ಹಾಸನ : ವಾರಾಂತ್ಯದ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಿಯ ದರ್ಶನಕ್ಕೆ ಭಾನುವಾರ ಭಕ್ತಸಾಗರವೇ ಹರಿದು ಬಂತು.
ದರ್ಶನದ ಎಲ್ಲಾ ಸಾಲುಗಳು ತುಂಬಿ ತುಳುಕಿದ್ದವು. ಆದರೂ, ದರ್ಶನಕ್ಕೆ ಯಾವುದೇ ಅಡಚಣೆ ಉಂಟಾಗಲಿಲ್ಲ, ಅವ್ಯವಸ್ಥೆ ಕಾಣಿಸಲಿಲ್ಲ. ಭಕ್ತರಿಗೆ ಅತ್ಯಂತ ತ್ವರಿತವಾಗಿ ಮತ್ತು ಸುಲಲಿತವಾಗಿ ದೇವಿಯ ದರ್ಶನವಾಯಿತು. ವ್ಯವಸ್ಥೆ ಶಿಸ್ತಿನಿಂದ ನಡೆದಿದ್ದು, ಭಕ್ತರಿಂದ ಮೆಚ್ಚುಗೆ ಗಳಿಸಿತು. ಹೀಗಾಗಿ, ಭಕ್ತರು ಗೋಲ್ಡ್ ಕಾರ್ಡ್ ಸಾಲಿಗಿಂತಲೂ ಹೆಚ್ಚಾಗಿ ಉಚಿತ ದರ್ಶನದ ಸಾಲಿನಲ್ಲಿಯೇ ತೆರಳಿ, ದೇವಿಯ ದರ್ಶನ ಪಡೆದರು.
ಸ್ಕೌಟ್ಸ್ ಮತ್ತು ಗೈಡ್ಸ್, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ದೇವಸ್ಥಾನ ಸಿಬ್ಬಂದಿ ಭಕ್ತರ ಸುಗಮ ಚಲನವಲನಕ್ಕಾಗಿ ಸೇವೆ ಸಲ್ಲಿಸಿದರು. ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ತೊಂದರೆಯಿಲ್ಲದೆ ದೇವಿಯ ದರ್ಶನ ಪಡೆದರು. ಹಾಸನಾಂಬೆ ದೇವಿಯ ಮುಖದ ಕಿರಣವನ್ನು ನೋಡಿದಾಗ ಹಲವಾರು ಭಕ್ತರು ಕಣ್ಣೀರಿನಿಂದ ಭಕ್ತಿಭಾವದಲ್ಲಿ ತೇಲಿದರು. ಕೆಲವರು ಕುಟುಂಬ ಸಮೇತ, ಕೆಲವರು ಸ್ನೇಹಿತರೊಂದಿಗೆ ಹಾಗೂ ಹಲವರು ಪ್ರತ್ಯೇಕವಾಗಿ ತಾಯಿ ದರ್ಶನಕ್ಕಾಗಿ ಬಂದಿದ್ದರು.
ಗೋಲ್ಡ್ ಕಾರ್ಡ್ ಸ್ಕ್ಯಾನ್ ಮಾಡದವರ ಅಮಾನತು:ಕರ್ತವ್ಯ ಲೋಪವೆಸಗಿದ ಕಂದಾಯ ಇಲಾಖೆಗೆ ಸೇರಿದ ನಾಲ್ವರು ಸಿಬ್ಬಂದಿಯನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿದ್ದಾರೆ. ಗೋಲ್ಡ್ ಕಾರ್ಡ್ ಸಾಲಿನಲ್ಲಿ ಕಾರ್ಡ್ ಸ್ಕ್ಯಾನ್ ಮಾಡದೆ ಭಕ್ತರನ್ನು ಸಾಲಿನೊಳಕ್ಕೆ ಬಿಟ್ಟ ಆರೋಪದಲ್ಲಿ ಆರ್‌ಐಗಳಾದ ಗೋವಿಂದರಾಜ್ ಹಾಗೂ ಯೋಗಾನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಸಂತೋಷ್ ಹಾಗೂ ಶಿರಾಜ್ ಮಹಿಮಾ ಪಟೇಲ್ ಅವರನ್ನು ಅಮಾನತು ಮಾಡಲಾಗಿದೆ.
