ಸೆಕ್ಯೂರಿಟಿ ಇಲ್ಲದ ಬ್ಯಾಂಕ್‌ನಲ್ಲಿ ಹಗಲು ದರೋಡೆ?

KannadaprabhaNewsNetwork |  
Published : Sep 17, 2025, 01:10 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮೊದಲಿನಿಂದಲೂ ಭೀಮಾ ತೀರ ಕೊಲೆ ಸುಲಿಗೆಗಳಿಗೆ ಖ್ಯಾತಿ ಪಡೆದಿತ್ತು. ಇದೀಗ ಬ್ಯಾಂಕ್‌ ದರೋಡೆಗಳಿಗೆ ಖ್ಯಾತಿ ಪಡೆಯುತ್ತಿರುವ ಆರೋಪ ಕೇಳಿಬರುತ್ತಿದೆ. ಕಳೆದ ಮೇ 25ರಂದು ಬಸವನ‌ಬಾಗೇವಾಡಿ ತಾಲೂಕಿನ ಮನಗೂಳಿಯ ಕೆನರಾ ಬ್ಯಾಂಕ್ ಕಳ್ಳತನ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಮಾತ್ರವಲ್ಲ, ರಾಜ್ಯದ ಅತಿದೊಡ್ಡ ಕಳ್ಳತನ ಪ್ರಕರಣ ಇದಾಗಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ ₹ 40 ಕೋಟಿ ಮೌಲ್ಯದ 39 ಕೆಜಿ ಚಿನ್ನಾಭರಣ ಹಾಗೂ ₹5 ಲಕ್ಷ ನಗದನ್ನು ಅಪರಿಚಿತರು ಹಾಡಹಗಲೇ ಬಂದು ದೋಚಿಕೊಂಡು ಪರಾರಿಯಾಗಿದ್ಧಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಮೊದಲಿನಿಂದಲೂ ಭೀಮಾ ತೀರ ಕೊಲೆ ಸುಲಿಗೆಗಳಿಗೆ ಖ್ಯಾತಿ ಪಡೆದಿತ್ತು. ಇದೀಗ ಬ್ಯಾಂಕ್‌ ದರೋಡೆಗಳಿಗೆ ಖ್ಯಾತಿ ಪಡೆಯುತ್ತಿರುವ ಆರೋಪ ಕೇಳಿಬರುತ್ತಿದೆ. ಕಳೆದ ಮೇ 25ರಂದು ಬಸವನ‌ಬಾಗೇವಾಡಿ ತಾಲೂಕಿನ ಮನಗೂಳಿಯ ಕೆನರಾ ಬ್ಯಾಂಕ್ ಕಳ್ಳತನ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಮಾತ್ರವಲ್ಲ, ರಾಜ್ಯದ ಅತಿದೊಡ್ಡ ಕಳ್ಳತನ ಪ್ರಕರಣ ಇದಾಗಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ ₹ 40 ಕೋಟಿ ಮೌಲ್ಯದ 39 ಕೆಜಿ ಚಿನ್ನಾಭರಣ ಹಾಗೂ ₹5 ಲಕ್ಷ ನಗದನ್ನು ಅಪರಿಚಿತರು ಹಾಡಹಗಲೇ ಬಂದು ದೋಚಿಕೊಂಡು ಪರಾರಿಯಾಗಿದ್ಧಾರೆ. ಕೆನರಾ ಬ್ಯಾಂಕ್‌ ಪ್ರಕರಣದಲ್ಲಿ ಕಳ್ಳರ ಹಿಂದೆ ಬಿದ್ದಿದ್ದ ಖಾಕಿಗಳು ಎರಡು ತಿಂಗಳಲ್ಲಿ 15ಜನರನ್ನು ಬಂಧಿಸಿ, ₹ 40 ಕೋಟಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದರು.

ಮನಗೂಳಿ ಕೆನರಾ ಬ್ಯಾಂಕ್‌ ಪ್ರಕರಣ ಜನರ ಮನಸಿನಿಂದ ಮಾಸುವ ಮುನ್ನವೇ ರಾಜ್ಯದ ಗಡಿ ಪ್ರದೇಶವಾಗಿರುವ ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನ್ನು ಅಪರಿಚಿತ ಮುಸುಕುಧಾರಿಗಳು ದೋಚಿಕೊಂಡು ಪರಾರಿಯಾಗಿದ್ದಾರೆ. ಮಂಗಳವಾರ ಸಂಜೆ 6ಗಂಟೆ ಸುಮಾರಿನಲ್ಲಿ ಘಟನೆ ನಡೆದಿದ್ದು, ಕಾರಿನಲ್ಲಿ ಬಂದಿದ್ದ ಮೂವರು ಮುಸುಕುಧಾರಿಗಳು ನೇರವಾಗಿ ಬ್ಯಾಂಕ್ ಗೆ ನುಗ್ಗಿದ್ದಾರೆ. ಈ ವೇಳೆ ಬ್ಯಾಂಕ್‌ನಲ್ಲಿದ್ದ ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಇಬ್ಬರು ಗ್ರಾಹಕರನ್ನು ಕಂಟ್ರಿ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸಿದ್ದು, ಅವರ ಕೈಕಾಲು ಕಟ್ಟಿ ಹಾಕಿದ್ದಾರೆ.

