ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ತರಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ, ಇಡೀ ದೇಶವ್ಯಾಪಿ ಪರಿಶ್ರಮ ವಹಿಸಿ ದುಡಿಯುತ್ತಿರುವ ಕಾರ್ಮಿಕರಿಗೆ ವೇತನದಲ್ಲಿರುವ ಅಸಮಾನತೆ ಹೋಗಲಾಡಿಸಿ ಘನತೆಯ ಬದುಕು ಸಾಗಿಸಲು ಕೇಂದ್ರ ಸರ್ಕಾರ ಒಂದೇ ರೀತಿಯ ಸಮಾನ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ. ಮಹಾಂತೇಶ ಒತ್ತಾಯಿಸಿದರು.
ಶಿಕ್ಷಣ, ನಿರುದ್ಯೋಗ, ಆರೋಗ್ಯ, ವಸತಿ ಹಾಗೂ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬದಲಾಗಿ ಕೋಮು- ಸಾಮರಸ್ಯ ಕದಡುವ ದಾಳಿ, ಜಗಳಗಳನ್ನು ಹಚ್ಚುವ ಮೂಲಕ ಸಮಾಜದಲ್ಲಿ ದ್ವೇಷ, ವೈಷಮ್ಯ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಎಂಬುದು ಮರೀಚಿಕೆಯಾಗಿದೆ. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆಯಂತಹ ಮನುಷ್ಯಕುಲ ತಲೆತಗ್ಗಿಸುವ ಹೀನ ಘಟನೆ ನಡೆದರೂ ಆ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ ನೀಡದಿರುವುದು ಮಹಿಳೆಯರ ವಿಚಾರದಲ್ಲಿ ಬಿಜೆಪಿ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.ಸಿಪಿಐ ಪಕ್ಷದ ಜಿಲ್ಲಾ ಮುಖಂಡ ಎ.ಎಸ್. ಫೀರಜಾದೆ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳಿಂದ ಬದಲಾವಣೆ ಸಾಧ್ಯವಿಲ್ಲ. ಕಮ್ಯುನಿಸ್ಟ್ ಪಕ್ಷದಿಂದ ಮಾತ್ರ ಬದಲಾವಣೆ ಸಾಧ್ಯ. ಹಾಗಾಗಿ, ಸಿಪಿಐ, ಸಿಪಿಐ(ಎಂ) ಪಕ್ಷಗಳು ಒಂದಾಗುವುದು ಅವಶ್ಯಕವಾಗಿ ಎಂದರು.