ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಲ್ಕು ನಾಡು ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಹೂಗಳು ಸಂಪೂರ್ಣವಾಗಿ ಅರಳದೆ ಬಿಸಿಲಿನ ಝಳಕ್ಕೆ ಮುದುಡುತ್ತಿವೆ. ಕೆಲವೆಡೆ ಹೂಗಳು ಅರ್ಧಂಬರ್ಧ ಅರಳಿ ಕೆಂಪಾಗಿವೆ.ಹತ್ತು ದಿನಗಳ ಹಿಂದೆ ಬೆಳಗಿನ ಜಾವ ಹಲವಡೆ ತುಂತುರು ಮಳೆಯಾಗಿದೆ. ಕಾಫಿ ಹೂಗಳು ಅರಳುವ ಸಮಯ ಇದಾಗಿದ್ದು ಬಿದ್ದ ಅಲ್ಪ ಮಳೆಯಿಂದ ಮೊಗ್ಗುಗಳು ಮುಂದೆ ಬಂದು ಕಮರುತ್ತಿವೆ. ಸಾಮಾನ್ಯವಾಗಿ ಫೆಬ್ರವರಿ ಅಂತ್ಯಕ್ಕೆ ಅಥವಾ ಮಾರ್ಚ್ ತಿಂಗಳಲ್ಲಿ ಮಳೆಯಾಗಿ ಕಾಫಿಯ ಹೂಗಳು ಅರಳಿ ತೋಟಗಳಲ್ಲಿ ಘಮಘಮಿಸುತ್ತವೆ. ಇದೀಗ ಮಾರ್ಚ್ ಅಂತ್ಯಕ್ಕೆ ಬಂದಿದ್ದರೂ ಮಳೆಯಾಗಿಲ್ಲ. ಜಲ ಮೂಲಗಳೆಲ್ಲ ನೀರಿಲ್ಲದೆ ಬರಡಾಗಿದೆ. ಮುಂದಿನ ವರ್ಷದ ಫಸಲನ್ನು ನಿರ್ಧರಿಸುವ ಕಾಫಿಯ ಮೊಗ್ಗುಗಳು ಬಿಸಿಲಿನ ಝಳಕ್ಕೆ ಕರಕಲಾಗುತ್ತಿವೆ.
ಬಿಸಿಲಿನ ತಾಪ ತಾಳಲಾರದೆ ಕಾಳು ಮೆಣಸಿನ ಬಳ್ಳಿಗಳು ಕೂಡ ಒಣಗುತ್ತಿವೆ. ಎಲೆಗಳೆಲ್ಲ ಒಣಗಿ ಬಳ್ಳಿ ಸಂಪೂರ್ಣವಾಗಿ ನಾಶವಾಗುತ್ತಿವೆ. ಮಳೆಯ ಕೊರತೆಯಿಂದ ಕೃಷಿಕರಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದೆ. ಕಾಳುಮೆಣಸಿನ ಬಳ್ಳಿಗಳು ಬಣ್ಣ ಕಳೆದುಕೊಂಡು ಎಲೆಗಳು ಸುಟ್ಟಂತಾಗಿ ಒಣಗುತ್ತಿರುವುದು ಬೆಳೆಗಾರರನ್ನು ಕಂಗೆಡಿಸಿದೆ.ಸುರಿದ ಅಲ್ಪ ಮಳೆಯಿಂದ ಕಾಫಿಯ ಮೊಗ್ಗುಗಳು ಹಲವೆಡೆ ಸಂಪೂರ್ಣವಾಗಿ ಅರಳದೆ ಕೆಂಪಾಗುತ್ತಿವೆ. ಬಲ್ಲಮಾವಟಿ ಗ್ರಾಮ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದ್ದು, ಕಾಫಿ ಹೂಗಳಿಗೆ ಸಾಕಾಗುವಷ್ಟು ಮಳೆ ಸುರಿದಿಲ್ಲ. ಮಳೆಯ ಕೊರತೆಯಿಂದ ಮುಂದಿನ ವರ್ಷದ ಫಸಲಿನ ಮೇಲೆ ತೀವ್ರ ಹೊಡೆತ ಬೀಳುತ್ತದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳೆಗಾರರು ಈ ವರ್ಷ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಯ ಕೊರತೆ ಒಂದೆಡೆಯಾದರೆ ಏರುತ್ತಿರುವ ತಾಪಮಾನ ಕಾಫಿ ಗಿಡಗಳಿಗೆ ಸಮಸ್ಯೆಯಾಗಿದೆ. ಹೂ ಮಳೆ ಇದೀಗ ಆಗಬೇಕಿತ್ತು. ಎಲ್ಲಿಯೂ ಮಳೆಯಾಗಿಲ್ಲ. ಈ ಭಾಗದಲ್ಲಿ ಬಂದ ತುಂತುರು ಮಳೆಯಿಂದ ಕಾಫಿ ಹೂಗಳು ಅರಳುತ್ತಿಲ್ಲ. ನೀರು ಹಾಯಿಸಲು ನೀರಿನ ಮೂಲಗಳೆಲ್ಲ ಬತ್ತಿ ಹೋಗಿವೆ. ರೈತರ ಸಮಸ್ಯೆಗಳಿಗೆ ಸರ್ಕಾರ, ಕಾಫಿ ಮಂಡಳಿ ಸ್ಪಂದಿಸಬೇಕು ಎಂದು ಕಾಫಿ ಬೆಳೆಗಾರ ದೊಡ್ಡ ಪುಲಿಕೋಟು ಗ್ರಾಮದ ಕರವಂಡ ರವಿ ಬೋಪಣ್ಣ ಹೇಳಿದರು.ಕೃಷಿಗೆ ಹೊಳೆ ನೀರನ್ನು ಬಳಕೆ ಮಾಡುವುದಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಕೆಲವು ಬೆಳೆಗಾರರು ಹೊಳೆಗಳಿಂದ ಕೃತಕ ನೀರಾವರಿ ಮೂಲಕ ಹೂವರಳಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದರು. ಜಿಲ್ಲಾಡಳಿತದ ನಿರ್ಬಂಧದಿಂದ ಇದೀಗ ಆ ಅವಕಾಶ ಬೆಳೆಗಾರರಿಗೆ ಇಲ್ಲದಾಗಿದೆ. ಮಳೆಯ ನಿರೀಕ್ಷೆಯಲ್ಲಿ ಸಣ್ಣ ಬಳೆಗಾರರು ತಲೆ ಮೇಲೆ ಕೈಹೊತ್ತು ಆಕಾಶಕ್ಕೆ ದೃಷ್ಟಿ ಇಟ್ಟಿದ್ದಾರೆ. ಕಾಫಿ ಮಂಡಳಿ ಹಾಗೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಲ್ಲಮಾವಟಿ ಗ್ರಾಮದ ಕಾಫಿ ಬೆಳೆಗಾರ ಚಂಗೇಟಿರ ಕುಶಾಲಪ್ಪ ಹೇಳಿದರು.
10 ದಿನಗಳ ಹಿಂದೆ ಕೇವಲ ಐದು ಸೆಂಟ್ಸ್ ಮಳೆ ಸುರಿದಿದೆ. ಇದು ಹೂ ಅರಳಲು ಸಾಕಾಗುತ್ತಿಲ್ಲ.ಮೊಗ್ಗುಗಳು ಮುಂದೆ ಬಂದು ಸರಿಯಾಗಿ ಅರಳದೇ ಇಳುವರಿ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಬಲ್ಲಮಾವಟಿ ಗ್ರಾಮದ ಕಾಫಿ ಬೆಳೆಗಾರ ಅಪ್ಪಚೆಟ್ಟೋಳಂಡ ಮಿಥುನ್ ಮಾಚಯ್ಯ ತಿಳಿಸಿದರು.