ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ, ಮಾನವತಾವಾದಿ ಬಸವಣ್ಣನವರ ವಿರುದ್ಧ ಅವಹೇಳನಕಾರಿ ಬರವಣಿಗೆ ಮಾಡಿದ ಸ್ವಯಂ ಘೋಷಿತ ಸಂಶೋಧಕ ರವಿ ಹಂಜ್ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ಗುಬ್ಬಿ ತಾಲೂಕು ಬಸವಾಭಿಮಾನಿಗಳು ಒತ್ತಾಯಿಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ, ಮಾನವತಾವಾದಿ ಬಸವಣ್ಣನವರ ವಿರುದ್ಧ ಅವಹೇಳನಕಾರಿ ಬರವಣಿಗೆ ಮಾಡಿದ ಸ್ವಯಂ ಘೋಷಿತ ಸಂಶೋಧಕ ರವಿ ಹಂಜ್ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ಗುಬ್ಬಿ ತಾಲೂಕು ಬಸವಾಭಿಮಾನಿಗಳು ಒತ್ತಾಯಿಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಪಟ್ಟಣದ ಸರ್ಕಲ್ ನಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತಲುಪಿದ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಸಂಘಟನೆಗಳು ಹಾಗೂ ಬಸವಾಭಿಮಾನಿಗಳು ಬಸವಣ್ಣನವರ ಚರಿತ್ರೆಯನ್ನು ತಿರುಚಿ ಬರೆದ ವಿಕೃತಿ ಮನಸ್ಥಿತಿಯ ಅನಿವಾಸಿ ಭಾರತೀಯ ರವಿ ಹಂಜ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಖಿಲ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ ಜಗವೇ ಮೆಚ್ಚಿದ ಸಾಮಾಜಿಕ ನ್ಯಾಯವಾದಿ ಬಸವಣ್ಣ ಅವರ ಇತಿಹಾಸ ವಿಶ್ವ ಒಪ್ಪಿದೆ. ಆದರೆ ಕೆಟ್ಟ ಮನಸ್ಸಿನ ಈ ರವಿ ಎಂಬ ಸ್ವಯಂ ಘೋಷಿತ ಲೇಖಕ ಬರೆದ ಆಕ್ಷೇಪಾರ್ಹ ಬರಹ ಇಡೀ ಶರಣ ಕುಲವನ್ನೇ ಕೆರಳಿಸಿದೆ. ಅನಿವಾಸಿ ಭಾರತೀಯ ಈ ರವಿ ಉದ್ದೇಶ ಪೂರ್ವಕವಾಗಿ ಕೃತಿ ರಚಿಸಿರುವಂತೆ ಕಾಣುತ್ತಿದೆ. ಈ ಎಲ್ಲಾ ವಿವಾದಿತ ಕೃತಿ ಮುಟ್ಟುಗೋಲು ಹಾಕಿ ರವಿ ಅವರಿಗೆ ಬಿಗಿ ಕಾನೂನು ಕ್ರಮ ಕೈಗೊಂಡು ಎಂದಿಗೂ ಗಣ್ಯರ ಹಾಗೂ ದಾರ್ಶನಿಕರ ಬಗ್ಗೆ ಮಾತನಾಡದಂತೆ ತಾಕೀತು ಮಾಡಬೇಕು ಎಂದು ಆಗ್ರಹಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಆರ್.ಬಿ.ಜಯಣ್ಣ ಮಾತನಾಡಿ ಸಂಶೋಧಕ ಎಂದು ಹೇಳಿಕೊಂಡು ಮನಸ್ಸಿಗೆ ಬಂದಂತೆ ದಾರ್ಶನಿಕರ ಕಥೆ ತಿರುಚಿದ್ದು ಖಂಡನೀಯ. ವಚನವನ್ನು ತಿದ್ದಿ ತೀಡಿ ಖಳನಾಯಕ ಪಟ್ಟ ಕಟ್ಟಿದ ರವಿ ಹಂಜ್ ವಿಕೃತ ಮನೋಭಾವಕ್ಕೆ ಕಠಿಣ ಶಿಕ್ಷೆ ಆಗಬೇಕು. ಸಮಾನತೆ ಸಾರುವ ಜೊತೆಗೆ ಸಾಮಾಜಿಕ ನ್ಯಾಯಕ್ಕಾಗಿ ವಚನ ಕ್ರಾಂತಿ ನಡೆಸಿ ಅನುಭವ ಮಂಟಪ ಮೂಲಕ ಜಗವನ್ನು ಮೆಚ್ಚಿಸಿದ ಬಸವಣ್ಣ ಅವರ ಬಗ್ಗೆ ಸಲ್ಲದ ಪದ ಬಳಕೆ ಮಾಡಿದ್ದರ ಫಲ ಅನುಭವಿಸಲೇಬೇಕು. ದೇಶದಿಂದ ಗಡಿಪಾರು ಮಾಡುವುದು ಸೂಕ್ತ ಎಂದು ಕಿಡಿಕಾರಿದರು.ಜಾಗತಿಕ ಲಿಂಗಾಯಿತ ಸಭೆಯ ಸಂಗಪ್ಪ, ನಿವೃತ್ತ ಪ್ರಾಚಾರ್ಯ ಬಸವರಾಜು ಮಾತನಾಡಿದರು. ಈ ಸಂದರ್ಭದಲ್ಲಿ ಪಪಂ ಮಾಜಿ ಸದಸ್ಯ ಜಿ.ಆರ್.ಶಿವಕುಮಾರ್, ಬಸವ ಕೇಂದ್ರದ ಸದಸ್ಯ ರಾಜಪ್ಪ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ.ಎನ್. ಪಾಲನೇತ್ರ, ವೀರಶೈವ ಲಿಂಗಾಯತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಿದ್ದಲಿಂಗಮೂರ್ತಿ, ಜಿ.ಆರ್.ಅಪ್ಪಾಜಿ, ಸಿದ್ದಪ್ಪ ಗುಜ್ಜಾರ್, ತ್ಯಾಗಟೂರು ಕುಮಾರಯ್ಯ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯರಾದ ಯಶೋಧ ಜಯಣ್ಣ, ಸೌಮ್ಯ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬಸವರಾಜು, ಉಮೇಶ್ ಇನ್ನಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.