ಉಗ್ರಾಣ ನಿರ್ಮಾಣಕ್ಕೆ ಸ್ವಂತ ಜಾಗ ದಾನ ಮಾಡಿದ ದಂಪತಿ

KannadaprabhaNewsNetwork | Published : Oct 21, 2023 12:30 AM

ಸಾರಾಂಶ

ತಾಲೂಕಿನ ಜೋಗಿಹಳ್ಳಿ ಗ್ರಾಮದಲ್ಲಿ ಉಗ್ರಾಣ ನಿರ್ಮಾಣಕ್ಕಾಗಿ ರೈತ ಕುಟುಂಬವೊಂದು ಸ್ವಂತ ೨ ಗುಂಟೆ ಜಾಗ ದಾನ ನೀಡಿದೆ.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ತಾಲೂಕಿನ ಜೋಗಿಹಳ್ಳಿ ಗ್ರಾಮದಲ್ಲಿ ಉಗ್ರಾಣ ನಿರ್ಮಾಣಕ್ಕಾಗಿ ರೈತ ಕುಟುಂಬವೊಂದು ಸ್ವಂತ ೨ ಗುಂಟೆ ಜಾಗ ದಾನ ನೀಡಿದೆ.

ಜೋಗಿಹಳ್ಳಿ ಗ್ರಾಮದ ರೈತ ಕುಟುಂಬದ ಶಾಂತಮ್ಮ ಬಸಪ್ಪ ಗುಂಡಗಟ್ಟಿ ಹಾಗೂ ಬಸನಗೌಡ ಸಿದ್ದಪ್ಪ ಗುಬ್ಬೇರ ದಂಪತಿ ರೈತರ ಅನುಕೂಲಕ್ಕಾಗಿ ಸರ್ಕಾರದಿಂದ ಉಗ್ರಾಣ ನಿರ್ಮಾಣ ಮಾಡಲು ಸ್ವಂತ ೨ ಗುಂಟೆ ಜಾಗ ನೀಡಲು ಮುಂದೆ ಬಂದಿದೆ. ಹಿರೇಕೆರೂರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಾನ ಪತ್ರವನ್ನು ತಾವರಗಿ ಪಿಡಿಒಗೆ ದಂಪತಿ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ದಂಪತಿ, ಗ್ರಾಮದಲ್ಲಿ ಉಗ್ರಾಣ ನಿರ್ಮಾಣವಾದರೆ ಕೃಷಿ ಚಟುವಟಿಕೆಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ರೈತರು ಬೆಳೆದ ಬೆಳೆಯನ್ನು ಸಂಗ್ರಹ ಮಾಡಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಾಗ ಮಾರಬಹುದು. ಅಲ್ಲದೇ ಮಳೆಗಾಲದಲ್ಲಿ ಬೆಳೆದ ಬೆಳೆಯ ರಕ್ಷಣೆಗೆ ಅನುಕೂಲವಾಗುತ್ತದೆ. ರೈತರ ವಿವಿಧ ಉದ್ದೇಶಗಳಿಗೂ ಸಹ ಅನುಕೂಲಕರವಾಗಲಿದೆ ಎಂಬ ಉದೇಶದಿಂದ ಜಾಗವನ್ನು ದಾನ ಮಾಡುತ್ತಿದ್ದೇವೆ. ಸರಕಾರ ಮತ್ತು ಅಧಿಕಾರಿಗಳು ಗ್ರಾಮಕ್ಕೆ ಉಗ್ರಾಣ ಮಂಜೂರಾತಿ ಮಾಡಿ ರೈತರಿಗೆ ಅನುಕೂಲ ಮಾಡಬೇಕು ಎಂದರು.

ಪಿಡಿಒ ಸತೀಶಕುಮಾರ ಮಾತನಾಡಿ, ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಮುಂದಿನ ದಿನಮಾನಗಳಲ್ಲಿ ಸರ್ಕಾರ ಉಗ್ರಾಣ ನಿರ್ಮಾಣಕ್ಕೆ ಅನುದಾನ ನೀಡಿದಲ್ಲಿ ಉಗ್ರಾಣ ನಿರ್ಮಾಣ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಈರಪ್ಪ ಗುಬ್ಬೇರ, ಬಸವರಾಜ ಬಣಕಾರ, ರಾಮಪ್ಪ ದಿವೀಗಿಹಳ್ಳಿ, ಮಲ್ಲಪ್ಪ ಕುರುಬರ, ಚಂದ್ರಪ್ಪ ಬಣಕಾರ ಹಾಗೂ ಗ್ರಾಮಸ್ಥರು ಇದ್ದರು.

Share this article