ಮುಳುಗಡೆನಗರಿಯಲ್ಲಿ ರಂಗೇರಿದ ರಂಗಿನಾಟ!

KannadaprabhaNewsNetwork |  
Published : Mar 06, 2026, 03:15 AM IST
(ಪೋಟೊ 5 ಬಿಕೆಟಿ 9, ಬಾಗಲಕೋಟೆ ನಗರದಲ್ಲಿ ಗುರುವಾರ ಬಣ್ಣದ ಬಂಡಿಗಳ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯ.) | Kannada Prabha

ಸಾರಾಂಶ

ದೇಶದಲ್ಲಿಯೇ ಖ್ಯಾತಿ ಪಡೆದಿರುವ ಬಾಗಲಕೋಟೆ ಹೋಳಿ ಹಬ್ಬದ ರಂಗಿನಾಟ ಮೊದಲ ದಿನ ಗುರುವಾರ ಅದ್ಧೂರಿಯಾಗಿ ಆರಂಭವಾಗಿದ್ದು, ಬೆಳಗ್ಗೆ ನಿರಸವಾಗಿ ಆರಂಭಗೊಂಡಿದ್ದ ಹೋಳಿ ಮಧ್ಯಾಹ್ನದ ಬಳಿಕ ಕೋಟೆನಗರಿ ಸಂಭ್ರಮದಲ್ಲಿ ತೇಲುವಂತೆ ಮಾಡಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದಲ್ಲಿಯೇ ಖ್ಯಾತಿ ಪಡೆದಿರುವ ಬಾಗಲಕೋಟೆ ಹೋಳಿ ಹಬ್ಬದ ರಂಗಿನಾಟ ಮೊದಲ ದಿನ ಗುರುವಾರ ಅದ್ಧೂರಿಯಾಗಿ ಆರಂಭವಾಗಿದ್ದು, ಬೆಳಗ್ಗೆ ನೀರಸವಾಗಿ ಆರಂಭಗೊಂಡಿದ್ದ ಹೋಳಿ ಮಧ್ಯಾಹ್ನದ ಬಳಿಕ ಕೋಟೆನಗರಿ ಸಂಭ್ರಮದಲ್ಲಿ ತೇಲುವಂತೆ ಮಾಡಿತು.

ಮುಳಗಡೆಯಾದ ಬಳಿಕ ಅಧಿಕೃತವಾಗಿ ನವನಗರ-ವಿದ್ಯಾಗಿರಿ ಭಾಗದಲ್ಲಿ ಹಮ್ಮಿಕೊಂಡಿದ್ದ ಬಣ್ಣದಾಟ ಹೋಳಿ ಉತ್ಸವದ ಸಂತಸ ಇಮ್ಮಡಿಗೊಳಿಸಿತ್ತು. ಬೆಳಗ್ಗೆ 11 ಗಂಟೆಗೆ ನವನಗರ, ವಿದ್ಯಾಗಿರಿ, ಹಳೇ ಬಾಗಲಕೋಟೆ ನಗರದಲ್ಲಿ ಬಣ್ಣದಾಟ ಆರಂಭಗೊಂಡಿತು. ಯುವಕರು, ಮಹಿಳೆಯರು, ಹಿರಿಯರು ಹಲಗೆ ಸಂಭ್ರಮದೊಂದಿಗೆ ಪಾಲ್ಗೊಂಡಿದ್ದರು. ಮಧ್ಯಾಹ್ನ 1 ಗಂಟೆಗೆ ಬಳಿಕ ನವನಗರ, ವಿದ್ಯಾಗಿರಿ ಬಣ್ಣದಲೋಕ ಸೃಷ್ಟಿಯಾಯಿತು.

ನವನಗರದ ಜಿಹ್ವೇಶ್ವರ ದೇವಸ್ಥಾನದಿಂದ ನವನಗರದ ಜನತೆ, ವಿದ್ಯಾಗಿರಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ವಿದ್ಯಾಗಿರಿ ಜನತೆ ಬಣ್ಣದ ಬಂಡಿಗಳ ಮೆರವಣಿಗೆ ಆರಂಭಿಸಿದರು. ನೂರಾರು ಸಂಖ್ಯೆಯಲ್ಲಿದ್ದ ಟ್ರ್ಯಾಕ್ಟರ್, ಎತ್ತಿನ ಬಂಡಿಗಳಲ್ಲಿ ತುರಾಯಿ ಹಲಗೆ ನೇತೃತ್ವ ನೋಡುಗರಿಗೆ ಮನರಂಜನೆ ನೀಡಿತು. ಕಾಳಿದಾಸ ವೃತ್ತ, ಜಿಲ್ಲಾ ಆಸ್ಪತ್ರೆ ವೃತ್ತ, ನಗರಸಭೆ, ಬಸವೇಶ್ವರ ಸಹಕಾರಿ ಬ್ಯಾಂಕ್ ರಸ್ತೆಯಲ್ಲಿ ಪರಸ್ಪರ ಸಮಾಗಮಗೊಳ್ಳುವ ದೃಶ್ಯ ಬಾಗಲಕೋಟೆ ಹೋಳಿ ಗತವೈಭವ ಸಾರಿತು.