‘ಮೈಮೇಲೆ ದೇವಿ ಬಂದಿದ್ದಾಳೆ’ ಎಂದು ಕಿರುಚಾಡಿದ ಮಹಿಳೆ:ಹಾಸನಾಂಬೆ ದೇವಿಯ ದರ್ಶನಕ್ಕಾಗಿ ಬಂದಿದ್ದ ಮಹಿಳೆಯೊಬ್ಬಳು ಧರ್ಮದರ್ಶನದ ಸಾಲಿನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಮೈಮೇಲೆ ದೇವಿ ಬಂದಂತೆ ವರ್ತಿಸಿದ ಘಟನೆ ಭಾನುವಾರ ಸಂಭವಿಸಿದೆ.
ದರ್ಶನದ ಸಾಲಿನಲ್ಲಿ ನಿಂತಿದ್ದಾಗಲೇ ಮಹಿಳೆ ಇದ್ದಕ್ಕಿದ್ದಂತೆ ತಲೆಯನ್ನು ಎತ್ತಿಕೊಂಡು ಕಿರುಚಾಡಲು ಆರಂಭಿಸಿದಳು. ‘ನಾನು ದೇವಿ ಬಂದಿದ್ದೀನಿ, ಇಲ್ಲಿ ಹೋಗಲು ಆಗುತ್ತಿಲ್ಲ. ಎಲ್ಲರೂ ನನ್ನನ್ನು ಅಪಹಾಸ್ಯ ಮಾಡುತ್ತಿದ್ದಾರೆ. ನಾನು ಬೇರೆ ದಾರಿಯಿಂದ ಹೋಗಬೇಕು’ ಎಂದು ಕೂಗಿದಳು. ಸ್ಥಳದಲ್ಲಿದ್ದ ಕೆಲವು ಯುವಕರು ಈ ದೃಶ್ಯ ನೋಡಿ ಶಿಳ್ಳೆ ಹಾಕಿ ಚಪ್ಪಾಳೆ ತಟ್ಟಿದರು. ಮಹಿಳೆಯನ್ನು ಸಮಾಧಾನಪಡಿಸಲು ಸುತ್ತಲಿನವರು ಹಾಗೂ ಮತ್ತೊಬ್ಬ ಮಹಿಳೆ ಮುಖಕ್ಕೆ ನೀರು ಚಿಮುಕಿಸಿದರು. ಆದರೆ, ಮಹಿಳೆ ಸಮಾಧಾನಗೊಳ್ಳದೆ ನೆಲದಲ್ಲೇ ಕುಳಿತು ತಲೆ ಅಲ್ಲಾಡಿಸುತ್ತಾ ಮಾತು ಮುಂದುವರಿಸತೊಡಗಿದಳು.ಆಗ ಪೊಲೀಸರು ಆಗಮಿಸಿ, ಧರ್ಮದರ್ಶನದ ಸಾಲಿನಲ್ಲೇ ಮಹಿಳೆಯನ್ನು ಶಾಂತವಾಗಿ ಕರೆದೊಯ್ದು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ನಂತರ ಪರಿಸ್ಥಿತಿ ಸಾಮಾನ್ಯಗೊಂಡಿತು. ಮಹಿಳೆ ಯಾವುದೇ ಅಸಭ್ಯ ವರ್ತನೆ ಅಥವಾ ಅಪಾಯಕಾರಿ ಸ್ಥಿತಿಯಲ್ಲಿ ಇರಲಿಲ್ಲ. ಕ್ಷಣಿಕ ಭಾವನಾತ್ಮಕ ಉದ್ರೇಕದಿಂದ ಹೀಗೆ ವರ್ತಿಸಿದ್ದು ಎಂದು ತಿಳಿದು ಬಂದಿದೆ.