ಕನ್ನಡಪ್ರಭ ವಾರ್ತೆ ಮೈಸೂರುಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಮೈಸೂರು ಆಕಾಶವಾಣಿಯಿಂದ ಬಿತ್ತರಗೊಂಡ ಸಣ್ಣ ಕಥೆಗಳ ಸಂಕಲನವೇ ''ಲಾಕ್ ಡೌನ್ ಕಥೆಗಳು''. ಆಕಾಶವಾಣಿಯ ಹಿರಿಯ ಉದ್ಘೋಷಕ ಪ್ರಭುಸ್ವಾಮಿ ಮಳಿಮಠ ಸಂಪಾದಿಸಿದ್ದಾರೆ. ಅವರು ಲಾಕ್ ಡೌನ್ ಸಮಯದಲ್ಲಿ ಮೈಸೂರಿನ ಯಾದವಗಿರಿಯಲ್ಲಿರುವ ಆಕಾಶವಾಣಿ ಕೇಂದ್ರಕ್ಕೆ ಹೋಗುವಾಗ ಬೋಗಾದಿ ರಸ್ತೆಯ ಆಯಿಷ್ ಜಂಕ್ಷನ್ ಬಳಿ ಮೋಟಾರ್ ಸೈಕಲ್ನಲ್ಲಿ ನಿಂತಿದ್ದರು. ನಾಯಿಯೊಂದು ಆಹಾರ ಹಾಕಬಹುದು ಎಂದು ಬರುತ್ತದೆ. ಆದರೆ ಅವರ ಬಳಿ ಯಾವುದೇ ಆಹಾರ ಪದಾರ್ಥ ಇರಲಿಲ್ಲ. ಯಾರೋ ಅಲ್ಲಿಗೆ ಆಹಾರ ತಂದು ನೀಡುತ್ತಿದ್ದು, ಅವರೇ ಬಂದಿರಬಹುದು ಎಂದು ತಿಳಿದು ನಾಯಿ ಬರುತ್ತದೆ. ಇದನ್ನು ಗಮನಿಸಿದ ಉಮೇಶ್ ಅವರು ಉಪ ನಿರ್ದೇಶಕ ಉಮೇಶ್ ಅವರೊಂದಿಗೆ ಚರ್ಚಿಸಿ, ಇದನ್ನು ಕಥೆಯ ರೂಪದಲ್ಲಿ ಕೇಳುಗರೊಂದಿಗೆ ಹಂಚಿಕೊಳ್ಳ ಬಯಸುವೆ ಎಂದಾಗ ಅವರಿಗೆ ಹೊಳೆದಿದ್ದೇ ಈ ಕಥಾ ಸರಣಿ.ನಂತರ ಶ್ರೋತೃಗಳಿಂದ ಲಾಕ್ ಡೌನ್ ಕಥೆಗಳನ್ನು ಆಹ್ವಾನಿಸಿದರು. 160ಕ್ಕೂ ಹೆಚ್ಚು ಕಥೆಗಳು ಬಂದವು. ಇವುಗಳಲ್ಲಿ 75 ಅನ್ನು ಆಕಾಶವಾಣಿಯಲ್ಲಿ ಪ್ರಸಾರ ಮಾಡಿದರು. ಇದೀಗ ಅದು ಕೃತಿಯ ರೂಪದಲ್ಲಿ ಹೊರಬಂದಿದೆ. ಈ ಸಂಕಲನದಲ್ಲಿ 75 ಕಥೆಗಳಿವೆ. ಬಹುತೇಕವು ಎರಡು ಪುಟಗಳಿವೆ. ಕೆಲವೊಂದು ಒಂದೇ ಪುಟಕ್ಕೆ ಸೀಮಿತವಾಗಿದ್ದರೆ, ಮತ್ತೆ ಕೆಲವು ಮೂರು ಪುಟಗಳಿಗೂ ವಿಸ್ತರಿಸಿವೆ. ಬಹುತೇಕ ತಾವು ಅನುಭವಿಸಿದ, ನೋಡಿದ ಅಥವಾ ಕೇಳಿದ ಘಟನೆಗಳು ಇಲ್ಲಿ ಸಣ್ಣ ಸಣ್ಣ ಕಥೆಗಳಾಗಿವೆ.
