ಧಾರವಾಡ:
ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪಕ್ಷಾತೀತವಾಗಿ ಸದಸ್ಯರು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ನಮ್ಮಿಂದ ಕಟ್ಟಡ ಪರವಾನಗಿ ಪಡೆಯುತ್ತಾರೆ. ಆದರೆ, ಯಾರೊಬ್ಬರು ನಿಯಮದಂತೆ ನಿರ್ಮಿಸಿಕೊಳ್ಳುವುದಿಲ್ಲ. ಎಷ್ಟೋ ವಾಣಿಜ್ಯ ಸಂಕೀರ್ಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಮಾಲ್‌ಗಳಲ್ಲೂ ಇದೇ ಪರಿಸ್ಥಿತಿ ಇದೆ. ಇದರಿಂದಾಗಿ ವಾಹನಗಳೆಲ್ಲ ರಸ್ತೆ ಮೇಲೆ ನಿಲುಗಡೆ ಮಾಡುವುದು ಅನಿವಾರ್ಯವಾಗುತ್ತದೆ. ಇದರಿಂದ ನಗರದ ಸೌಂದರ್ಯಕ್ಕೂ ಹೊಡೆತ ಬೀಳುತ್ತದೆ ಎಂದು ಸದಸ್ಯರು ಗಮನ ಸೆಳೆದರು.ಸದಸ್ಯ ತಿಪ್ಪಣ್ಣ ಮಜ್ಜಗಿ, ಎಷ್ಟೋ ಕಟ್ಟಡಗಳು ನಿಯಮ ಉಲ್ಲಂಘಿಸಿಯೂ ಪಾಲಿಕೆಯಿಂದ ಸಿಸಿ ಪಡೆದುಕೊಳ್ಳುತ್ತವೆ. ರಸ್ತೆಗಳೆಲ್ಲ ಇಕ್ಕಟ್ಟಾಗಿವೆ. ಅವುಗಳಲ್ಲೇ ವಾಹನಗಳನ್ನು ಪಾರ್ಕ್ ಮಾಡಿ ಹೋಗುತ್ತಾರೆ. ಇದರಿಂದ ಮತ್ತಷ್ಟು ಸಮಸ್ಯೆ ಎದುರಿಸುವಂತಾಗುತ್ತಿದೆ ಎಂದರು. ಇದಕ್ಕೆ ರಾಧಾಬಾಯಿ ಸಫಾರೆ, ಇಕ್ಬಾಲ್ ನವಲೂರು, ರಾಜಶೇಖರ ಕಮತಿ ಸೇರಿದಂತೆ ಎಲ್ಲರೂ ಧ್ವನಿ ಗೂಡಿಸಿದರು.
ಸದನ ಸಮಿತಿ ರಚನೆ:
ಆಗ ಮಧ್ಯಪ್ರವೇಶಿಸಿದ ಸಭಾನಾಯಕ ಈರೇಶ ಅಂಚಟಗೇರಿ, ಹಳೇಹುಬ್ಬಳ್ಳಿಯಲ್ಲಿನ ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಪ್ರಸ್ತಾವನೆಯನ್ನು ಕಬ್ಬೇರ ಅವರೇ ತಂದಿದ್ದರು. ಅದನ್ನು ಹಸ್ತಾಂತರಿಸಲಾಗಿದೆ. ನಾವು ಖರ್ಚು ಮಾಡಿ ಅಭಿವೃದ್ಧಿ ಪಡಿಸಿದ್ದ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ. ಇದೀಗ ಧಾರವಾಡ ಆಸ್ಪತ್ರೆಯೂ ಅದೇ ರೀತಿ ಆಗಬಾರದು. ಇಲ್ಲಿನ ಆಸ್ಪತ್ರೆ ಅಭಿವೃದ್ಧಿ ಪಡಿಸಿದರೆ ಮುಂದೆ ಆರೋಗ್ಯ ಇಲಾಖೆಗೆ ಹಸ್ತಾಂತರಿಸುವುದಿಲ್ಲ ಎಂದು ನಿರ್ಣಯ ಕೈಗೊಂಡು ಅಭಿವೃದ್ಧಿಗೆ ಯೋಚನೆ ಮಾಡಬೇಕು ಎಂದರು.
ಇದೇ ವೇಳೆ ರಾಜಶೇಖರ್ ಕಮತಿ, ಸಿವಿಲ್ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಭೆ ಗಮನ ಸೆಳೆದರು. ಅದಕ್ಕೆ ಮೇಯರ್ ಆಸ್ಪತ್ರೆ, ಶಾಲೆಗಳಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸರ್ಕಾರಿ ಕಟ್ಟಡಗಳು ಪಾಲಿಕೆ ಅನುಮತಿ ಪಡೆಯಲ್ಲ: ಘಾಳಿ
ಸಭೆಯಲ್ಲಿ ಸದಸ್ಯ ಈರೇಶ ಅಂಚಟಗೇರಿ ಅವರು, ಖಾಸಗಿ ಕಟ್ಟಡ ನಿರ್ಮಾಣಕ್ಕಿರುವ ನಿಯಮಗಳು ಸರ್ಕಾರಿ ಕಟ್ಟಡಗಳಿಗೆ ಅನ್ವಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಘಾಳಿ, ಕಟ್ಟಡ ಎಂದರೆ ಎಲ್ಲವು ಒಂದೇ. ಅವುಗಳಿಗೂ ನಿಯಮಗಳು ಅನ್ವಯಿಸುತ್ತವೆ ಎಂದರು.
ವಿಮಾನ ನಿಲ್ದಾಣದಲ್ಲೂ ಹಿಂದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲ ಎಂಬುದು ಇದೇ ವೇಳೆ ತಿಳಿಸಿದರು. ಅದಕ್ಕೆ ಮತ್ತೇಗೆ ಅವರಿಗೆ ಅನುದಾನ ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆ ಸದಸ್ಯರಿಂದ ಬಂತು. ಅದಕ್ಕೆ ಸಭೆಯಲ್ಲಿ ಉತ್ತರ ದೊರೆಯಲಿಲ್ಲ.