ಪಂಚಮಿಗೆ ಸಿದ್ಧಪಡಿಸಿದ್ದ ಅವಲಕ್ಕಿ ಮಳೆ ನೀರುಪಾಲು

KannadaprabhaNewsNetwork |  
Published : Jun 14, 2025, 02:22 AM IST
13ಎಚ್‌ಯುಬಿ31,31ಎ,31ಬಿಮಳೆ ನೀರು ಮಿಲ್‌ಗೆ ನುಗ್ಗಿ ಹಾಳಾಗಿರುವ ಅವಲಕ್ಕಿ  | Kannada Prabha

ಸಾರಾಂಶ

ಮಿಲ್‌ನಲ್ಲಿ ಅವಲಕ್ಕಿ ತಯಾರಿಸಲೆಂದು 400 ಚೀಲ ಅಕ್ಕಿ ತರಿಸಲಾಗಿತ್ತು. ಈ ಹಿಂದೆ ತಯಾರಿಸಿದ್ದ 700 ಬಾಕ್ಸ್‌ ಅವಲಕ್ಕಿ ಸಂಗ್ರಹವಿತ್ತು. ಅಲ್ಲದೆ ಸುಮಾರು ₹1 ಲಕ್ಷ ಮೌಲ್ಯದ ರಟ್ಟಿನ ಬಾಕ್ಸ್‌ಗಳಿದ್ದವು. ಇದರಲ್ಲಿ 250 ಚೀಲ ಅಕ್ಕಿ, ಸಿದ್ಧ ಮಾಡಿದ್ದ 400 ಬಾಕ್ಸ್‌ ನೈಲಾನ್‌ ಅವಲಕ್ಕಿ, ಅರ್ಧಕ್ಕಿಂತಲೂ ಹೆಚ್ಚು ರಟ್ಟಿನ ಬಾಕ್ಸ್‌ಗಳು ಹಾಳಾಗಿವೆ. ಇದರಿಂದಾಗಿ ಈ ಕುಟುಂಬಕ್ಕೆ ಸುಮಾರು ನಾಲ್ಕೈದು ಲಕ್ಷ ರುಪಾಯಿ ಹಾನಿಯಾಗಿದೆ.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ: ನಗರದಲ್ಲಿ ಬುಧವಾರ ಸುರಿದ ಮಳೆ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ನಗರದ ಹಲವೆಡೆ ಮನೆಗಳಿಗೆ ನುಗ್ಗಿದ್ದ ನೀರು ಜನರ ಪರದಾಡುವಂತೆ ಮಾಡಿತ್ತು. ಇದೇ ಮಳೆ ನೀರು ನಾರಾಯಣ ಸೋಪಾದ ನೈಲಾನ್‌ ಅವಲಕ್ಕಿ ತಯಾರಿಸುವ ಕಾರ್ಖಾನೆಗೆ ನುಗ್ಗಿ ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿದೆ.

ಇಲ್ಲಿನ ಚೌದರಿ ಕುಟುಂಬ ಚೌದರಿ ಪೋಹಾ ಮಿಲ್‌ ಎಂಬ ಚಿಕ್ಕ ಕಾರ್ಖಾನೆ ನಡೆಸುತ್ತಿದೆ. ಈ ಮಿಲ್‌ಗೆ ನುಗ್ಗಿದ ಮಳೆ ನೀರು ಮೊಣಕಾಲು ಉದ್ದದ ವರೆಗೆ ನಿಂತು ಅವಲಕ್ಕಿ, ಅಕ್ಕಿ ಮತ್ತು ಇದನ್ನು ಪ್ಯಾಕ್‌ ಮಾಡಲು ಸಂಗ್ರಹಿಸಿದ್ದ ರಟ್ಟಿನ್‌ ಬಾಕ್ಸ್‌ಗಳು ಹಾಳಾಗಿವೆ.

ಮಿಲ್‌ನಲ್ಲಿ ಅವಲಕ್ಕಿ ತಯಾರಿಸಲೆಂದು 400 ಚೀಲ ಅಕ್ಕಿ ತರಿಸಲಾಗಿತ್ತು. ಈ ಹಿಂದೆ ತಯಾರಿಸಿದ್ದ 700 ಬಾಕ್ಸ್‌ ಅವಲಕ್ಕಿ ಸಂಗ್ರಹವಿತ್ತು. ಅಲ್ಲದೆ ಸುಮಾರು ₹1 ಲಕ್ಷ ಮೌಲ್ಯದ ರಟ್ಟಿನ ಬಾಕ್ಸ್‌ಗಳಿದ್ದವು. ಇದರಲ್ಲಿ 250 ಚೀಲ ಅಕ್ಕಿ, ಸಿದ್ಧ ಮಾಡಿದ್ದ 400 ಬಾಕ್ಸ್‌ ನೈಲಾನ್‌ ಅವಲಕ್ಕಿ, ಅರ್ಧಕ್ಕಿಂತಲೂ ಹೆಚ್ಚು ರಟ್ಟಿನ ಬಾಕ್ಸ್‌ಗಳು ಹಾಳಾಗಿವೆ. ಇದರಿಂದಾಗಿ ಈ ಕುಟುಂಬಕ್ಕೆ ಸುಮಾರು ನಾಲ್ಕೈದು ಲಕ್ಷ ರುಪಾಯಿ ಹಾನಿಯಾಗಿದೆ.