ಪರಿಸರ, ಪಶುಪಕ್ಷಿ, ಜನರ ಸ್ಥೈರ್ಯ, ಪೊಲೀಸ್, ಆರೋಗ್ಯ ಇಲಾಖೆಯ ಸೇವೆ, ಯಾವುದೇ ಪ್ರತಿಫಲ ಬಯಸದೇ ಸೇವೆ ಮಾಡಿದ ಸ್ವಯಂಸೇವಾ ಸಂಸ್ಥೆಗಳು, ಸಮಾಜ ಸೇವಕರ ಕಾರ್ಯವೈಖರಿ, ಗೃಹ ಪ್ರವೇಶ ಮಾಡಿ, ಹಳೆಯ ಮನೆಯಿಂದ ವಸ್ತುಗಳನ್ನು ಸ್ಥಳಾಂತರಿಸುವ ಮುನ್ನಾ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಟಿವಿ, ಫ್ರಿಡ್ಜ್ ಇಲ್ಲದೇ ಜೀವನ ಸಾಗಿದ್ದು, ಮದುವೆಗೆ ಹೋಗಲಾಗದೇ ಪರಿತಪಿಸಿದ್ದು, ಯಾರೋ ಆಪ್ತರು ತೀರಿಕೊಂಡಾಗ ಅಂತ್ಯಸಂಸ್ಕಾರಕ್ಕೂ ಹೋಗಲಾರದಂಥ ದುಸ್ಥಿತಿ, ಸಣ್ಣಪುಟ್ಟ ವ್ಯಾಪಾರಸ್ಥರು ಜೀವನೋಪಾಯಕ್ಕಾಗಿ ಸೊಪ್ಪು- ತರಕಾರಿ ಮಾರಾಟಕ್ಕಿಳಿದಿದ್ದು ಹೀಗೆ ಎಲ್ಲವೂ ಇಲ್ಲಿ ಕಥೆಗಳಾಗಿವೆ. ಇದಲ್ಲದೇ ಕೋವಿಡ್ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚು ದಿನಸಿಯನ್ನು ಖರೀದಿಸಿ, ಇಡಲು ಜಾಗವಿಲ್ಲದೆ ದೇವರ ಮನೆಯಲ್ಲಿಟ್ಟು. ಅದನ್ನು ತಿನ್ನುತ್ತಿದ್ದ ಮೂಷಿಕ ಸಂಹಾರಕ್ಕೆ ಪರದಾಡಿದ್ದು, ವರ್ಕ್ ಫ್ರಂ ಹೋಂ ಇದ್ದಿದ್ದರಿಂದ ಕಚೇರಿಯ ಕಂಪ್ಯೂಟರ್ನ ಪಾಸ್ ವರ್ಡ್ ಮರೆತಿದ್ದು, ಗಂಡನಿಗೆ ಪ್ರೀತಿಯಿಂದ ಬಿಸಿಬಿಸಿಯಾದ ಉಪಾಹಾರ ಮಾಡಿಕೊಟ್ಟು ನಂತರ ಬಟ್ಟೆ ಒಗೆಯಲು ಹೇಳಿದ್ದು, ಡೈವೋರ್ಸ್ ಗೆ ಮುಂದಾಗಿದ್ದ ಪತಿ- ಪತ್ನಿ ಲಾಕ್ಡೌನ್ ಸಮಯದಲ್ಲಿ ಪರಸ್ವರ ಅರ್ಥಮಾಡಿಕೊಂಡು ಮತ್ತೆ ಒಂದಾಗಿದ್ದು. ಗೌರಿ ಎಂಬ ಹಸು ನಿರ್ಮಾಣ ಹಂತದ ಕಟ್ಟಡದಲ್ಲಿ ರೆಸ್ಟ್ ಮಾಡಲು ಹೋಗಿ ಲಾಕ್ ಡೌನ್ ಆಗಿದ್ದು, ನಂತರ ಉಪಾಯದಿಂದ ಹೊರ ತೆಗೆದಿದ್ದು, ಮೊದಲ ಬಾರಿ ಆನ್ ಲೈನ್ ಕ್ಲಾಸ್ ಮಾಡಲು ಹೋಗಿ ಶಿಕ್ಷಕಿ ಒದ್ದಾಡಿದ್ದು ಮತ್ತಿತರ ಸ್ವಾರಸ್ಯಕರ ಸಂಗತಿಗಳು ಇವೆ. ಇರುವ ಪದಾರ್ಥಗಳನ್ನು ಅಡ್ಜಸ್ಟ್ ಮಾಡಿಕೊಂಡು ಕಾಲದೂಡಿದ ಪ್ರಸಂಗಳು ಇವೆ. ಎಲ್ಲವೂ ಪುಟ್ಟ, ಪುಟ್ಟ ಪ್ರಸಂಗಗಳಾಗಿರುವುದರಿಂದ ಓದಿಸಿಕೊಂಡು ಹೋಗುತ್ತವೆ. ಜೊತೆಗೆ ಲಾಕ್ ಡೌನ್ ಸಮಯದಲ್ಲಿ ನಮಗೂ ಈ ರೀತಿ ಅನುಭವ ಆಗಿದ್ದು ಅಲ್ಲವೇ? ಎಂದು ಎನಿಸುವಂತೆ ಇವೆ. ಇಲ್ಲಿ ಈಗಾಗಲೇ ಬರೆಯುತ್ತಿರುವ ಲೇಖಕರ ಜೊತೆಗೆ ಕೆಲವು ಹೊಸ ಕಥೆದಾರರು ಹುಟ್ಟಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಈ ಕಥಾಸರಣಿಯಿಂದ ಉಪಯೋಗ ಆಗಿದೆ ಎನ್ನಬಹುದು. ಈ ಕೃತಿಯನ್ನು ಸಂವಹನ ಪ್ರಕಾಶಕರು ಪ್ರಕಟಿಸಿದ್ದು, ಆಕಾಶವಾಣಿ ಉಪ ನಿರ್ದೇಶಕ ಎಸ್.ಎಸ್. ಉಮೇಶ್ ಅವರ ಸದಾಶಯದ ಮಾತು, ಯುವಸಾಹಿತಿ ರಾಜಶ್ರೀ ಟಿ. ಪೆರ್ಲ ಅವರ ಮುನ್ನುಡಿ, ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಕ ದಿವಾಕರ ಹೆಗಡೆ ಅವರ ಬೆನ್ನುಡಿ ಇದೆ. ಆಸಕ್ತರು ಡಿ.ಎನ್. ಲೋಕಪ್ಪ, ಮೊ. 99026 39593 ಸಂಪರ್ಕಿಸಬಹುದು.-- ಬಾಕ್ಸ್------ ನಾಳೆ ಬಿಡುಗಡೆ--ಸಂವಹನ ಪ್ರಕಾಶಕರು, ಮೈಸೂರು ಆಕಾಶವಾಣಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಜು.20 ರಂದು ಸಂಜೆ 4.30ಕ್ಕೆ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಲಾಕ್ ಡೌನ್ ಕಥೆಗಳು ಕೃತಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಬಿಡುಗಡೆ ಮಾಡುವರು. ಮಂಡ್ಯದ ಲೇಖಕಿ ಶುಭಶ್ರೀ ಪ್ರಸಾದ್ ಕೃತಿ ಕುರಿತು ಮಾತನಾಡುವರು.ಆಕಾಶವಾಣಿ ಉಪ ನಿರ್ದೇಶಕ ಎಸ್.ಎಸ್. ಉಮೇಶ್ ಅಧ್ಯಕ್ಷತೆ ವಹಿಸುವರು. ಆಕಾಶವಾಣಿಯ ಅಬ್ದುಲ್ ರಶೀದ್, ಪ್ರಭುಸ್ವಾಮಿ ಮಳಿಮಠ್, ಎನ್. ಕೇಶವಮೂರ್ತಿ, ಮೈಸೂರು ಉಮೇಶ್, ಜಾಂಪಣ್ಣ ಆಶೀಹಾಳ್, ಪ್ರಕಾಶಕ ಡಿ.ಎನ್. ಲೋಕಪ್ಪ, ಕಥೆಗಾರರಾದ ಶೀಲಾ ಸತ್ಯೇಂದ್ರಸ್ವಾಮಿ, ಕೊತ್ತಲವಾಡಿ ಶಿವಕುಮಾರ್ ಭಾಗವಹಿಸುವರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.