ಜಗದ ಖುಷಿಯಲ್ಲಿ ತನ್ನ ಖುಷಿ ಕಾಣುವವ ನಿಜವಾದ ಋಷಿ. ನವೋದಯ ಯುಗದ ಋಷಿ ಕವಿ ಈಶ್ವರ ಸಣಕಲ್ಲ. ಬೇಂದ್ರೆಯವರು ವರಕವಿಯಾದರೆ, ಚಿರಕವಿ ಈಶ್ವರ ಸಣಕಲ್ಲ ಎಂದು ಹಾರೂಗೇರಿಯ ಹಿರಿಯ ಸಾಹಿತಿ ಡಾ.ವಿ.ಎಸ್. ಮಾಳಿ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಜಗದ ಖುಷಿಯಲ್ಲಿ ತನ್ನ ಖುಷಿ ಕಾಣುವವ ನಿಜವಾದ ಋಷಿ. ನವೋದಯ ಯುಗದ ಋಷಿ ಕವಿ ಈಶ್ವರ ಸಣಕಲ್ಲ. ಬೇಂದ್ರೆಯವರು ವರಕವಿಯಾದರೆ, ಚಿರಕವಿ ಈಶ್ವರ ಸಣಕಲ್ಲ ಎಂದು ಹಾರೂಗೇರಿಯ ಹಿರಿಯ ಸಾಹಿತಿ ಡಾ.ವಿ.ಎಸ್. ಮಾಳಿ ಹೇಳಿದರು.ದಲಾಲ ಸ್ಪೋರ್ಟ್ಸ್ ಕ್ಲಬ್ ರಬಕವಿ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ರಬಕವಿ-ಬನಹಟ್ಟಿ, ವರಕವಿ ಈಶ್ವರ ಸಣಕಲ್ಲ ಪ್ರತಿಷ್ಠಾನ ರಬಕವಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ರಬಕವಿಯ ಲಿಂ.ಬಾಲಚಂದ್ರಪ್ಪ ದಲಾಲ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವರಕವಿ ಈಶ್ವರ ಸಣಕಲ್ಲ ಜಯಂತಿ ಹಾಗೂ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ವಚನಗಳಲ್ಲಿ ಸದಾಚಾರ ಮತ್ತು ಆರೋಗ್ಯ ಕುರಿತು ಉಪನ್ಯಾಸ ನೀಡಿದ ಅವರು ಸತ್ಯದಲ್ಲಿ ನಿಷ್ಠೆ, ಕಾಯಕದಲ್ಲಿ ಶ್ರದ್ಧೆ, ಮನೋಶುದ್ಧಿ ಸಂಗಮವೇ ಸದಾಚಾರ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಕ್ಷೇತ್ರ ತುಂಬಾ ವಿಶಾಲವಾದ ಕ್ಷೇತ್ರ. ಮನುಷ್ಯನ ಬದುಕಿಗೆ ದಾರಿ ತೋರಿಸುವಂತಹ ನೂರಾರು ವರ್ಷ ಬದುಕುವ ಸಾಹಿತ್ಯವನ್ನು ಈಶ್ವರ ಸಣಕಲ್ಲ ಕೊಟ್ಟು ಹೋಗಿದ್ದಾರೆ ಎಂದರು.