ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಹಲವು ದಶಕಗಳಿಂದ ಕುಂಟುತ್ತಲೇ ಸಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಿಗೆ ಕಾಯಕಲ್ಪ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಯುಕೆಪಿ 3ನೇ ಹಂತದ ಯೋಜನೆಯಲ್ಲಿ ಮುಳುಗಡೆಯಾಗುವ ಪ್ರತಿ ಎಕರೆ ಒಣ ಬೇಸಾಯ ಭೂಮಿಗೆ ₹ 30 ಲಕ್ಷ ಹಾಗೂ ನೀರಾವರಿ ಭೂಮಿಗೆ ₹40 ಲಕ್ಷ ಪರಿಹಾರ ಕೊಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ ಇದಕ್ಕೆ ಅಪಸ್ವರ ಎತ್ತಿರುವ ಅನ್ನದಾತರು ಇಷ್ಟು ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಒಣ ಬೇಸಾಯದ ಭೂಮಿಗೆ ₹ 50 ಲಕ್ಷ ಹಾಗೂ ನೀರಾವರಿ ಭೂಮಿಗೆ ₹70 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಒಪ್ಪಿಕೊಳ್ಳದಿದ್ದಲ್ಲಿ ಮತ್ತೆ ಕಾನೂನು ಹೋರಾಟದ ಹಾದಿ ಹಿಡಿಯುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.ವಿಧಾನಸೌಧದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಲು ಮಂಗಳವಾರ ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ರೈತರು, ಸಚಿವರ ಅಭಿಪ್ರಾಯ ಪಡೆದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಪರಿಹಾರ ದರವು ಕೇವಲ ಕೃಷ್ಣಾ ಭಾಗ್ಯ ಜಲನಿಗಮ ವ್ಯಾಪ್ತಿಯ ಯುಕೆಪಿ-3ನೇ ಹಂತದ ಯೋಜನೆ ಪ್ರದೇಶಕ್ಕೆ ಮಾತ್ರ ಸೀಮಿತವಾಗಲಿದೆ. ಈ ಯೋಜನೆಯಲ್ಲಿ ₹70 ಸಾವಿರ ಕೋಟಿ ಕೇವಲ ಭೂಸ್ವಾಧೀನ ಪ್ರಕ್ರಿಯೆ ವ್ಯಯವಾಗಲಿದೆ.ಲಕ್ಷಾಂತರ ಎಕರೆ ಭೂಮಿ ಸ್ವಾಧೀನ:
ಈ ಯೋಜನೆಗೆ 1,33,867 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಈ ಪೈಕಿ 75,563 ಎಕರೆ ಮುಳುಗಡೆಯಾಗಲಿದ್ದು, ಕಾಲುವೆಗಾಗಿ 51,837 ಎಕರೆ ಭೂಮಿ ಅಗತ್ಯವಿದೆ. ಇನ್ನು ಪುನಶ್ಚೇತನ ಕಾರ್ಯಕ್ಕೆ 6,467 ಎಕರೆ ಜಮೀನು ಬೇಕಾಗಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸುಮಾರು 20 ಸಾವಿರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಈ ಪ್ರಕರಣಗಳನ್ನು ರಾಜಿ ಸಂಧಾನ ಕಾನೂನು ಪ್ರಕಾರ ಇತ್ಯರ್ಥ ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಮೊದಲ ಬಾರಿಗೆ ರಾಜ್ಯದಲ್ಲಿ ಭೂಸ್ವಾಧೀನ, ಪುನಶ್ಚೇತನ ಹಾಗೂ ಪರಿಹಾರ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಿದೆ. ಪುನಶ್ಚೇತನ ಕಾರ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರಕರಣಗಳಿರುವ ಕಾರಣ, ಸರ್ಕಾರ ಹೊಸ ನೀತಿ ರೂಪಿಸಲು ತೀರ್ಮಾನಿಸಿದೆ. ನ್ಯಾಯಯುತ ಪರಿಹಾರ, ಭೂಸ್ವಾಧೀನ ಪಾರದರ್ಶಕತೆ ಹಕ್ಕು ಕಾಯ್ದೆಯ ಸೆಕ್ಷನ್ 51ರಡಿಯಲ್ಲಿ ಭೂಸ್ವಾಧೀನ, ಪುನಶ್ಚೇತನ ಹಾಗೂ ಪರಿಹಾರ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಿದೆ.-----------
ಕೋಟ್.....ಸರ್ಕಾರದ ಅಧಿಕೃತ ತೀರ್ಮಾನಕ್ಕೆ ವಿಜಯಪುರ ಜಿಲ್ಲೆಯ ರೈತರ ವಿರೋಧವಿದೆ. ನಮಗೆ ಹಣ ಬೇಡ ಅದೇ ಹಣ ನಿಮಗೆ ಕೊಡುತ್ತೇವೆ. ಸಿಎಂ, ಡಿಸಿಎಂ ಅವರೇ ನಮಗೆ ಜಮೀನು ಕೊಡಿಸಲಿ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನಿಗೆ ₹30, 40 ಲಕ್ಷ ಯಾವ ಮಾನದಂಡದ ಮೇಲೆ ನಿಗದಿ ಮಾಡಿದ್ದಾರೆ? ಕನಿಷ್ಟ ₹ 50, 70 ಲಕ್ಷ ಪರಿಹಾರ ಕೊಡಬೇಕು.
- ಅರವಿಂದ ಕುಲಕರ್ಣಿ, ರೈತ ಮುಖಂಡ---------------
ಕೋಟ್:ಸ್ವಾಧೀನವಾಗುವ ಭೂಮಿಗೆ ಕನಿಷ್ಠ ₹ 50 ಲಕ್ಷ ಪರಿಹಾರ ಕೊಡಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರದ ಬಳಿ ಪರಿಹಾರ ಕೊಡಲು ಹಣವೇ ಇಲ್ಲ. ನಾಮಕಾವಾಸ್ತೇ ಎಂಬಂತೆ ಸಭೆಗಳನ್ನು ಮಾಡಿ ರೈತರ, ಸಂತ್ರಸ್ತರ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಸರ್ಕಾರದಿಂದ ಮೂವರು ವಕೀಲರು ಇದ್ದರೂ ಈ ಕೇಸ್‌ಗಳಿಗೆ ಸಂಬಂಧಿಸಿದಂತೆ ಒಬ್ಬರೂ ನ್ಯಾಯಲಯಕ್ಕೆ ಹಾಜರಾಗಿಲ್ಲ. ಈ ಹಿಂದಿನ ಸಾಕಷ್ಟು ಕೇಸ್‌ಗಳಿಗೆ ಇವರು ಇನ್ನೂ ಪರಿಹಾರ ಕೊಟ್ಟಿಲ್ಲ, ವಿಳಂಬ ಪರಿಹಾರಕ್ಕೆ ಶೇ.15 ಹಾಕಿ ಕೊಡಬೇಕಾಗಿರುವ ಬಡ್ಡಿಯ ಹಣವೇ ಬೆಟ್ಟದಷ್ಟಾಗಿದೆ. ಇನ್ನು ಇದು ಇವರಿಂದ ಕಾರ್ಯರೂಪಕ್ಕೆ ಬರುವುದು ಡೌಟ್ ಇದ್ದು, ಕೇವಲ ಘೋಷಣೆಯಾಗಿಯೇ ಉಳಿಯಲಿದೆಯೇ ಎಂಬ ಆತಂಕವಿದೆ.ಉಮೇಶ ಕಾರಜೋಳ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