ಅಲ್ಪಸಂಖ್ಯಾತರ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಜನಿಸಿದ ಮಕ್ಕಳು ಸೇರಿದಂತೆ 14 ವಯೋಮಾನರೊಳಗಿನ ಮಕ್ಕಳ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸುವಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು. ನಿಸಾರ್ ಅಹಮದ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಅಲ್ಪಸಂಖ್ಯಾತರ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಜನಿಸಿದ ಮಕ್ಕಳು ಸೇರಿದಂತೆ 14 ವಯೋಮಾನರೊಳಗಿನ ಮಕ್ಕಳ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸುವಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು. ನಿಸಾರ್ ಅಹಮದ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ 2026- 27ನೇ ಸಾಲಿನ 1ನೇ ಹಾಗೂ 2ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈಟ್ ಟು ಎಜುಕೇಶನ್ ಕಾಯ್ದೆಯನ್ವಯ ಇಂತಹ ಮಕ್ಕಳ ಸಮಗ್ರ ಅಂಕಿ ಅಂಶ ಹೊಂದುವುದು ಕಡ್ಡಾಯ. ಜಿಲ್ಲೆಯಲ್ಲಿನ ಜನನದಿಂದ 14 ವಯೋಮಾನರೊಳಗಿನ ಎಲ್ಲ ಮಕ್ಕಳ ಅಂಕಿ ಅಂಶ ಕಲೆ ಹಾಕಿ ವರದಿ ಸಲ್ಲಿಸಬೇಕು. ಅಂಗನವಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನೂ ಶಾಲೆಗೆ ಸೇರಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರು ಹೆಚ್ಚಿರುವ ಕಡೆ ಶಿಬಿರ ನಡೆಸಿ ಇ- ಶ್ರಮ, ಕಾರ್ಮಿಕ ಕಾರ್ಡ್ ವಿತರಿಸಬೇಕು. ಆರೋಗ್ಯ ಶಿಬಿರ ಕೈಗೊಳ್ಳಬೇಕು. ಕಾರ್ಮಿಕರ ನೋಂದಣಿ ಅಭಿಯಾನ ಹಮ್ಮಿಕೊಳ್ಳಬೇಕು, ಶೈಕ್ಷಣಿಕ ಸಾಲಕ್ಕಾಗಿ ಬ್ಯಾಂಕ್ ಗಳಿಗೆ ಸಲ್ಲಿಸಲಾದ ಅರ್ಜಿಗಳು, ಮಂಜೂರಾತಿ ನೀಡಿದ, ಮಂಜೂರಾತಿಗೆ ಬಾಕಿ ಇರುವ ಹಾಗೂ ಲೋನ್ ನಿರಾಕರಿಸಿದ್ದಕ್ಕೆ ಕಾರಣಗಳ ಬಗ್ಗೆ ಮಾಹಿತಿಯನ್ನು ಸಲ್ಲಿಸಬೇಕು. ಲೀಡ್ ಬ್ಯಾಂಕ್ ಅಧಿಕಾರಿಗಳು ಆರ್ ಬಿಐ ಮಾರ್ಗಸೂಚಿ ಅನ್ವಯ ಶೈಕ್ಷಣಿಕ ಸಾಲ ಹಾಗೂ ಬಡವರಿಗೆ ಸಾಲ ವಿತರಿಸುವಂತೆ ಜಿಲ್ಲೆಯ ಎಲ್ಲ ಬ್ಯಾಂಕ್ ಗಳಿಗೆ ಸುತ್ತೋಲೆ ಹೊರಡಿಸುವಂತೆ ಯು. ನಿಸಾರ್ ಅಹಮದ್‌ ಸೂಚನೆ ನೀಡಿದರು.

ಸಂವಿಧಾನ ಬದ್ಧವಾದ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಆಯೋಗ ಗಮನ ನೀಡುತ್ತಿದೆ. ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕಲ್ಯಾಣಪರ ಕಾರ್ಯಕ್ರಮಗಳು ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ ಪ್ರಧಾನ ಮಂತ್ರಿಗಳ 15 ಅಂಶ ಕಾರ್ಯಕ್ರಮದಡಿ ಲಾಭ ಸರಿಯಾಗಿ ತಲುಪುತ್ತಿರುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ. ಸರ್ಕಾರಕ್ಕೆ ಶಿಫಾರಸ್ಸು ಸಹ ಮಾಡಲಾಗುತ್ತದೆ. ಆಯೋಗವು ಸಿವಿಲ್ ಕೋರ್ಟ್ ಅಧಿಕಾರ ಸಹ ಹೊಂದಿದ್ದು, ಕುಂದುಕೊರತೆಗಳಿಗೆ, ತೊಂದರೆಗಳಿಗೆ ಸ್ಪಂದಿಸದೇ ಇದ್ದರೆ ಆಯೋಗವು ಸಮನ್ಸ್ ಹಾಗೂ ವಾರಂಟ್ ಸಹ ಜಾರಿಗೊಳಿಸುವ ಅಧಿಕಾರ ಹೊಂದಿದೆ ಎಂದರು.

ಸಭೆಯಲ್ಲಿ ಆಯೋಗದ ಸದಸ್ಯರಾದ ಮತೀನ್, ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜುಬೀನ್ ಮಹಾಪಾತ್ರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಉಪಸ್ಥಿತರಿದ್ದರು.

ಸಾರ್ವಜನಿಕರಿಂದ ಕುಂದುಕೊರತೆ ಸ್ವೀಕಾರ: ಆಯೋಗದ ಅಧ್ಯಕ್ಷ ಯು.ನಿಸಾರ ಅಹಮದ್ ಅವರು ಸಹ ಸಾರ್ವಜನಿಕರಿಂದ ಕುಂದುಕೊರತೆ ಅರ್ಜಿಗಳನ್ನು ಸ್ವೀಕರಿಸಿ, ಲಿಖಿತ ರೂಪದಲ್ಲಿ ನೀಡಲಾಗುವ ಅರ್ಜಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಸಹ ಇದ್ದು, ಅಲ್ಪಸಂಖ್ಯಾತ ಸಾರ್ವಜನಿಕರು, ಸಂಬಂಧಿಸಿದ ಸದಸ್ಯರಿಗೆ ದೂರು ಸಹ ನೀಡಬಹುದಾಗಿದೆ. ಅಲ್ಪಸಂಖ್ಯಾತರ ಮಕ್ಕಳಿಗೆ ವಿಶೇಷ ಗಮನ ನೀಡಲು ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಆಯಾ ಸಮುದಾಯದ ಮುಖಂಡರು ಶಾಲೆಗಳನ್ನು ದತ್ತು ಪಡೆದು, ಸಮುದಾಯಕ್ಕೆ ನೆರವಾಗಬೇಕು ಎಂದರು. ಕುಂದುಕೊರತೆ ಸ್ವೀಕಾರ ಸಂದರ್ಭ ಸೈಯದ್ ಜೈನುಲ್ಲಾ ಆಬಿದೀನ್, ಮೊಹಮ್ಮದ್ ಸಲ್ಮಾನ್, ವಾಹಿದ್ ಮಿಯಾ, ಬಾಲಮಿತ್ರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.