ವರಕವಿ ಈಶ್ವರ ಸಣಕಲ್ಲ ಪ್ರತಿಷ್ಠಾನದ ಅಧ್ಯಕ್ಷ ಶಿವಾನಂದ ಬಾಗಲಕೋಟಮಠ ಸಮ್ಮುಖ ವಹಿಸಿದ್ದರು. ಉದ್ಯಮಿ ಬಸವರಾಜ ದಲಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಸಾಪ ಸಹಯೋಗದೊಂದಿಗೆ ಹಿರಿಯ ಸಾಹಿತಿಗಳ ಮಾರ್ಗದರ್ಶನದಲ್ಲಿ ಪ್ರತಿ ತಿಂಗಳು ಚಿಂತನ, ಸಂಗೀತ, ಕಲಾಪ್ರದರ್ಶನ ವಿಶಿಷ್ಟ, ವೈವಿಧ್ಯಮಯ ಕಾರ್ಯಕ್ರಮಗಳನ್ನು ದಲಾಲ ಸ್ಪೋರ್ಟ್ಸ್ ಕ್ಲಬ್ ಲಿಂ. ಬಾಲಚಂದ್ರಪ್ಪ ದಲಾಲ ಸಭಾಭವನದಲ್ಲಿ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ವರಕವಿ ಈಶ್ವರ ಸಣಕಲ್ಲ ಅವರ ಬದುಕು-ಬರಹ ವಿಷಯವಾಗಿ ರಬಕವಿಯ ಹಿರಿಯ ಸಾಹಿತಿ ಶಿವಾನಂದ ದಾಶಾಳ ಉಪನ್ಯಾಸ ನೀಡಿದರು. .ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾಲೂಕು ಕಸಾಪ ಅಧ್ಯಕ್ಷ ಮ.ಕೃ.ಮೇಗಾಡಿ ಕವಿ ಈಶ್ವರ ಸಣಕಲ್ಲ ಅವರ ಹೆಸರಿನಲ್ಲಿ ೫೦ಸಾವಿರ ರೂ.ಗಳ ದತ್ತಿನಿಧಿ ಸ್ಥಾಪಿಸಿದ ಪ್ರತಿಷ್ಠಾನಕ್ಕೆ ಅಭಿನಂದಿಸಿದರು.
ಶಿವಶಿಂಪಿ ಸಮಾಜದ ಮುಖಂಡರಾದ ಸಿದ್ದಣ್ಣ ಸಣಕಲ್ಲ. ಅಥಣಿಯ ವಕೀಲ ಸಂತೋಷ ಶೆಟ್ಟಿ ವೇದಿಕೆಯಲ್ಲಿದ್ದರು. ಶಿಕ್ಷಕ ಮಹಾಲಿಂಗ ಚಿಮ್ಮಡ ಪ್ರಾರ್ಥಿಸಿದರು. ಎಸ್.ಎಸ್. ಹಿರೇಮಠ ದಂಪತಿ ನಿರೂಪಿಸಿದರು. ಚಿತ್ರಕಲಾವಿದ ಮಹಾದೇವ ಕವಿಶೆಟ್ಟಿ ವಂದಿಸಿದರು. ಎಂ.ಎಸ್.ಬದಾಮಿ, ಕಸಾಪ ಕೋಶಾಧ್ಯಕ್ಷ ಡಿ.ಬಿ.ಜಾಯಗೊಂಡ, ಮಲ್ಲೇಶಪ್ಪ ಕುಚನೂರ, ಶಂಕರ ಮಲ್ಲಣ್ಣವರ, ಚಿದಾನಂದ ಸೊಲ್ಲಾಪುರ, ಶಂಕರ ದಡ್ಡ, ಭೀಮಶಿ ಪಾಟೀಲ, ಭೀಮಶಿ ಮಗದುಮ್, ಇಂದುಧರ ಬೆಳಗಲಿ, ಮಹಾದೇವ ಮುತ್ತೂರ, ಸೋಮಶೇಖರ ಕೊಟ್ರಶೆಟ್ಟಿ, ವೈ.ಬಿ.ಕೊರಡೂರ, ಡಾ.ಶರತ್ ಜಂಬಗಿ, ಉಮಾ ದುಂಬಾಳೆ, ಭಾರತಿ ಪಾವಟೆ ಸೇರಿದಂತೆ. ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು, ಕಲಾವಿದರು, ಕಸಾಪ ಪದಾಧಿಕಾರಿಗಳು, ವರಕವಿ ಈಶ್ವರ ಸಣಕಲ್ಲ ಅಭಿಮಾನಿಗಳು ಪಾಲ್ಗೊಂಡಿದ್ದರು.