ನೈಲಾನ್‌ ಅವಲಕ್ಕಿ: ಸಂಜೆ ಸ್ನಾಕ್ಸ್‌, ಹಬ್ಬದ ವೇಳೆ ತಯಾರಿಸುವ ನೈಲಾನ್‌ ಅವಲಕ್ಕಿ ತಯಾರಿಸುವ ಮಿಲ್‌ ಇದು. ಮುಂದೆ ಪಂಚಮಿ ಇರುವ ಕಾರಣ ನೈಲಾನ್‌ ಅವಲಕ್ಕಿಗೆ ಹೆಚ್ಚಿನ ಬೇಡಿಕೆ. ಹೀಗಾಗಿ, 50 ಕೆಜಿಯ 400 ಅಕ್ಕಿ ಪಾಕೆಟ್‌ಗಳನ್ನು ಮಿಲ್‌ಗೆ ನೀರು ನುಗ್ಗುವ ನಾಲ್ಕೈದು ದಿನ ಮೊದಲಷ್ಟೇ ತರಿಸಲಾಗಿತ್ತು. ಪ್ಯಾಕಿಂಗ್‌ ಮಾಡುವ ರಟ್‌ಗಳನ್ನು ಹಿಂದಿನ ದಿನವಷ್ಟೇ ತರಿಸಲಾಗಿತ್ತು.

ಮೂರನೇ ಬಾರಿ ನಷ್ಟ: ಮಳೆಯಿಂದ ಮಿಲ್‌ನಲ್ಲಿ ಅವಾಂತರವಾಗುತ್ತಿರುವುದು ಇದೇ ಮೊದಲಲ್ಲ. ಹಿಂದಿನ 2-3 ವರ್ಷಗಳಲ್ಲಿ ಹೀಗೆ ಎರಡು ಬಾರಿ ಈ ಕುಟುಂಬ ನಷ್ಟ ಅನುಭವಿಸಿದೆ. ಆದರೆ, ಸರ್ಕಾರದಿಂದ ಪರಿಹಾರ ಮಾತ್ರ ದೊರಕಿಲ್ಲ. ಹಿಂದಿನ ಎರಡು ನಷ್ಟ ತುಂಬಿಕೊಳ್ಳಲು ಹೆಣಗುತ್ತಿದ್ದ ಈ ಕುಟುಂಬಕ್ಕೆ ಮಳೆ ಸಂಕಷ್ಟ ತಂದೊಡ್ಡಿದೆ.

ತಂದೆ ಸಾವು: ಕಳೆದ ಏಳೆಂಟು ತಿಂಗಳ ಹಿಂದಷ್ಟೇ ಜೈನುದ್ಧೀನ್‌ ಚೌದರಿ ತೀರಿಕೊಂಡಿದ್ದಾರೆ. ತಂದೆ ಸಾವಿನ ನೋವಿನಲ್ಲಿರುವ ಮೂವರು ಸಹೋದರರು ಈಗಷ್ಟೇ ಈ ಮಿಲ್‌ನ ನಿರ್ವಹಣೆ ಮಾಡುತ್ತಿದ್ದಾರೆ. ನಾಹಿದ್‌ ಚೌದರಿ ಮತ್ತು ಸಾಧಿಕ್ ಚೌದರಿ ಈ ಮಿಲ್‌ ನೋಡಿಕೊಳ್ಳುತ್ತಿದ್ದು, ಈ ವೇಳೆ ಹೀಗಾಗಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ನಾಲೆಯಿಂದ ಅವಾಂತರ: ಮೂರು ವರ್ಷದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ, ಆಗ ಚರಂಡಿ ದೊಡ್ಡದಾಗಿತ್ತು. ಆಗ ಮ‍ಳ‍ೆ ನೀರು ಸರಾಗವಾಗಿ ಹರಿದು ನಾಲೆ ಸೇರುತ್ತಿತ್ತು. 2-3 ವರ್ಷದ ಹಿಂದೆ ಇಲ್ಲಿ ಚಿಕ್ಕದಾಗಿ, ಅತೀ ಎತ್ತರಕ್ಕೆ ಚರಂಡಿ ನಿರ್ಮಿಸಿದ್ದಾರೆ, ಹೀಗಾಗಿ, ಮಿಲ್‌ ಸುತ್ತಮುತ್ತಲಿನ ಮಳೆ ನೀರು ನಾಲೆಗೆ ಹರಿದು ಹೋಗದೆ ಮಿಲ್‌ನ ಒಳನುಗ್ಗುತ್ತಿದೆ. ಮಿಲ್‌ಗೆ ನೀರು ನುಗ್ಗದಂತೆ ಎರಡು ಬಾರಿ ಚೌದರಿ ಕುಟುಂಬ ಒಂದು ಅಡಿ ತಡೆಗೋಡೆ ನಿರ್ಮಿಸಿದೆ. ಆದರೂ ಮಳೆ ನೀರು ಮಿಲ್‌ಗೆ ನುಗ್ಗಿ ನಷ್ಟವುಂಟು ಮಾಡಿದೆ.

ಮಳೆಯಿಂದ ಈ ರೀತಿ ಅವಾಂತರವಾಗುತ್ತಿರುವುದು ಇದು ಮೂರನೆ ಬಾರಿ. ಈ ಹಿಂದೆ ಎರಡು ಬಾರಿ ಸರ್ಕಾರದಿಂದ ಯಾವುದೇ ರೀತಿಯ ಪರಿಹಾರ ದೊರಕಿಲ್ಲ. ಈ ಬಾರಿಯಾದರೂ ಸರ್ಕಾರ ನಮ್ಮ ನಷ್ಟ ಭರಿಸಿ ನಮ್ಮ ನೋವಿಗೆ ಸ್ಪಂದಿಸಲಿ ಎಂದು ಮಿಲ್‌ ಮಾಲೀಕ ನಾಹಿದ್‌ ಚೌದರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''