ಹಂಪಿ ಜಾತ್ರೆಗೆ ಎತ್ತಿನಬಂಡಿಯಲ್ಲಿ ಹರಿದು ಬಂದ ಭಕ್ತರ ದಂಡು

KannadaprabhaNewsNetwork | Published : Apr 23, 2024 12:46 AM

ಸಾರಾಂಶ

ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಸುತ್ತಮುತ್ತಲ ಸ್ಮಾರಕಗಳಲ್ಲಿ ಭಕ್ತರು ವಾಸ್ತವ್ಯ ಹೂಡಿದ್ದಾರೆ.

ಹೊಸಪೇಟೆ: ದಕ್ಷಿಣ ಭಾರತದ ಕಾಶಿ ಹಂಪಿಯಲ್ಲಿ ಪಂಪಾ ವಿರೂಪಾಕ್ಷೇಶ್ವರ ಹಾಗೂ ಚಂದ್ರಮೌಳೇಶ್ವರ ಬ್ರಹ್ಮ ರಥೋತ್ಸವ ನಿಮಿತ್ತ ಸೋಮವಾರ ಸಂಜೆಯೇ ಭಕ್ತರ ದಂಡು ಹರಿದು ಬರುತ್ತಿದೆ. ಹಂಪಿಯಲ್ಲಿ ಜನಪದ ಸಂಸ್ಕೃತಿಯ ಸೊಬಗಿನ ಸಂಭ್ರಮ ಮನೆ ಮಾಡಿದೆ.

ಹಂಪಿಯಲ್ಲಿ ಏ.23ರಂದು ಬ್ರಹ್ಮರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಹಂಪಿಗೆ ಅಗಮಿಸುತ್ತಿದ್ದು, ಎತ್ತಿನ ಬಂಡಿಗಳಲ್ಲಿ ಭಕ್ತರು ಆಗಮಿಸಿ ಜಾತ್ರೆಗೆ ಮೆರಗು ತಂದಿದ್ದಾರೆ. ರಥಬೀದಿಯಲ್ಲೂ ಅಂಗಡಿ-ಮುಂಗಟ್ಟುಗಳನ್ನು ಹಾಕಲಾಗಿದೆ. ಹಂಪಿಯ ಮಂಟಪಗಳು, ಸ್ಮಾರಕಗಳೇ ಭಕ್ತರಿಗೆ ಆಶ್ರಯ ತಾಣವಾಗಿವೆ. ಹಂಪಿಯತ್ತ ಪ್ರವಾಸಿಗರ ದಂಡು ಹರಿದು ಬರುತ್ತಿದ್ದರಿಂದ ಬಿಸಿಲಿನ ಹೊಡೆತಕ್ಕೆ ಪ್ರವಾಸಿಗರಿಲ್ಲದೇ ಭಣಗುಡುತ್ತಿರುವ ಹಂಪಿಯಲ್ಲಿ ಜೀವ ಕಳೆ ಬಂದಿದೆ.

ಹಂಪಿ ಜಾತ್ರೆಗೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದಲೂ ಭಕ್ತರು ಆಗಮಿಸಿದ್ದಾರೆ. ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಸುತ್ತಮುತ್ತಲ ಸ್ಮಾರಕಗಳಲ್ಲಿ ಭಕ್ತರು ವಾಸ್ತವ್ಯ ಹೂಡಿದ್ದಾರೆ. ಹಂಪಿ ಬರೀ ಐತಿಹಾಸಿಕ ಸ್ಮಾರಕಗಳ ತಾಣವಲ್ಲ, ಇದೊಂದು ಶ್ರದ್ಧಾಕೇಂದ್ರ ಎಂಬುದನ್ನು ಭಕ್ತರು ನಿರೂಪಿಸಿದ್ದಾರೆ.

ಮುಂಜಾಗ್ರತಾ ಕ್ರಮ:

ನಗರದ ಜಂಬುನಾಥಸ್ವಾಮಿ ದೇವಾಲಯದಲ್ಲಿ ರಥದ ಚಕ್ರದಲ್ಲಿ ಸಿಲುಕಿ ಚಿತ್ರಗಾರ ರಾಮು (45) ಎಂಬ ಭಕ್ತರು ಮೃತಪಟ್ಟ ಹಿನ್ನೆಲೆಯಲ್ಲಿ ಈಗ ಹಂಪಿಯಲ್ಲಿ ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ರಥಕ್ಕೆ ಸನ್ನೆ ಹಾಕುವವರಿಂದ ಹಿಡಿದು, ರಥ ಕಟ್ಟುವವರು, ಅರ್ಚಕರಿಗೆ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ವಹಿಸಲು ಸೂಚಿಸಲಾಗಿದೆ. ಇನ್ನೊಂದೆಡೆ ಪೊಲೀಸರು ಬಿಗಿ ಬಂದೋಬಸ್ತ್‌ಗೆ ಈಗಾಗಲೇ ವ್ಯವಸ್ಥೆ ಮಾಡಿಕೊಂಡಿದ್ದು, ಹಿಂದೂ ಧಾರ್ಮಿಕ ದತ್ತಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಭದ್ರತಾ ನಿಯಮ ಪಾಲಿಸಲು ಸೂಚಿಸಿದ್ದಾರೆ.

ಹಂಪಿಯ ದಕ್ಷಿಣ ಭಾರತದ ಕಾಶಿ ಹಂಪಿಯಲ್ಲಿ ಪಂಪಾ ವಿರೂಪಾಕ್ಷೇಶ್ವರ, ಚಂದ್ರಮೌಳೇಶ್ವರ ಬ್ರಹ್ಮ ರಥೋತ್ಸವದ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಯಾವುದೇ ಅವಘಡ ಸಂಭವಿಸದಂತೆ ಭದ್ರತಾ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಪೊಲೀಸ್ ಇಲಾಖೆಗೂ ಸೂಚಿಸಲಾಗಿದೆ ಎನ್ನುತ್ತಾರೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌.

Share this article