ಪ್ರಜಾಸತ್ತಾತ್ಮಕ ಆಶಯ ಎತ್ತಿ ಹಿಡಿದ ಸಮುದಾಯ: ಅರವಿಂದ ಪಟೇಲ್

KannadaprabhaNewsNetwork |  
Published : Oct 19, 2025, 01:02 AM IST
ಬಳ್ಳಾರಿಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಜನ ಚಳುವಳಿಗಳ ದನಿಯಾಗಿ ಸಮುದಾಯ’ ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಲೇಖಕ ಡಾ.ಅರವಿಂದ ಪಾಟೀಲ್ ಅವರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.  | Kannada Prabha

ಸಾರಾಂಶ

ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ ಶ್ರೇಯಸ್ಸು ಸಮುದಾಯ ಸಾಂಸ್ಕೃತಿಕ ಸಂಘಟನೆಗೆ ಸಲ್ಲುತ್ತದೆ

ಬಳ್ಳಾರಿ: ದೇಶದಲ್ಲಿ ಪ್ರಜಾಸತ್ತಾತ್ಮಕ ಆಶಯಗಳನ್ನು ಎತ್ತಿ ಹಿಡಿಯುತ್ತಲೇ ಮನುಷ್ಯಪರ ಚಿಂತನೆ, ಸಾಮಾಜಿಕ ಕಾಳಜಿ, ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ ಶ್ರೇಯಸ್ಸು ಸಮುದಾಯ ಸಾಂಸ್ಕೃತಿಕ ಸಂಘಟನೆಗೆ ಸಲ್ಲುತ್ತದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಟೇಲ್ ನುಡಿದರು.

ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ ) ಕಾಲೇಜಿನ ಸಭಾಂಗಣದಲ್ಲಿ ನಾಟಕ ವಿಭಾಗದಿಂದ ಆಯೋಜಿಸಿದ್ದ ಜನ ಚಳವಳಿಗಳ ದನಿಯಾಗಿ ಸಮುದಾಯ ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಉಂಟಾದ ಅರಾಜಕತೆ, ಸ್ವಾತಂತ್ರ್ಯದ ಭ್ರಮನಿರಸನ, ಅಸಮಾನತೆಗಳು ಸಮುದಾಯದ ಹುಟ್ಟಿಗೆ ಕಾರಣವಾದವು. ಹಲವು ಬಗೆಯ ಕ್ಷೇತ್ರದ ಸಮಾನ ಮನಸ್ಸಿನ ಚಿಂತಕರು, ಯುವಜನತೆ ಈ ಸಂಘಟನೆಯನ್ನು ಬಲಪಡಿಸಿ ಜನಮುಖಿಯಾಗಿಸಿರುವುದು ಈಗ ಇತಿಹಾಸ ಎಂದು ವಿಶ್ಲೇಷಿಸಿದರು.

ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ಲೇಖಕ ಬಿ.ಪೀರ್ ಬಾಷ, ಸಮುದಾಯವು ಬಹಳ ಮುಖ್ಯವಾಗಿ ಜನಸಾಮಾನ್ಯರಲ್ಲಿ ಸಾಮಾಜಿಕ, ರಾಜಕೀಯದ ಬಗೆಗೆ ಹೊಸ ಅರಿವನ್ನು ಉಂಟು ಮಾಡಿತು. ನಾಟಕಗಳು ಜನರ ವಾಸ್ತವ ಬದುಕನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಲೇ ಹೊಸ ಕಣ್ಣೋಟವನ್ನು ಕೊಟ್ಟವು ಎಂದರು.

ಕಲೆ ಆನಂದಕ್ಕಾಗಿ ಅಲ್ಲ. ಬದುಕಿಗಾಗಿ ಎನ್ನುವ ತಾತ್ವಿಕತೆಯೊಂದಿಗೆ ಸಮುದಾಯದ ಬೀದಿ ನಾಟಕಗಳು ಜನರಿಗೆ ಹೊಸ ಸಂದೇಶ, ತಿಳುವಳಿಕೆಯನ್ನು ನೀಡಿ ಎಚ್ಚರಿಸುತ್ತಿದ್ದವು ಎಂದು ವಿಶ್ಲೇಷಿಸಿದರು. ಸಮುದಾಯವು ನಾಟಕ, ಸಂಘಟನೆ, ಸಂವಾದ, ಹಾಗೂ ಜಾಧಗಳ ಮೂಲಕ ತನ್ನ ಚಟುವಟಿಕೆಗಳನ್ನು ಎಲ್ಲೆಡೆ ವಿಸ್ತರಿಸಿತು.

ಸಮುದಾಯ ಎಲ್ಲ ಚಳವಳಿಗಳ ದನಿಯಾಗಿ ಬೆಳೆಯಿತು. ಸಮುದಾಯದ ಚಟುವಟಿಕೆಗಳು ಈ ಹೊತ್ತಿಗೂ ಸಮಾಜದ ಮೇಲೆ ತೀವ್ರವಾದ ಪ್ರಭಾವವನ್ನು ಬೀರುತ್ತಲೇ ಇವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಜಿ.ಪ್ರಹ್ಲಾದ ಚೌದ್ರಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ನಾಟಕ ವಿಭಾಗದ ಮುಖ್ಯಸ್ಥ ದಸ್ತಗೀರಸಾಬ್ ದಿನ್ನಿ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಹುಟ್ಟಿಗೆ ಈಗ 50ರ ಹರೆಯ. ಅದು ಇಟ್ಟ ಹೆಜ್ಜೆ ತೊಟ್ಟ ರೂಪಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.

ವೇದಿಕೆಯ ಮೇಲೆ ನಾಟಕ ವಿಭಾಗದ ಅತಿಥಿ ಉಪನ್ಯಸಕರಾದ ವಿಷ್ಣು ಹಡಪದ, ನೇತಿ ರಘುರಾಮ್ ಇದ್ದರು. ಲೇಖಕರಾದ ಡಾ. ಶಿವಲಿಂಗಪ್ಪ ಹಂದಿಹಾಳು, ವೀರೇಂದ್ರ ರಾವಿಹಾಳ, ಚಿಂತಕ ದಾದಾ ಖಲಂದರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌
ನಟ ಯಶ್‌ಗೆ ಜಾರಿಯಾಗಿದ್ದ ಆದಾಯ ತೆರಿಗೆ ನೋಟಿಸ್‌ ರದ್ದು