ಬಳಿಕ ಬ್ಯಾಂಕ್‌ನಲ್ಲಿ ಸಂಗ್ರಹವಾಗಿದ್ದ ಒಂದೂವರೆ ಕೋಟಿಯಷ್ಟು ಹಣ ಹಾಗೂ 21 ಕೆಜಿಯಷ್ಟು ಚಿನ್ನಾಭರಣವನ್ನು ದರೋಡೆ ಮಾಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಬಳಿಕ ತಾವು ತಂದಿದ್ದ ಮಾರುತಿ ಸುಜುಕಿ ಕಾರಿನಲ್ಲಿ ಮಹಾರಾಷ್ಟ್ರದ ಕಡೆಗೆ ಪರಾರಿ ಆಗಿದ್ದಾರೆ. ಈ ವೇಳೆ ಸೋಲಾಪುರ ಜಿಲ್ಲೆಯ‌ ಮಂಗಳವೆಢೆ ತಾಲೂಕಿನ ಹುಲಜಂತಿ ಬಳಿ ರಸ್ತೆಮೇಲೆ ಹೊರಟಿದ್ದ ಕುರಿಗಳ ಹಿಂಡಿಗೆ ಕಾರ್‌ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಕಾರನ್ನು ಸ್ಥಳದಲ್ಲೇ ಬಿಟ್ಟು ಕಾಲ್ಕಿತ್ತಿದ್ದಾರೆ. ಸ್ಥಳದಲ್ಲಿದ್ದ KA 24 DH 2456 ನಂಬರ್ ಕಾರನ್ನು ಪೊಲೀಸರು ವಶಕ್ಕೆ ಪಡೆದು, ಪರಿಶೀಲಿಸುತ್ತಿದ್ದಾರೆ. ಅಷ್ಟಕ್ಕೂ ಈ ಬ್ಯಾಂಕ್‌ಗೆ ಕಡ್ಡಾಯವಾಗಿ ಭದ್ರತಾ ಸಿಬ್ಬಂದಿ ಇರಬೇಕು. ಆದರೆ, ಈ ಬ್ಯಾಂಕ್‌ಗೆ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಕೃತ್ಯಕ್ಕೆ ಕಾರಣವಾಯಿತು ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ.

ಖದೀಮರಿಗಾಗಿ ಖಾಕಿ ಶೋಧ:

ಈಗಾಗಲೇ ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ, ಪರಿಶೀಲಿಸುತ್ತಿದ್ದಾರೆ. ಬ್ಯಾಂಕ್ ನಲ್ಲಿದ್ದ ಸಿಸಿ ಕ್ಯಾಮೆರಾ, ಸುತ್ತಮುತ್ತಲಿನ ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಇಡು ಎರಡನೇ ಪ್ರಕರಣ ಆಗಿರುವುದರಿಂದ‌ ಬ್ಯಾಂಕ್ ಗಳು ಎಷ್ಟರಮಟ್ಟಿಗೆ ಸುರಕ್ಷಿತ ಎಂಬ ಸಂಶಯ ಕಾಡತೊಡಗಿದೆ. ದಿನನಿತ್ಯ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುವ ಬ್ಯಾಂಕುಗಳು ಒಂದೆರಡು ಬಂದೂಕುಧಾರಿ ಸೆಕ್ಯೂರಿಟಿಗಳನ್ನು ನೇಮಿಸಿಕೊಳ್ಳುವಲ್ಲಿ ಜಿಪುಣತನ ಮಾಡುತ್ತಿವೆ. ಸೂಕ್ತ ಭದ್ರತೆ ಇಲ್ಲದ್ದನ್ನು ಗಮನಿಸುವ ದರೋಡೆಕೋರರು ಹೊಂಚುಹಾಕಿ ಹೀಗೆ ಲೂಟಿ ಹೊಡೆಯುತ್ತಿದ್ದಾರೆ. ಮನಗೂಳಿ ಕೆನರಾ ಬ್ಯಾಂಕ್ ಪ್ರಕರಣದಲ್ಲಿ ಮ್ಯಾನೇಜರ್ ನೆ ಭಾಗಿಯಾಗಿದ್ದ. ಇದೀಗ ಈ ಪ್ರಕರಣದಲ್ಲಿ ಯಾರ ಕೈವಾಡ ಇದೆ ಎಂಬುದು ತಿಳಿಯಬೇಕಿದೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