ಮಾದಕ ವ್ಯಸನ ಮುಕ್ತ ಜಿಲ್ಲೆಯಾಗಿಸಲು ಎಲ್ಲರ ಸಹಕಾರ ಅಗತ್ಯ: ಎಸ್ಪಿ ಡಾ.ವಿಕ್ರಂ ಅಮಟೆ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ಮಾದಕ ವ್ಯಸನ ಮುಕ್ತ ಜಿಲ್ಲೆಯಾಗಿಸಲು ಎಲ್ಲರ ಸಹಕಾರ ಅಗತ್ಯ: ಎಸ್ಪಿ ಡಾ.ವಿಕ್ರಂ ಅಮಟೆ

ಮಾದಕ ವಿರೋಧಿ ಅಭಿಯಾನದ ಅಂಗವಾಗಿ ನಡೆದ ಕ್ರಿಕೆಟ್‌ ಪಂದ್ಯಾವಳಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ಅಭಿಯಾನ ಜಾಥಾಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಬಡಾವಣೆ, ಗ್ರಾಮ ಗಳಲ್ಲಿ ಮಾದಕ ವಸ್ತು ಸೇವನೆ, ಮಾರಾಟ ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಮಾದಕ ವಸ್ತುಗಳ ಬಳಕೆ , ಮಾರಾಟಕ್ಕೆ ಕಡಿವಾಣ ಹಾಕಲು ಇಲಾಖೆಯೊಂದಿಗೆ ಸಹಕರಿಸ ಬೇಕೆಂದರು. ಮಾದಕ ವಸ್ತು ಸೇವನೆ ಎಲ್ಲಾ ವಲಯದಲ್ಲೂ ವ್ಯಾಪಕವಾಗಿ ಹರಡಿ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು ಸಾರ್ವಜನಿಕರು ಅಧಿಕಾರಿಗಳೊಂದಿಗೆ ಕೈಜೋಡಿಸಿದಾಗ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ ಎಂದರು. ಸಾರ್ವಜನಿಕರಲ್ಲಿ ಮಾದಕ ವಸ್ತು ಸೇವನೆ ಹಾಗೂ ಅದರಿಂದ ಉಂಟಾಗುವ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಅದರ ಬಳಕೆಯಿಂದ ದೂರವಿರುವಂತೆ ಮಾಡುವುದೇ ನಮ್ಮ ಈ ಜಾಥಾದ ಉದ್ದೇಶವಾಗಿದೆ. ಇದರ ಅಂಗವಾಗಿ ನಡೆದಂತಹ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪತ್ರಕರ್ತರು, ವಕೀಲರ ತಂಡಗಳು ಭಾಗವಹಿಸಿರುವುದು ಸಂತಸ ತಂದಿದೆ ಎಂದರು. ಈ ರೀತಿಯಾಗಿ ಎಲ್ಲರೂ ಒಟ್ಟಾಗಿ ಒಂದು ಕ್ರೀಡೆ ಆಯೋಜಿಸಿರುವುದರಿಂದ ಎಲ್ಲ ಇಲಾಖೆಯವರು ಕೂಡ ಒಟ್ಟಿಗೆ ಸೇರಿ ಒಂದು ತಂಡದಂತೆ ಕೆಲಸ ಮಾಡಿದರೆ ಎಂತಹ ಸಮಸ್ಯೆ ಬಂದರೂ ಕೂಡ ಎಲ್ಲರೂ ಒಗ್ಗಟ್ಟಿನಿಂದ ನಿಭಾಯಿಸುತ್ತಿದ್ದಾರೆ ಎಂಬ ಸಂದೇಶ ಸಮಾಜಕ್ಕೆ ರವಾನೆ ಆಗಲಿದೆ. ಆ ನಿಟ್ಟಿನಲ್ಲಿ ನಾವು ಈ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.ಕಾಲ್ನಡಿಗೆ ಜಾಥಾ: ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಬೋಳರಾಮೇಶ್ವರ ದೇವಾಲಯದವರೆಗೂ ಸಾಂಕೇತಿಕವಾಗಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಜಾಥಾದಲ್ಲಿ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ, ಕಂದಾಯ ಇಲಾಖೆ, ಆರ್‌ಡಿಪಿಆರ್ ಇಲಾಖೆ, ಪತ್ರಕರ್ತರು ಹಾಗೂ ವಕೀಲರು ಭಾಗವಹಿಸಿದ್ದರು. ಅಂಬರ್ ವ್ಯಾಲಿ ರೆಸಿಡೆನ್ಸಿಯಲ್ ಶಾಲೆ ಆವರಣದಲ್ಲಿ ನಡೆದ ಕ್ರಿಕೆಟ್ ಮ್ಯಾಚ್‌ಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಶುಭಕೋರಿದರು. ಮೊದಲು ಕಂದಾಯ ಇಲಾಖೆ ಮತ್ತು ಪತ್ರಕರ್ತರ ತಂಡಗಳು ಆಯ್ಕೆಯಾಗಿದ್ದು, ಕಂದಾಯ ಇಲಾಖೆ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬಳಿಕ ನಡೆದ ಎರಡನೇ ಮ್ಯಾಚ್‌ನಲ್ಲಿ ಪೊಲೀಸ್ ಇಲಾಖೆ ಮತ್ತು ವಕೀಲರ ತಂಡಗಳು ಆಟವಾಡಿದ್ದು, ಪೊಲೀಸ್ ಇಲಾಖೆ ತಂಡ ಬ್ಯಾಟಿಂಗ್ಗೆ ಆಯ್ಕೆ ಮಾಡಿಕೊಂಡಿತ್ತು. ಅಂತಿಮ ವಾಗಿ ನಡೆದ ಮ್ಯಾಚ್ ನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ನೇತೃತ್ವದ ಇಲಾಖೆ ತಂಡ ಕಪ್ ತನ್ನದಾಗಿಸಿಕೊಂಡಿತ್ತು.ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊಲೀಸ್ ಇಲಾಖೆ ತಂಡದ ನೇತೃತ್ವವನ್ನು ಎಸ್ಪಿ ಡಾ. ವಿಕ್ರಂ ಅಮಟೆ, ಕಂದಾಯ ಇಲಾಖೆ ತಂಡದ ಜವಾಬ್ದಾರಿಯನ್ನ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗೋಪಾಲಕೃಷ್ಣ, ಪತ್ರಕರ್ತರ ತಂಡದ ಜವಾಬ್ದಾರಿಯನ್ನ ಪ್ರೆಸ್‌ ಕ್ಲಬ್ ಅಧ್ಯಕ್ಷ ಪಿ. ರಾಜೇಶ್, ವಕೀಲರ ತಂಡದ ನಾಯಕತ್ವವನ್ನು ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಸುಧಾಕರ್ ವಹಿಸಿಕೊಂಡಿದ್ದರು. 17 ಕೆಸಿಕೆಎಂ 4ಚಿಕ್ಕಮಗಳೂರಿನ ಅಂಬರ್ ವ್ಯಾಲಿ ರೆಸಿಡೆನ್ಸಿಯಲ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ನಡೆದ ಕ್ರಿಕೆಟ್ ಪಂದ್ಯಾವಳಿಯನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಉದ್ಘಾಟಿಸಿದರು. ಎಸ್ಪಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಒ ಡಾ. ಗೋಪಾಲಕೃಷ್ಣ , ಪತ್ರಕರ್ತ ಪಿ. ರಾಜೇಶ್‌ ಇದ್ದರು.

Share this article