ಕನ್ನಡಪ್ರಭ ವಾರ್ತೆ, ತುಮಕೂರುಅಮರಶಿಲ್ಪಿ ಜಕಣಾಚಾರಿ ಅವರ ಜನ್ಮಸ್ಥಳವಾದ ಕೈದಾಳದಲ್ಲಿ ಅವರ ಹೆಸರಿನಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಿರುವುದು ಹೆಮ್ಮೆಯ ವಿಚಾರ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.ತುಮಕೂರು ಜಿಲ್ಲಾಡಳಿತದ ವತಿಯಿಂದ ತುಮಕೂರು ತಾಲೂಕಿನ ಗೂಳೂರು ಹೋಬಳಿಯ ಕೈದಾಳದಲ್ಲಿ ನಿರ್ಮಿಸಲಾದ ಶ್ರೀ ಅಮರಶಿಲ್ಪಿ ಜಕಣಾಚಾರಿ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.ಶಾಸಕ ಬಿ.ಸುರೇಶ್‌ಗೌಡ ಅವರು ಜಿಲ್ಲಾಡಳಿತದಿಂದ 3 ಕೋಟಿ ರು. ಅನುದಾನ ಪಡೆದುಕೊಂಡು, ಒಟ್ಟು 8 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತವಾದ ಸಮುದಾಯ ಭವನವನ್ನು ನಿರ್ಮಿಸಿದ್ದಾರೆ. ಸುರೇಶ್‌ಗೌಡ ಅವರು ಬಿಜೆಪಿ ಶಾಸಕರು, ನಾನು ಕಾಂಗ್ರೆಸ್‌ನವನು. ಆದರೆ ಜನಪರ ಕೆಲಸ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಮರೆತು ಪ್ರಶಂಸೆ ವ್ಯಕ್ತಪಡಿಸುವುದು ನಮ್ಮ ಸಭ್ಯತೆ ಎಂದು ಹೇಳಿದರು.ಕೈದಾಳ ಅಮರಶಿಲ್ಪಿ ಜಕಣಾಚಾರಿ ಅವರು ಜನಿಸಿದ ಊರು. ರಾಜಾ ವಿಷ್ಣುವರ್ಧನನ ಆಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಜಕಣಾಚಾರಿ ಅವರ ಶಿಲ್ಪಕಲಾ ಕೌಶಲ್ಯವನ್ನು ಗುರುತಿಸಿ, ಬೇಲೂರಿನ ಚೆನ್ನಕೇಶವ ದೇವಸ್ಥಾನ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದ್ದನು. ಜಕಣಾಚಾರಿ ಅವರು ಕೆತ್ತಿದ ಚೆನ್ನಕೇಶವ ದೇವರ ಮೂರ್ತಿಯಂತಹ ಅದ್ಭುತ ಶಿಲ್ಪಕಲೆಯನ್ನು ಪ್ರಪಂಚದ ಬೇರೆ ಯಾವುದೇ ಭಾಗದಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದರು.ನಾನು ವಿದ್ಯಾರ್ಥಿಯಾಗಿದ್ದಾಗ ನಮ್ಮ ಶಿಕ್ಷಕರು ತುಮಕೂರಿನ ಗೊಲ್ಲಹಳ್ಳಿಯಿಂದ ಕೈದಾಳಕ್ಕೆ ನಡೆದುಕೊಂಡೇ ಕರೆತಂದಿದ್ದರು. ನಮ್ಮಲ್ಲಿರುವ ಇಂತಹ ಶ್ರೀಮಂತ ಇತಿಹಾಸವನ್ನು ಗುರುತಿಸುವ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ‘ಅಮರಶಿಲ್ಪಿ ಜಕಣಾಚಾರಿ’ ಚಲನಚಿತ್ರ ನಿರ್ಮಾಣವಾದ ಬಳಿಕ ಕೈದಾಳ ಇಡೀ ನಾಡಿಗೆ ಪರಿಚಯವಾಯಿತು ಎಂದು ಹೇಳಿದರು.