ಬಾಂಗ್ಲಾದೇಶ ಮಾದರಿಯಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಅಧಿಕಾರ ಪಲ್ಲಟಕ್ಕೆ ಕಾಂಗ್ರೆಸ್ ಕೈ ಹಾಕುತ್ತಿದೆ. ಅದಕ್ಕಾಗಿ ದೆಹಲಿ ಬೀದಿ ಬದಿ ಹೋರಾಟದ ಹೆಸರಿನಲ್ಲಿ ಅಶಾಂತಿ ನಿರ್ಮಾಣಕ್ಕೆ ಮುಂದಾಗಿದೆ. ಬಾಂಗ್ಲಾದಲ್ಲಿ ನಡೆದ ಹಿಂಸೆ, ಅನ್ಯಧರ್ಮೀಯರ ಕೊಲೆಯನ್ನು ಅದು ಬೆಂಬಲಿಸುತ್ತದೆಯೇ? ಇದುವೇ ನಿಮಗೆ ಪ್ರೇರಣೆಯೇ? ಇದಕ್ಕೆ ಕಾಂಗ್ರೆಸ್ ಉತ್ತರ ಕೊಡಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ದೇಶದಲ್ಲಿ ಅರಾಜಕತೆ, ಅಶಾಂತಿಯ ವಾತಾವರಣ ಸೃಷಿಸಲು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹುನ್ನಾರ ನಡೆಸಿವೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಆರೋಪಿಸಿದರು.ನಗರದ ಹೊಟೇಲ್ ಪೈ ವಿಸ್ತಾ ಸಭಾಂಗಣದಲ್ಲಿ ಬಿಜೆಪಿ ಮಂಗಳವಾರ ಆಯೋಜಿಸಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಲೋಕತಂತ್ರ ದೇಶವನ್ನು ದುರ್ಬಲಗೊಳಿಸಲು ಸಂಚು ರೂಪಿಸಿವೆ. ಇದಕ್ಕೆ ಅವಕಾಶ ಕೊಡಲ್ಲ ಎಂದರು.
ಬಾಂಗ್ಲಾದೇಶ ಮಾದರಿಯಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಅಧಿಕಾರ ಪಲ್ಲಟಕ್ಕೆ ಕಾಂಗ್ರೆಸ್ ಕೈ ಹಾಕುತ್ತಿದೆ. ಅದಕ್ಕಾಗಿ ದೆಹಲಿ ಬೀದಿ ಬದಿ ಹೋರಾಟದ ಹೆಸರಿನಲ್ಲಿ ಅಶಾಂತಿ ನಿರ್ಮಾಣಕ್ಕೆ ಮುಂದಾಗಿದೆ. ಬಾಂಗ್ಲಾದಲ್ಲಿ ನಡೆದ ಹಿಂಸೆ, ಅನ್ಯಧರ್ಮೀಯರ ಕೊಲೆಯನ್ನು ಅದು ಬೆಂಬಲಿಸುತ್ತದೆಯೇ? ಇದುವೇ ನಿಮಗೆ ಪ್ರೇರಣೆಯೇ? ಇದಕ್ಕೆ ಕಾಂಗ್ರೆಸ್ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.ಈ ಷಡ್ಯಂತ್ರದ ಮೂಲಕ ಪ್ರಕ್ಷುಬ್ಧತೆ ಮನಸ್ಥಿತಿಗಳು ದೇಶದ ಭ್ರಮೆ ಸೃಷ್ಟಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನಿಕ ಸಂಸ್ಥೆಗಳ ಮೇಲೆ ಪ್ರಹಾರ ನಡೆಸಿ ದುರ್ಬಲಗೊಳಿಸಲು ಮುಂದಾಗಿವೆ. ಅವುಗಳ ವಿಶ್ವಾಸಾರ್ಹತೆ ಹಾನಿಯನ್ನೂ ಮಾಡುತ್ತಿವೆ. ಇದು ಪಾಪದ ಕೆಲಸ. ಆದರೆ, ಲೋಕತಂತ್ರವು ಜನಾದೇಶದಿಂದ ನಡೆಯುತ್ತದೆಯೇ ಹೊರತು, ಕೆಲ ರಾಜಕೀಯ ಪರಿವಾರದಿಂದಲ್ಲ ಎಂದು ಅವರು ತಿಳಿಸಿದರು.
