ರಕ್ತ ಸಂಗ್ರಹದಲ್ಲಿ ಮಿಮ್ಸ್ ರಾಜ್ಯಕ್ಕೆ ಎರಡನೇ ಸ್ಥಾನ: ಡಾ.ಪಿ.ಎಸ್.ತಮ್ಮಣ್ಣ

KannadaprabhaNewsNetwork | Published : Oct 19, 2023 12:45 AM

ಸಾರಾಂಶ

ರಕ್ತ ಸಂಗ್ರಹದಲ್ಲಿ ಮಿಮ್ಸ್ ರಾಜ್ಯಕ್ಕೆ ಎರಡನೇ ಸ್ಥಾನ: ಡಾ.ಪಿ.ಎಸ್.ತಮ್ಮಣ್ಣ
- ಮಿಮ್ಸ್ ಸಾಧನೆಗೆ ಸಂಘ-ಸಂಸ್ಥೆಗಳ ಸಹಕಾರ ಕಾರಣ - ಜ್ಞಾನಸಾಗರ ಕ್ಯಾಂಪಸ್‌ನಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಕನ್ನಡಪ್ರಭ ವಾರ್ತೆ ಮಂಡ್ಯ ರಕ್ತ ಸಂಗ್ರಹದಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ಕೇಂದ್ರ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಮಿಮ್ಸ್ ಪ್ರಾಂಶುಪಾಲ ಡಾ.ಪಿ.ಎಸ್. ತಮ್ಮಣ್ಣ ಹೇಳಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಮೇಧ ಎಜುಕೇಷನ್ ಫರ್ಮ್, ಮಾಂಡವ್ಯ ನಗರ ಲಯನ್ಸ್ ಸಂಸ್ಥೆ, ರಕ್ತನಿಧಿ ಕೇಂದ್ರ ಮಿಮ್ಸ್, ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಮತ್ತು ಮಾಂಡವ್ಯ ಬಿಇಡಿ ಕಾಲೇಜು ವತಿಯಿಂದ ಜ್ಞಾನಸಾಗರ ಕ್ಯಾಂಪಸ್ ಆವರಣದಲ್ಲಿ ನಡೆದ ವಿಶ್ವ ಹೃದಯ ದಿನ, ವಿಶ್ವ ಪ್ರಥಮ ಚಿಕಿತ್ಸಾ ದಿನ, ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮಿಮ್ಸ್ ರಕ್ತನಿಧಿ ಕೇಂದ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗುತ್ತಿದೆ. ಇದಕ್ಕೆ ರೆಡ್‌ಕ್ರಾಸ್ ಸಂಸ್ಥೆ, ನೆಲದನಿ ಬಳಗ ಸೇರಿದಂತೆ ಹಲವು ಸಂಘ ಸಂಸ್ಥೆಗಳೇ ಕಾರಣವಾಗಿವೆ. ಬೇಡಿಕೆಯಷ್ಟು ರಕ್ತ ಸಂಗ್ರಹವಾದಲ್ಲಿ ಹೆಚ್ಚು ಜನರ ಪ್ರಾಣ ಉಳಿಯುತ್ತದೆ. ಎಲ್ಲರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬಹುದು ಎಂದು ಸಲಹೆ ನೀಡಿದರು. ಕೃಷಿಕ್ ಲಯನ್ಸ್ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ಪ್ರತಿ ವರ್ಷ ೧.೭೦ ಕೋಟಿ ಜನ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಜಾಗತಿಕವಾಗಿ ಶೇ.೩೦ರಷ್ಟು ಮಂದಿ ಸಾಯುತ್ತಿದ್ದಾರೆ. ಹಾಗಾಗಿ ಹೃದಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ. ಹೃದಯ ಸ್ಥಂಭನವಾದಾಗ ಹೇಗೆ ಅವರಿಗೆ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಇದರಿಂದ ಹೆಚ್ಚು ಮಂದಿಯ ಪ್ರಾಣ ಉಳಿಸಬಹುದು ಎಂದು ಅಭಿಪ್ರಾಯಿಸಿದರು. ತಂದೆ-ತಾಯಿಗಳನ್ನು