ಮೂರು ದಿನಗಳ ದಸರಾ ಮಹೋತ್ಸವಕ್ಕೆ ವರ್ಣರಂಜಿತ ತೆರೆ

KannadaprabhaNewsNetwork | Published : Oct 19, 2023 12:45 AM

ಸಾರಾಂಶ

ಮೂರು ದಿನಗಳ ದಸರಾ ಮಹೋತ್ಸವಕ್ಕೆ ವರ್ಣರಂಜಿತ ತೆರೆ
- ಇತಿಹಾಸ, ಪರಂಪರೆ, ಸಂಸ್ಕೃತಿ ಉಳಿವಿಗಾಗಿ ದಸರಾ ಆಚರಣೆ: ಸಚಿವ ಕೃಷ್ಣ ಭೈರೇಗೌಡ ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ ಪಟ್ಟಣದಲ್ಲಿ ನಡೆದ ಮೂರು ದಿನಗಳ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವಕ್ಕೆ ಬುಧವಾರ ರಾತ್ರಿ ವರ್ಣ ರಂಜಿತ ತೆರೆ ಬಿದ್ದಿತು. ಜಂಬೂ ಸವಾರಿ ಮೆರವಣಿಗೆ ಮೂಲಕ ಆರಂಭಗೊಂಡ ದಸರಾ ಮಹೋತ್ಸವವು ಕಲಾ ತಂಡಗಳ ಮೆರವಣಿಗೆ ಸೇರಿದಂತೆ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ, ಜನಪದ ಕಲಾತಂಡಗಳು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಕಲಾವಿದರು ಪ್ರದರ್ಶನ ನೀಡುವ ಮೂಲಕ ದಸರಾ ಮಹೋತ್ಸವದ ವೈಭವವನ್ನು ಹೆಚ್ಚಿಸಿದರು. ಅಂತಿ ದಿನವಾದ ಬುಧವಾರ ಸಮಾರೋಪ ಸಮಾರಂಭದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಗುರು ಹಿರಿಯರು ಮತ್ತು ಚುನಾಯಿತ ಪ್ರತಿನಿಧಿಗಳು ಪ್ಲಾಷ್ಟಿಕ್ ಮುಕ್ತ ಸಂದೇಶ ನೀಡುವ ಮೂಲಕ ದಸರಾ ಮಹೋತ್ಸವಕ್ಕೆ ವರ್ಣ ರಂಚಿತ ತೆರೆ ಎಳೆದದರು. ಇತಿಹಾಸ, ಪರಂಪರೆ, ಸಂಸ್ಕೃತಿ ಉಳಿವಿಗಾಗಿ ದಸರಾ ಆಚರಣೆ: ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ನಾಡಿನಲ್ಲಿ ಮಳೆ ಕೊರತೆಯಿಂದ ಸಂಕಷ್ಟದ ದಿನಗಳನ್ನು ಎದುರುಸುತ್ತಿದ್ದರೂ ಹಲವು ವರ್ಷಗಳಿಂದ ನಡೆದು ಬಂದಿರುವ ದಸರಾ ಹಬ್ಬ ಆಚರಣೆ ಮಾಡುತ್ತಿರುವುದು ಖುಷಿ ತಂದಿದೆ ಎಂದರು. ನಾಡಿನ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ದಸರಾ ಆಚರಣೆ ಮಾಡುತ್ತಿದ್ದೇವೆ. ನಾಡಿನ ಸಂಸ್ಕೃತಿ ಬಿಂಬುಸುವಲ್ಲಿ ಮೈಸೂರು ದಸರಾ ಪ್ರಮುಖವಾಗಿದೆ. 1610ರಲ್ಲಿ ಶ್ರೀರಂಗಪಟ್ಟಣ ದಸರಾ ಆಚರಣೆ ಮಾಡಲಾಗಿತ್ತು. ಬಳಿಕ ಮೈಸೂರಿಗೆ ವರ್ಗಾವಣೆಯಾಗಿ ದಸರಾ ಆಚರಣೆ ವಿಶ್ವ ವಿಖ್ಯಾತವಾಗಿದೆ. ಇದೀಗ ಮತ್ತೆ ಶ್ರೀರಂಪಟ್ಟಣದಲ್ಲಿ ಕಳೆದ 16 ವರ್ಷಗಳಿಂದ ದಸರಾ ಆಚರಣೆ ಮುಂದುವರೆಸಿಕೊಂಡು ಬರುತ್ತಿದೆ ಎಂದರು. ದಸರಾ ಹಬ್ಬ ದೇಶದ ಹಬ್ಬವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಆಚರಣೆ ಮಾಡಲಾಗುತ್ತಿದೆ. ಈ ಹಬ್ಬಕ್ಕೆ ಯಾವುದೇ ಜಾತಿ, ಬೇದವಿಲ್ಲ. ಎಲ್ಲಾ ಧರ್ಮದ ಜನರು ಸಹ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಪ್ರಸ್ತುತ ದಿನಗಳಲ್ಲಿ ಎಲ್ಲವನ್ನು ಹಣದಿಂದಲೇ ಅಳೆಯುತ್ತಿದ್ದೇವೆ. ಆದರೆ, ನಮ್ಮ ಭಾಷೆ, ಪರಂಪರೆ, ಸಂಸ್ಕೃತಿ, ಕಲೆ ನಮ್ಮನ್ನು ಅಳೆಯುವಂತಾಗಬೇಕು. ಮುಂದಿನ ದಿನಗಳಲ್ಲಿ ಮೈಸೂರು ದಸರಾ ಹೋಲುವಂತೆ ಶ್ರೀರಂಗಪಟ್ಟಣದಲ್ಲೂ ಅದ್ದೂರಿಯಾಗಿ ಆಚರಣೆ ಮಾಡುವಂತಾಗಲಿ ಎಂದು ಶುಭಹಾರೈಸಿದರು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಮೂರು ದಿನದ ದಸರಾ ಹಬ್ಬವನ್ನು ಆಡಳಿತಾತ್ಮಕವಾಗಿ ಆಚರಿಸಿದ್ದೇವೆ. ದಸರಾ ಆಚರಣೆಗೆ ಸರ್ಕಾರದ ಹಣವನ್ನು ಬಳಕೆ ಮಾಡಿ ಅದ್ದೂರಿಯಾಗಿ ಆಚರಣೆ ಮಾಡಿಲ್ಲ. ಬದಲಾಗಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹಾಗೂ ಶುಭ ಆರೈಕೆಯಿಂದಾಗಿ ಅದ್ದೂರಿಯಾಗಿ ಕಾಣುತ್ತಿದೆ ಎಂದರು. ಬರಗಾಲದ ಪರಿಸ್ಥಿತಿಯಲ್ಲಿ ರೈತರನ್ನು ನಮ್ಮ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿಲ್ಲ. ಬದಲಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಬಾರದು ಎಂಬ ಉದ್ದೇಶದಿಂದ ನೀರು ಬಿಡಿಲಾಗಿದೆ. ನಮ್ಮ ಸರ್ಕಾರ ನಾಡಿನ ರೈತರ ಹಾಗೂ ಸಾರ್ವಜನಿಕರ ಹಿತ ಕಾಯಲು ಮುಂದಾಗಿದ್ದೇವೆ ಎಂದು ಹೇಳಿದರು. ಶಾಸಕ ರಮೇಶಬಂಡಿಸಿದ್ದೇಗೌಡಮಾತನಾಡಿ, ದಸರಾ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಅಧಿಕಾರಿಗಳು ಹಾಗೂ ಚುನಾಯಿತಿ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್‌ಗೂಳಿಗೌಡ, ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ, ಜಿಲ್ಲಾಧಿಕಾರಿ ಡಾ. ಕುಮಾರ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಎಸ್ಪಿ ಯತೀಶ್, ಅಪರ ಜಿಲ್ಲಾಧಿಕಾರಿ ಎಚ್.ಎಲ್ .ನಾಗರಾಜು, ಪಾಂಡವಪುರ ಎಸಿ ನಂದೀಶ್, ತಹಸೀಲ್ದಾರ್ ಅಶ್ವಿನಿ, ಪುರಸಭಾ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು. 18ಕೆಎಂಎನ್ ಡಿ33,34 ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿದರು. ಶ್ರೀರಂಗಪಟ್ಟಣ ಸಮಾರೋಪ ಸಮಾರಂಭದಲ್ಲಿ ಪ್ಲಾಷ್ಟಿಕ್ ಮುಕ್ತ ಸಂದೇಶ ನೀಡುವ ಮೂಲಕ ದಸರಾ ಮಹೋತ್ಸವಕ್ಕೆ ವರ್ಣ ರಂಚಿತ ತೆರೆ ಎಳೆಯಲಾಯಿತು.

Share this article