ಮೊದಲ ದಿನದ ಕಿಲ್ಲಾಗಲ್ಲಿಯ ರಂಗಿನಾಟ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು. ಮಹಿಳೆಯರು, ಮಕ್ಕಳು, ಯುವಕರು ಬಣ್ಣದೋಕುಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರಮುಖ ಜನದಟ್ಟನೆ ಪ್ರದೇಶಗಳಲ್ಲಿ ಓಕುಳಿ ಆಡಿ ಯುವಕರು ಸಂಭ್ರಮಿಸಿದರು.

ರಂಗಿನ ಆಟದ ಪರಿಣಾಮ ಇಡೀ ಬಾಗಲಕೋಟೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದವು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಪ್ರಮುಖ ಪ್ರದೇಶಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬೆಳಗ್ಗಯಿಂದ ಮಕ್ಕಳು ಹಲಿಗೆ ಬಾರಿಸುವುದು ಬಣ್ಣ ಆಡುವುದು ಸಾಮಾನ್ಯವಾಗಿತ್ತು. ಮಧ್ಯಾಹ್ನದ ವೇಳೆಗೆ ಸ್ಪಲ್ಪ ಹೆಚ್ಚು ರಂಗು ಕಾಣಿಸಿತು. ಬಣ್ಣದ ನೀರು ತುಂಬಿಕೊಂಡು ಪ್ರಮುಖ ರಸ್ತೆಗಳಲ್ಲಿ ಓಕುಳಿಯಾಡುತ್ತ ಜನರನ್ನು ರಂಜಿಸಿದರು.

ಯುವಕರು ಪರಸ್ಪರ ಬಣ್ಣದ ನೀರು ಎರೆಚುತ್ತ ಸಂಭ್ರಮಿಸಿದರು. ಸಡಗರದಲ್ಲಿ ಹಲಿಗೆ ಸಪ್ಪಳವೂ ಸೇರಿಕೊಂಡು ಹಬ್ಬದ ರಂಗೇರಿತು. ವಿವಿಧ ಬಡಾವಣೆಗಳಲ್ಲಿ ಯುವತಿಯರು ಪರಸ್ಪರ ಗುಲಾಲ್ ಎರಚಿ ಹಬ್ಬಕ್ಕೆ ಕಳೆ ತಂದರು. ಬಣ್ಣದ ಬಂಡಿಗಳ ಜೊತೆಗೆ ಕೇ ಕೇ ಹಾಕುತ್ತಾ ಯುವಕರು ಸಾಗಿದರು. ಆಕರ್ಷಕ ಸಾಂಪ್ರದಾಯಕ ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು. ಮೊದಲ ದಿನ ಕೋಟೆನಗರಿ ರಂಗಿನಾಟ ನೋಡುಗರನ್ನು ಸೆಳೆಯಿತು.

ಇಂದು ಬಣ್ಣದ ಬಂಡಿಗಳ ಸಮಾಗಮ:

ಶುಕ್ರವಾರ 2ನೇ ದಿನ ಬಣ್ಣದ ರಂಗು ಮತ್ತಷ್ಟು ರಂಗು ಪಡೆಯಲಿದೆ. ಹಳಪೇಟ, ಜೈನ್‌ಪೇಟ ಮತ್ತು ವೆಂಕಟಪೇಟ ಬಣ್ಣದೋಕುಳಿ ನಡೆಯಲಿದೆ. ಓಣಿಗಳಲ್ಲಿ ಓಕುಳಿ ಆಡಿದ ನಂತರ ಬಣ್ಣದ ಬಂಡಿಗಳು ಬಸವೇಶ್ವರ ವೃತ್ತದಿಂದ ಕಾಲೇಜು ವೃತ್ತದವರೆಗೆ ಎದುರು ಬದುರು ಸಮಾಗಮಗೊಳ್ಳಲಿವೆ. ಪರಸ್ಪರ ಬಣ್ಣ ಎರೆಚುವ ಮೂಲಕ ಹಬ್ಬದ ರಂಗು ಮತ್ತೇರುವಂತೆ ಮಾಡಲಿದ್ದಾರೆ. ಆಕರ್ಷಕವಾದ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ರಸ್ತೆಯ ಎಡಬದಿಯಲ್ಲಿ ಗುಂಪು ಗುಂಪಾಗಿ ಸೇರುವ ನಿರೀಕ್ಷೆ ಇದೆ. ಬಸವೇಶ್ವರ ವೃತ್ತದಲ್ಲಿ ಬಣ್ಣದ ಕಾರಂಜಿ, ಡಿಜೆ ಸೌಂಡ, ಹಲಗೆ ನಿನಾದ ಹಬ್ಬದ ಕಳೆ ಮೇಳೈಸುವಂತೆ ಮಾಡಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸನಾತನ ಪರೀಕ್ಷೆಗೊಳಗಾದ್ರೂ ಅಳಿಸಲಸಾಧ್ಯ: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್
ಕೆನರಾ ಕಾಲೇಜಿಗೆ 2025-26ನೇ ಸಾಲಿನಿಂದ ಸ್ವಾಯತ್ತ ಸ್ಥಾನಮಾನ