ಪರೀಕ್ಷಾ ಫಲಿತಾಂಶವು ಕೇವಲ ಅಂಕಿ- ಅಂಶವಲ್ಲ: ರಶ್ಮಿ ಮಹೇಶ್

KannadaprabhaNewsNetwork |  
Published : Nov 25, 2026, 01:15 AM IST
47, 48 | Kannada Prabha

ಸಾರಾಂಶ

ಪರೀಕ್ಷಾ ಫಲಿತಾಂಶವು ಕೇವಲ ಅಂಕಿ- ಅಂಶವಲ್ಲ, ಅದು ಪ್ರತಿಯೊಬ್ಬ ಮಗುವಿನ ಉನ್ನತ ಶಿಕ್ಷಣ ಮತ್ತು ಭವಿಷ್ಯದ ಬಾಗಿಲು. ಕಲಿಕೆಯಲ್ಲಿ ಹಿಂದುಳಿದಿರುವ ಕೊನೆಯ ವಿದ್ಯಾರ್ಥಿಯನ್ನೂ ಗುರುತಿಸಿ, ನಿಯಮಿತ ಬರವಣಿಗೆ ಅಭ್ಯಾಸ ಮತ್ತು ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ನಡೆಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ವೃದ್ಧಿಗೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ವಿ.ಮಹೇಶ್ ತಿಳಿಸಿದರು.

ನಗರದ ಬನ್ನೂರು ರಸ್ತೆಯಲ್ಲಿರುವ ವಿದ್ಯಾ ವಿಕಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಮೈಸೂರು ವಿಭಾಗದ ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಶೈಕ್ಷಣಿಕ ಸಾಧನೆ ಹಾಗೂ ಫಲಿತಾಂಶವನ್ನು ಗಣನೀಯವಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಮಂಗಳವಾರ ಆಯೋಜಿಸಿದ್ದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಮತ್ತು ಸಂಪನ್ಮೂಲ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪರೀಕ್ಷಾ ಫಲಿತಾಂಶವು ಕೇವಲ ಅಂಕಿ- ಅಂಶವಲ್ಲ, ಅದು ಪ್ರತಿಯೊಬ್ಬ ಮಗುವಿನ ಉನ್ನತ ಶಿಕ್ಷಣ ಮತ್ತು ಭವಿಷ್ಯದ ಬಾಗಿಲು. ಕಲಿಕೆಯಲ್ಲಿ ಹಿಂದುಳಿದಿರುವ ಕೊನೆಯ ವಿದ್ಯಾರ್ಥಿಯನ್ನೂ ಗುರುತಿಸಿ, ನಿಯಮಿತ ಬರವಣಿಗೆ ಅಭ್ಯಾಸ ಮತ್ತು ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ನಡೆಸಬೇಕು ಎಂದರು.

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ ಗಳ ಪ್ರವೇಶಾತಿಯಲ್ಲಿ ಸಿಗುವ ಶೇ.7.5 ರಷ್ಟು ವಿಶೇಷ ಮೀಸಲಾತಿಯ ಸದುಪಯೋಗ ಪಡೆಯಲು ವಿಜ್ಞಾನ ವಿಭಾಗದ ಪ್ರತಿಯೊಬ್ಬ ವಿದ್ಯಾರ್ಥಿಯೂ ಆತ್ಮವಿಶ್ವಾಸದಿಂದ ಸಿಇಟಿ ಪರೀಕ್ಷೆ ಬರೆಯುವಂತೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಪ್ರೇರೇಪಿಸಬೇಕು ಎಂದು ಅವರು ಹೇಳಿದರು.

ಕೇವಲ ತೇರ್ಗಡೆ ಹೊಂದುವುದಷ್ಟೇ ಅಲ್ಲದೆ, ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಿ ನಾಲ್ಕೂ ಜಿಲ್ಲೆಗಳನ್ನು ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನಕ್ಕೆ ತರಲು ಸಮರೋಪಾದಿಯಲ್ಲಿ ಶ್ರಮಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಮೈಸೂರು ವಿಭಾಗದ 6 ವಿಷಯಗಳ (ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ) ಸಂಪನ್ಮೂಲ ಶಿಕ್ಷಕರಿಗೆ ಪ್ರತ್ಯೇಕ ತರಬೇತಿ ಗೋಷ್ಠಿಗಳನ್ನು ನಡೆಸಲಾಯಿತು. ಜೊತೆಗೆ ದ್ವಿತೀಯ ಪಿಯುಸಿ ಫಲಿತಾಂಶ ವೃದ್ಧಿಗಾಗಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ನೀಲನಕ್ಷೆ, ಪ್ರಶ್ನೆಕೋಠಿ, ಮಾದರಿ ಪ್ರಶ್ನೆಪತ್ರಿಕೆಗಳ ಸಮರ್ಪಕ ಬಳಕೆ ಹಾಗೂ ಕಾಲಮಿತಿಯೊಳಗೆ ಬರವಣಿಗೆ ಅಭ್ಯಾಸ ಮಾಡಿಸುವ ಕುರಿತು ವಿಶೇಷ ಮಾರ್ಗಸೂಚನೆಗಳನ್ನು ನೀಡಲಾಯಿತು.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಪ್ರಭುಲಿಂಗ ಸ್ವಾಮಿ ಕವಳಿಕಟ್ಟಿ, ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಭರತ್, ಮಂಡಳಿಯ ನಿರ್ದೇಶಕ (ಪರೀಕ್ಷೆಗಳು) ಅನಿತಾ ನಾಜರೆ, ವಿವೇಕಾನಂದ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನ: ನಿಸಾರ್ ಅಹಮದ್
ರವಿ ಹಂಜ್‌ ಗಡಿಪಾರಿಗೆ ಬಸವಾಭಿಮಾನಿಗಳ ಆಗ್ರಹ