ಮಕ್ಕಳು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ಈಗ ತಂದೆ-ತಾಯಂದಿರೇ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದ ದುಸ್ಥಿತಿಯಲ್ಲಿ ನಾವಿದ್ದೇವೆ. ಹಾಗಾಗಿ ಪ್ರತಿಯೊಬ್ಬರೂ ಹೃದಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂದು ಸಲಹೆ ನೀಡಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉತ್ತಮ ಸೇವೆ ಮಾಡುತ್ತಿದೆ. ಇದರ ಸೇವಾ ಕಾರ್ಯದಿಂದಾಗಿ ಮೂರು ಬಾರಿ ನೊಬೆಲ್ ಪ್ರಶಸ್ತಿ ಬಂದಿದೆ. ಒಮ್ಮೆ ಸಂಸ್ಥಾಪಕರಿಗೆ ನೊಬೆಲ್ ಪ್ರಶಸ್ತಿ ಬಂದರೆ, ಉಳಿದ ಎರಡು ಬಾರಿ ಸೇವಾ ಕ್ಷೇತ್ರವನ್ನು ಗುರುತಿಸಿ ನೀಡಲಾಗಿದೆ. ವಿಶ್ವದ ಯಾವುದೇ ಸಂಸ್ಥೆಗೆ ಈವರೆವಿಗೆ ಮೂರು ಬಾರಿ ನೊಬೆಲ್ ಪ್ರಶಸ್ತಿ ಬಂದಿರುವ ಉದಾಹರಣೆಗಳಿಲ್ಲ. ಸಾರ್ವಜನಿಕ ಆರೋಗ್ಯಕ್ಕಾಗಿ ರೆಡ್‌ಕ್ರಾಸ್ ಸಂಸ್ಥೆ ಹೆಚ್ಚಿನ ಒತ್ತು ನೀಡಿದೆ ಎಂದರು. ಪ್ರತಿ ವರ್ಷ ೧೬.೬ ಮಿಲಿಯನ್ ಯುನಿಟ್ ರಕ್ತದ ಅಗತ್ಯತೆ ಇದೆ. ಆದರೆ, ನಮ್ಮಲ್ಲಿ ಶೇ.೭೦ರಷ್ಟು ಮಾತ್ರ ರಕ್ತ ಸಂಗ್ರಹವಾಗುತ್ತಿದೆ. ಉಳಿದಂತೆ ರಕ್ತದ ಕೊರತೆ ಕಾಡುತ್ತಿದೆ. ರಕ್ತಕ್ಕೆ ಪರ್‍ಯಾಯವಾದ ಔಷಧ ಇಲ್ಲ. ರಕ್ತವನ್ನು ದಾನಿಗಳ ಮೂಲಕವೇ ಪಡೆಯಬೇಕಾಗುತ್ತದೆ ಎಂದರು. ರಕ್ತದಾನಕ್ಕೆ ಚಾಲನೆ ನೀಡಿದ ಎಸ್‌ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಲವು ಜನರು ಹೃದಯ ಖಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ, ನುರಿತ ತಜ್ಞರಿಂದ ಜಾಗೃತಿ ಮೂಡಿಸಬೇಕು. ಆ ಮೂಲಕ ಈ ರೋಗವನ್ನು ತಡೆಗಟ್ಟಬಹುದು. ರಕ್ತದಾನದ ಬಗ್ಗೆ ಎಲ್ಲರಿಗೂ ಅರಿವು ಮೂಡುತ್ತಿದೆ, ಅದು ಮತ್ತಷ್ಟು ಹೆಚ್ಚಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಭಾರತೀ ರೆಡ್ ಕ್ರಾಸ್ ಸಂಸ್ಥೆ ಮೀರಾ ಶಿವಲಿಂಗಯ್ಯ, ನಿವೃತ್ತ ಪ್ರಾಂಶುಪಾಲ ಶಿವಕುಮಾರ್, ಮಂಡ್ಯ ನಗರ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಬಿ.ಎಸ್.ಶಿವಕುಮಾರ್, ಕೃಷಿಕ್ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಮಂಡ್ಯ ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ಚೇತನ್‌ಕೃಷ್ಣ, ಅಪೊಲ್ಲೋ ಆಸ್ಪತ್ರೆಯ ಡಾ.ಜೆ.ವೀನು, ಡಾ.ಡಿ.ಶಶಿರೇಖಾ, ಪ್ರಾಂಶುಪಾಲರಾದ ಸುಮಾರಾಣಿ ಶಂಭು, ಭವಾನಿ ಶಂಕರ್ ಭಾಗವಹಿಸಿದ್ದರು.

Share this article