ಚುನಾವಣೆ ಆಯೋಗ, ಅದರ ಮುಖ್ಯಸ್ಥರ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಬಹಿರಂಗವಾಗಿ ಸವಾಲು, ಪ್ರಶ್ನೆ ಮಾಡುತ್ತಿದೆ. ಅದರ ರಾಜಕೀಯ ಅಪೇಕ್ಷೆಗೆ ಬಾಧಿತವಾದಾಗ, ಅದರ ನೀತಿಗಳಿಗೆ ವಿರುದ್ಧ ಇರುವ ಸಂಸ್ಥೆಗಳ ಮೇಲೆ ಅದು ಹೀಗೆ ದಾಳಿ ಮಾಡುತ್ತದೆ ಎಂದು ಅವರು ದೂರಿದರು.ರಾಜಸ್ತಾನದಲ್ಲಿ ಇತ್ತೀಚಿಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಇದನ್ನಾದರೂ ಒಪ್ಪಿಕೊಳ್ಳುತ್ತೀರಾ? ಅದು ಗೆದ್ದಾಗ ಲೋಕತಂತ್ರದ ಜಯ, ಅದು ಸೋತಾಗ ಇವಿಎಂ ಯಂತ್ರ ಸರಿಯಿಲ್ಲ. ಪ್ರಜಾಪ್ರಭುತ್ವಕ್ಕೆ ಆಪತ್ತು ಬಂದಿದೆಂದು ಬೊಬ್ಬೆ ಹಾಕುತ್ತದೆ ಎಂದು ಅವರು ಕಿಡಿಕಾರಿದರು.
ಮತದಾರರ ಪಟ್ಟಿ ಶುದ್ಧೀಕರಣಕ್ಕಾಗಿ ಎಸ್ಐಆರ್ ನಡೆಯುತ್ತಿದೆ. 1952, 1984, 1993, 1995, 2002 ರಲ್ಲೂ ಇದು ನಡೆದಿದೆ. ಆಗ ವಿರೋಧ ಮಾಡದವರು ಈಗ ಏಕೆ ಆಕ್ಷೇಪ? ಹೊಟ್ಟೆ ಉರಿ, ದ್ವೇಷ, ಅಸೂಹೆಯಿಂದ ಏಕೆ ವಿರೋಧಿಸುತ್ತಿದ್ದೀರಿ? ಚುನಾವಣೆಯ ಪಾವಿತ್ರ್ಯ ಕಾಯ್ದುಕೊಳ್ಳಲು, ಬಲಿಷ್ಠಗೊಳಿಸಲು, ಲೋಕತಂತ್ರದ ಸಂರಕ್ಷಣೆಗೆ ಎಸ್ಐಆರ್ ಅಗತ್ಯ ಎಂದು ಅವರು ಹೇಳಿದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಪದಾಧಿಕಾರಿಗಳಾದ ಸ್ವಾಮಿ ಮರುಳಾಪುರ, ಡಾ.ಈ.ಸಿ. ನಿಂಗರಾಜ್ ಗೌಡ, ಡಾ. ಅನಿಲ್ ಥಾಮಸ್, ರಾಜೇಂದ್ರ ಮೊದಲಾದವರು ಇದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೀಘ್ರದಲ್ಲೇ ಸೋಲಿನ ಶತಕ ಬಾರಿಸಲಿದ್ದಾರೆ. ಈ ಕುರಿತು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಅದನ್ನು ಬಿಟ್ಟು, ಸಂವಿಧಾನ ಪ್ರತಿ ಹಿಡಿದು ಪ್ರಜಾಪ್ರಭುತ್ವದ ಕುರಿತು ಪ್ರವಚನ, ಉಪದೇಶ ಮಾಡುವುದಲ್ಲ. ಮೊದಲು ಜನಾದೇಶಕ್ಕೆ ಗೌರವ ಕೊಡಿ.- ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಪ್ರವಾಸೋದ್ಯಮ ಸಚಿವರುದೇಶದ ಅಭಿವೃದ್ಧಿ ಸಹಿಸದ ವಿಪಕ್ಷಗಳು ಅರಾಜಕತೆ ಸೃಷ್ಟಿಸುತ್ತಿವೆ. ಅಂತಾರಾಷ್ಟ್ರೀಯ ಶಕ್ತಿಗಳೊಂದಿಗೆ ರಾಜ್ಯದಲ್ಲಿರುವ ಕೆಲ ಶಕ್ತಿಗಳೂ ಸೇರಿಕೊಂಡು ಅಪಪ್ರಚಾರದಲ್ಲಿ ಸಕ್ರಿಯವಾಗಿವೆ.
- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದರು