ಕೃಷಿಕರ ತೋಟದ ಕೆರೆಯಲ್ಲಿ ಕಾಡುಕೋಣ ಮೃತದೇಹ ಪತ್ತೆ

KannadaprabhaNewsNetwork | Published : Apr 23, 2024 12:50 AM

ಸಾರಾಂಶ

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಬದ್ಯಾರು ಎಂಬಲ್ಲಿ ಕೃಷಿಕರೊಬ್ಬರ ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತ ದೇಹ ಭಾನುವಾರ ಪತ್ತೆಯಾಗಿದೆ. ಕಾಡುಕೋಣದ ಮೃತ ದೇಹವನ್ನು ಅರಣ್ಯ ಇಲಾಖೆ, ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಹಾಗೂ ಸ್ಥಳೀಯರು ಸೇರಿ ಸೋಮವಾರ ಕೆರೆಯಿಂದ ಮೇಲೆತ್ತಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕೊಯ್ಯೂರು ಗ್ರಾಮದ ಬದ್ಯಾರು ಎಂಬಲ್ಲಿ ಕೃಷಿಕರೊಬ್ಬರ ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತ ದೇಹ ಭಾನುವಾರ ಪತ್ತೆಯಾಗಿದೆ.

ಕಾಡುಕೋಣದ ಮೃತ ದೇಹವನ್ನು ಅರಣ್ಯ ಇಲಾಖೆ, ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಹಾಗೂ ಸ್ಥಳೀಯರು ಸೇರಿ ಸೋಮವಾರ ಕೆರೆಯಿಂದ ಮೇಲೆತ್ತಿದರು.

ನೀರು ಅರಸಿಕೊಂಡು ಬಂದ ಸುಮಾರು 6 ವರ್ಷ ಪ್ರಾಯದ ಕಾಡುಕೋಣ ನೀರು ಕುಡಿದ ಬಳಿಕ ಕೆರೆಯ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾರದೆ ಎರಡು ದಿನಗಳ ಹಿಂದೆ ಮೃತಪಟ್ಟಿರುವ ಕುರಿತು ಶಂಕಿಸಲಾಗಿದೆ. ಘಟನೆ ಮನೆಯವರಿಗೆ ತಡವಾಗಿ ತಿಳಿದು ಬಂದಿದ್ದು ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಎಸಿಎಫ್ ಸುಬ್ಬಯ್ಯ ನಾಯ್ಕ್ ,ಉಪ್ಪಿನಂಗಡಿ ಆರ್ ಎಫ್ ಒ ಜಯಪ್ರಕಾಶ್, ಡಿ ಆರ್ ಎಫ್ ಒ ಭರತ್ ಹಾಗೂ ಸಿಬ್ಬಂದಿ ಸಮಕ್ಷಮದಲ್ಲಿ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರಾದ ರವೀಂದ್ರ ನಾಯ್ಕ ಉಜಿರೆ, ಅನಿಲ್, ಸುರೇಂದ್ರ, ಶರೀಫ್, ಸುಲೇಮಾನ್, ಹರೀಶ್ ಕೂಡಿಗೆ, ಅವಿನಾಶ್ ಭಿಡೆ, ಪ್ರಕಾಶ್, ನಳಿನ್ ಬೇಕಲ್ ಮತ್ತಿತರರು ದೇಹ ಮೇಲೆತ್ತಲು ಸಹಕರಿಸಿದರು. ಪಶುವೈದ್ಯಾಧಿಕಾರಿ ಡಾ.ವಿಶ್ವನಾಥ್ ಪೋಸ್ಟ್ ಮಾರ್ಟಂ ನಡೆಸಿದ ಬಳಿಕ ಮೃತ ದೇಹವನ್ನು ದಫನ

ಮಾಡಲಾಯಿತು.ಕಾಲು, ಕುತ್ತಿಗೆ ಕಟ್ಟಿದ ಸ್ಥಿತಿಯಲ್ಲಿ ಹೋರಿ ಮೃತದೇಹ ಪತ್ತೆ:

ಕಾಲು ಮತ್ತು ಕುತ್ತಿಗೆಯನ್ನು ಅಮಾನುಷವಾಗಿ ಹಗ್ಗದಿಂದ ಕಟ್ಟಿದ ಸ್ಥಿತಿಯಲ್ಲಿರುವ ಹೋರಿಯ ಮೃತದೇಹ ಶಿರಾಡಿ ಗ್ರಾಮದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ರವಿಚಂದ್ರ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಶಿರಾಡಿಯಲ್ಲಿನ ತನ್ನ ತೋಟಕ್ಕೆ ನೀರು ಬಿಡಲೆಂದು ಹೋದಾಗ ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಿಸಿದ ಜಾಗದ ಒಳ ರಸ್ತೆಯ ಬದಿಯಲ್ಲಿ, ಒಂದು ಹೋರಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಸಮೀಪ ಹೋಗಿ ನೋಡಿದಾಗ, ಹೋರಿಯ ಕಾಲು ಮತ್ತು ಕುತ್ತಿಗೆಯನ್ನು ಹಗ್ಗದಿಂದ ಕಟ್ಟಿರುವುದು ಕಂಡು ಬಂದಿದೆ. ಹೋರಿಯನ್ನು ಹಿಂಸಾತ್ಮಕವಾಗಿ ಕಟ್ಟಿ ಅಕ್ರಮವಾಗಿ ಸಾಗಾಟ ಮಾಡುವ ವೇಳೆ ಮೃತಪಟ್ಟಿದ್ದು, ಹೆದ್ದಾರಿ ಬದಿಯಲ್ಲಿ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Share this article