ಹಲಗೂರು: ಕಾಡು ಪ್ರಾಣಿಗಳ ಬೇಟೆಗಾಗಿ ಜಮೀನಿನಲ್ಲಿ ಇಟ್ಟಿದ್ದ ಸಿಡಿ ಮದ್ದು ಸಿಡಿದು ಹಸು ತೀವ್ರವಾಗಿ ಗಾಯಗೊಂಡಿರುವ ಘಟನೆ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಚೌಡೇಗೌಡರ ಪುತ್ರ ಶಿವರಾಮ್ ಅವರ ಜಮೀನಿನಲ್ಲಿ ಅಪರಿಚಿತರು ಕಾಡುಪ್ರಾಣಿಗಳನ್ನು ಬೇಟೆಯಾಡಲು ಮೂರು ಕಡೆ ಸಿಡಿಮದ್ದನ್ನು ಇಟ್ಟಿದ್ದರು. ಹಸು ಮೇವು ಮೇಯಲು ಹೋದಾಗ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರವಾಗಿ ತೀವ್ರ ಗಾಯಗೊಂಡಿದೆ.
ರೈತ ಶಿವರಾಮ್ ಮಾತನಾಡಿ, ಸುಮಾರು ವರ್ಷಗಳಿಂದ ನಾವು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಎಂದಿನಂತೆ ಹಸುಗಳನ್ನು ಮೇಯಿಸಲು ಜಮೀನಿಗೆ ಹೋದಾಗ ಸುಮಾರು 60 ರಿಂದ 70 ಸಾವಿರ ಬೆಲೆ ಬಾಳುವ ಹಸುವಿಗೆ ಸಿಡಿಮದ್ದು ಸಿಡಿದು ತುಂಬಾ ಗಾಯಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.