣಗಳ ಹಬ್ಬ ಹೋಳಿಯನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಈ ಬಾರಿ ಹೋಳಿ ಹುಣ್ಣಿಮೆಯ ದಿನವೇ ಚಂದ್ರಗ್ರಹಣವಿದ್ದ ಹಿನ್ನೆಲೆ ಒಂದು ದಿನ ತಡವಾಗಿ ಅಂದರೆ ಬುಧವಾರದಂದು ಸಾರ್ವಜನಿಕರು ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಹಬ್ಬದ ಸಡಗರದಲ್ಲಿ ಮಿಂದೆದ್ದರು.ಸಂಪ್ರದಾಯದಂತೆ ಹುಣ್ಣಿಮೆಯ ಹಿಂದಿನ ದಿನ ಸೋಮವಾರ ರಾತ್ರಿಯೇ ಕಾಮದಹನ ನೆರವೇರಿಸಲಾಗಿತ್ತು. ಬುಧವಾರ ಬೆಳಗ್ಗೆಯಿಂದಲೇ ನಗರದ ಗಲ್ಲಿ ಗಲ್ಲಿಗಳಲ್ಲಿ ಬಣ್ಣದೋಕುಳಿ ಆರಂಭವಾಯಿತು. ಪುಟಾಣಿ ಮಕ್ಕಳು ಪಿಚಕಾರಿ ಹಿಡಿದು ರಂಗು ಚೆಲ್ಲಿದರೆ, ಯುವಕರ ತಂಡಗಳು ತಮಟೆ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು.

ನಗರದ ಸೋನಾರವಾಡದ ಗುಜರಾತಿ ತಾಂಡಾದಲ್ಲಿ ಗುಜರಾತಿ ಸಮುದಾಯದವರು ಪ್ರತಿವರ್ಷದಂತೆ ಹೋಳಿ ಹಬ್ಬವನ್ನು ಕುಟುಂಬ ಸಮೇತರಾಗಿ ಆಚರಣೆ ಮಾಡಿದ್ದು, ತಮ್ಮ ಸಾಂಪ್ರದಾಯಿಕ ನೃತ್ಯದ ಮೂಲಕ ಗಮನ ಸೆಳೆದರು. ಮಹಿಳೆಯರು ಮತ್ತು ಯುವತಿಯರು ಸಹ ಸಿನಿಮಾ ಹಾಡುಗಳಿಗೆ ಡಾನ್ಸ್ ಮಾಡುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಯಾವುದೇ ಭೇದ-ಭಾವವಿಲ್ಲದೇ ಬಣ್ಣಗಳನ್ನು ಹಚ್ಚಿಕೊಂಡು ಹಬ್ಬವನ್ನು ಸಂಭ್ರಮಿಸಿದ್ದು ಕಂಡುಬಂತು.

ಬಣ್ಣದಾಟ ಮುಗಿಸಿದ ಸಾವಿರಾರು ಮಂದಿ ನೇರವಾಗಿ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ತೆರಳಿ ಅರಬ್ಬೀ ಸಮುದ್ರದಲ್ಲಿ ಮುಳುಗೇಳುವ ಮೂಲಕ ಎಂಜಾಯ್ ಮಾಡಿದರು. ಸಮುದ್ರ ತೀರವು ಜನಸಾಗರದಿಂದ ತುಂಬಿತ್ತು.ಸಮುದ್ರ ಸ್ನಾನಕ್ಕೆ ಹರಿದುಬಂದ ಭಾರಿ ಜನಸ್ತೋಮದ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಸಮುದ್ರದ ಆಳಕ್ಕೆ ಯಾರೂ ಹೋಗದಂತೆ ಬೋಟ್ ಮೂಲಕ ನಿರಂತರ ಗಸ್ತು ತಿರುಗುತ್ತಾ ಭದ್ರತೆ ಒದಗಿಸಿದರು. ಕಡಲತೀರದಲ್ಲಿ ಪೊಲೀಸ್ ಹಾಗೂ ಹೋಂಗಾರ್ಡ್ ಸಿಬ್ಬಂದಿ ನೀರಿಗೆ ಇಳಿದವರಿಗೆ ಅಲೆಗಳ ಎಚ್ಚರಿಕೆ ನೀಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಹೋಳಿ ಸಂಭ್ರಮಕ್ಕೆ ಅಡ್ಡಿಯಾದ ಗ್ರಹಣ

ಪ್ರತಿವರ್ಷ ಕಾರವಾರದಾದ್ಯಂತ ಹೋಳಿ ಹಬ್ಬವನ್ನು ಒಂದೇ ದಿನ ಆಚರಣೆ ಮಾಡಿ ಸಂಭ್ರಮಿಸಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ಹೋಳಿ ಹುಣ್ಣಿಮೆಯಂದೇ ಚಂದ್ರಗ್ರಹಣ ಸಂಭವಿಸಿದ್ದರಿಂದ ಬಹುತೇಕರು ಗ್ರಹಣದ ಮರುದಿನ ಹೋಳಿ ಆಚರಣೆ ಮಾಡಿದರು. ಆದರೆ ಇನ್ನೂ ಕೆಲವರು ಹುಣ್ಣಿಮೆಯಂದೇ ಹೋಳಿ ಆಡಿದ್ದರಿಂದಾಗಿ, ವರ್ಷಂಪ್ರತಿಯಂತೆ ಕಂಡುಬರುತ್ತಿದ್ದ ಉತ್ಸಾಹ, ಜನದಟ್ಟಣೆ ನಗರದಲ್ಲಿ ಕಂಡುಬರಲಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಳಿ ಸಮುದಾಯದ ಮಕ್ಕಳಿಂದ ಗೌರಿ ದಬಾಳ್
ರಾಜ್ಯ ಬಜೆಟ್‌ ಮೇಲೆ ಕೊಪ್ಪಳದ್ದು ಬೆಟ್ಟದಷ್ಟು ನಿರೀಕ್ಷೆ