ರೋಲ್ ಕಾಲ್ ಗಿರಾಕಿಗಳು, ಎಂಜಲು ಕಾಸಿಗೆ ಪ್ರತಿಭಟನೆ ಹೇಳಿಕೆಗೆ ಖಂಡನೆ

KannadaprabhaNewsNetwork |  
Published : Jun 14, 2025, 02:28 AM IST
13ಕೆಎಂಎನ್ ಡಿ29 | Kannada Prabha

ಸಾರಾಂಶ

ಶಾಸಕರು ಗ್ರಾಮಕ್ಕೆ ಆಗಮಿಸಿ ತಮ್ಮ ಲಘು ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆಯಾಚನೆ ಮಾಡಬೇಕು. ಇಲ್ಲವಾದಲ್ಲಿ ಮದ್ದೂರು ಕ್ಷೇತ್ರದಲ್ಲಿ ನಡೆಯುವ ಅವರ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತಿಭಟನೆ ನಡೆಸುವುದರೊಂದಿಗೆ ಘೇರಾವ್ ಮಾಡುವ ಮೂಲಕ ತಕ್ಕ ಪಾಠ ಕಲಿಸಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಸೇರ್ಪಡೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರ ಬಗ್ಗೆ ಕ್ಷೇತ್ರದ ಶಾಸಕರ ಲಘು ಹೇಳಿಕೆ ಖಂಡಿಸಿ, ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ರೈತ ಸಂಘದ ಬೆಂಬಲದೊಂದಿಗೆ ಗ್ರಾಮ ಪಂಚಾಯಿತಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುತ್ತಿದ್ದು, ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ, ಸೋಮನಹಳ್ಳಿ ಹಾಗೂ ಗೊರವನಹಳ್ಳಿ ಗ್ರಾಮಗಳನ್ನು ಸೇರ್ಪಡೆ ಮಾಡಿರುವುದಕ್ಕೆ ಆಯಾ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು.

ಪ್ರತಿಭಟನಾಕಾರರ ಕುರಿತು ಶಾಸಕ ಕೆ.ಎಂ.ಉದಯ್ ಸಂಘ- ಸಂಸ್ಥೆಗಳ ಹೆಸರಿನಲ್ಲಿ ಕೆಲವರು ರೋಲ್ ಕಾಲ್ ಮಾಡುತ್ತಾ ಎಂಜಲು ಕಾಸಿಗಾಗಿ ಪ್ರತಿಭಟನೆ ದಾರಿ ಹಿಡಿದಿದ್ದಾರೆ ಎಂದು ಟೀಕೆ ಮಾಡಿದ್ದರು. ಶಾಸಕರ ಹೇಳಿಕೆಗೆ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ರೈತ ನಾಯಕಿ ಸುನಂದಾ ಜಯರಾಂ ನೇತೃತ್ವದಲ್ಲಿ ರೈತ ಸಂಘ, ಜನಪ್ರತಿನಿಧಿಗಳ ಬೆಂಬಲದೊಂದಿಗೆ ಗ್ರಾಪಂ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಶಾಸಕರ ವಿರುದ್ಧ ಕಿಡಿಕಾರಿದರು.

ಈ ವೇಳೆ ಮಾತನಾಡಿದ ಸುನಂದಾ ಜಯರಾಂ, ಗೆಜ್ಜಲಗೆರೆ ಗಂಡು ಮೆಟ್ಟಿನ ಗ್ರಾಮ. ರೈತರು ಮತ್ತು ಗ್ರಾಮದ ಸಮಸ್ಯೆ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ. ಶಾಸಕ ಉದಯ್ ಅವರು ಲಘು ಹೇಳಿಕೆ ನೀಡುವ ಮೂಲಕ ಗ್ರಾಮದ ಮತ್ತು ಗ್ರಾಮಸ್ಥರ ಸ್ವಾಭಿಮಾನವನ್ನು ಕೆಣಕುವ ಯತ್ನ ಮಾಡಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗೆಜ್ಜಲಗೆರೆ ಗ್ರಾಮದವರಿಗೆ ರಾಜಕಾರಣಿಗಳನ್ನು ಚುನಾವಣೆಗಳಲ್ಲಿ ಗೆಲ್ಲಿಸುವುದೂ ಗೊತ್ತು. ಸೋಲಿಸುವುದೂ ಗೊತ್ತು. ಇಂತಹ ಗ್ರಾಮದವರನ್ನು ಶಾಸಕ ಉದಯ್ ರೋಲ್ ಕಾಲ್ ಗಿರಾಕಿಗಳು ಎಂದು ಕರೆದು ತಮ್ಮ ಅವನತಿಗೆ ಮುಂದಾಗಿದ್ದಾರೆ. ಅವರು ತಕ್ಷಣ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಲಿಂಗಪ್ಪಾಜಿ ಮಾತನಾಡಿ, ಶಾಸಕರು ಗ್ರಾಮಕ್ಕೆ ಆಗಮಿಸಿ ತಮ್ಮ ಲಘು ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆಯಾಚನೆ ಮಾಡಬೇಕು. ಇಲ್ಲವಾದಲ್ಲಿ ಮದ್ದೂರು ಕ್ಷೇತ್ರದಲ್ಲಿ ನಡೆಯುವ ಅವರ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತಿಭಟನೆ ನಡೆಸುವುದರೊಂದಿಗೆ ಘೇರಾವ್ ಮಾಡುವ ಮೂಲಕ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಜಿ.ಪಿ.ಯೋಗೇಶ್, ಗ್ರಾಪಂ ಅಧ್ಯಕ್ಷೆ ರಾಧಾ, ಉಪಾಧ್ಯಕ್ಷ ಶೇಖರ್, ಮುಖಂಡರಾದ ಮಂಜುನಾಥ್ , ಜಿ.ಸಿ.ಮಹೇಂದ್ರ, ಡಾಬಾ ಕಿಟ್ಟಿ, ಹೊನ್ನಲಗೆಗೌಡ, ಶಿವಲಿಂಗಯ್ಯ, ಸುನಿಲ್, ಆತ್ಮಾನಂದ, ಮೋಹನ್, ಶೇಖರ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