ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಗುರುವಾರ ಸಂಜೆ ಬಿದ್ದ ಜೋರು ಮಳೆಯಿಂದ ಚರಂಡಿಯಲ್ಲಿ ಸರಾಗವಾಗಿ ಹರಿಯಬೇಕಾಗಿದ್ದ ಕೊಳಚೆ ನೀರು ಹಾಗೂ ಮಳೆ ನೀರು ರಸ್ತೆ ಮೇಲೆ ಹರಿಯುವುದರ ಜೊತೆಗೆ ಪಟ್ಟಣದ ಡಾ.ಎಚ್.ಎನ್.ವೃತ್ತ (ಗೂಳೂರು ಸರ್ಕಲ್)ದಲ್ಲಿ ಮಳೆ ನೀರಿನ ಜೊತೆಗೆ ಚರಂಡಿ ಕೊಳಚೆ ಹಾಗೂ ತ್ಯಾಜ್ಯ ನೀರು ಸಂಗ್ರಹವಾಗಿ ಜಲಾವೃತಗೊಂಡ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚರಿಸಲು ಸಾಧ್ಯವಾಗುತ್ತಿಲ್ಲ.
ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಪ್ರತಿ ಮಳೆಗಾಲದಲ್ಲೂ ಪಟ್ಟಣದ ಗೂಳೂರು ಸರ್ಕಲ್‍ನಲ್ಲಿ ಮಳೆ ಮತ್ತು ಚರಂಡಿ ಕೊಳಚೆ ನೀರು ಸಂಗ್ರಹವಾಗಿ ಜಲಾವೃತಗೊಳ್ಳುವುದರಿಂದ ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ಕಳೆದ ಹಲವಾರು ವರ್ಷಗಳಿಂದ ಪದೇ ಪದೇ ಕಿರಿಕಿರಿ ಅನುಭವಿಸುತ್ತಿದ್ದಾರೆ. ಆದರೆ ನಮಗೂ ಈ ಸಮಸ್ಯೆಗೂ ಯಾವುದೇ ಸಂಬಂದವೇ ಇಲ್ಲ ಎನ್ನುವಂತೆ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ.
ಚರಂಡಿ ಸ್ವಚ್ಛಗೊಳಿಸಲು ಆಗ್ರಹ
ಜನಪ್ರತಿನಿಧಿಗಳು, ಪುರಸಭೆ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಗೂಳೂರು ಸರ್ಕಲ್ ಸೇರಿದಂತೆ ಪಟ್ಟಣದ ಬಹುತೇಕ ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯ ಮತ್ತು ಹೂಳು ತೆರವುಗೊಳಿಸುವ ಮೂಲಕ ಚರಂಡಿಗಳಲ್ಲಿ ಕೊಳಚೆ ಮತ್ತು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.