ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪಕ್ಷ ವಿರೋಧಿ ಕೆಲಸ ಮಾಡುತ್ತಿರುವ ವಿಪ ಸದಸ್ಯ ಪಿ.ಎಚ್.ಪೂಜಾರ ಬಗ್ಗೆ ಈಗಾಗಲೇ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ಕೇಂದ್ರದ ನಾಯಕರಿಗೆ ಕಳುಹಿಸಿ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣುವವರೆಗೆ ಬಿಡುವುದಿಲ್ಲ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15 ವರ್ಷ ವಿವಿಧ ಪಕ್ಷ ಓಡಾಡಿ ಕೈಕಾಲು ಹಿಡಿದು ಪಕ್ಷಕ್ಕೆ ಮರಳಿ ವಿಧಾನ ಪರಿಷತ್ ಸದಸ್ಯರಾದ ನಂತರ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತ, ತನ್ನ ಗೆಲುವಿಗೆ ಕಾರಣರಾದ ಕಾರ್ಯಕರ್ತರ ಬಗ್ಗೆ ಇಲ್ಲಸಲ್ಲದನ್ನು ಮಾತನಾಡಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ತಾನು ಮಾಡಿರುವ ಅಕ್ರಮ ಬಯಲಿಗೆ ಎಳೆಯಬೇಕು. ವಿಫಲವಾದರೆ ಸಾರ್ವಜನಿಕವಾಗಿ ಕ್ಷೆಮೆಯಾಚಿಸಬೇಕು. ವಿನಾಕಾರಣ ಮಾನಹಾನಿಯಾಗುವ ಹೇಳಿಕೆ ನೀಡುತ್ತಿರುವ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ವಕೀಲರೊಂದಿಗೆ ಅಧ್ಯಯನ ನಡೆಸಿ ದಿಟ್ಟ ನಿರ್ಧಾರವನ್ನು ಶೀಘ್ರ ಕೈಗೊಳ್ಳಲಾಗುವುದು ಎಂದು ಹೇಳಿದರು.ಶಾಸಕರಾಗಿದ್ದಾಗ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಏನಾದರೂ ಅಕ್ರಮ ನಡೆದಿದ್ದರೆ ಬಯಲಿಗೆ ತನ್ನಿ. ನನಗೆ ಯಾವುದೇ ಭಯವಿಲ್ಲ ಎಂದ ಅವರು, ನಾನು ಯಾವ ಅಕ್ರಮ ಮಾಡಲು ಹೋಗಿಲ್ಲ. ಪೂಜಾರ ಅಕ್ರಮ ಎಷ್ಟಿದೆ ಎಂಬುದು ನೋಡಿಕೊಳ್ಳಲಿ. ಇದನ್ನು ಹೊರ ತೆಗೆದು ಎಲ್ಲಿ ದಾಖಲೆ ಕೊಡಬೇಕು ಅಲ್ಲಿ ಕೊಡುವೆ. 15 ವರ್ಷ ಪಕ್ಷದಿಂದ ಹೊರಗೆ ಇದ್ದು ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ ನಾಯಕರ ಕೈಕಾಲು ಹಿಡಿದು ಪಾರ್ಟಿಗೆ ಬಂದು ಈಗ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವುದು ದಾಖಲೆ ಇದೆ ಎಂದು ದೂರಿದರು.
ಬಿಟಿಡಿಎದಲ್ಲಿ ಸದಸ್ಯತ್ವ ಬೇಕಾದರೆ ಅಧಿವೇಶನದಲ್ಲಿ ಚರ್ಚೆ ನಡೆಸಿ ಸದನದಲ್ಲಿ ತಿದ್ದುಪಡಿ ಮಾಡಿಸಿಕೊಂಡು ಬರಬೇಕಾಗಿತ್ತು. ಅದನ್ನು ಬಿಟ್ಟು ಬಿಟಿಡಿಎದಲ್ಲಿ ಸದಸ್ಯತ್ವ ಸ್ಥಾನ ಸಿಗಲಿಲ್ಲ ಎಂದು ನ್ಯಾಯಾಲಯಕ್ಕೆ ಹೋದ ಪರಿಣಾಮದಿಂದಲೇ ಬಿಟಿಡಿಎ ರದ್ದಾಗಲು ಕಾರಣವಾಯಿತು. ಈಗ ಸ್ಟೇ ಕೂಡ ಬಂದಿದೆ. ಆದರೆ ಒಮ್ಮೆ ನ್ಯಾಯಾಲಯಕ್ಕೆ ಹೋದ ಮೇಲೆ ಅದು ತೂಗುಗತ್ತಿ ಇದ್ದಂತೆ. ಯಾವ ರೀತಿ ನಿರ್ಣಯ ಬರುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ ಎಂದು ಹೇಳಿದರು.ಇವರು ಯಾವ ಸೀಮೆ ವಕೀಲರು?:ನಾನು ಹತ್ತನೇ ತರಗತಿ ಉತ್ತೀರ್ಣ ಆಗಿದ್ದೇನೋ ಇಲ್ಲವೆಂಬುದನ್ನು ಆರ್ಟಿಐ ಮೂಲಕ ಬಸವೇಶ್ವರ ಸ್ಕೂಲಿನಲ್ಲಿ ಕೇಳಿ ಮಾಹಿತಿ ಪಡೆದುಕೊಳ್ಳಿ. ಪೂಜಾರ ಎಲ್ಎಲ್‌ಬಿಯನ್ನು ಮುಗಿಸಿ ಒಮ್ಮೆಯೂ ಕೋಟ್ ಹಾಕಿದ್ದು ನೋಡಿಲ್ಲ. ಇವರು ಯಾವ್ ಸೀಮೆ ವಕೀಲರು ಎಂದು ಕಿಡಿಕಾರಿದರು.
ಏಳು ಸಾವಿರ ಜನ ಸಿಬ್ಬಂದಿ ಸಂಸ್ಥೆಯಲ್ಲಿ ಕೆಲಸ ಮಾಡಿದರೆ 50 ಸಾವಿರ ಮಕ್ಕಳು ಬಿವಿವಿ ಸಂಘದಲ್ಲಿ ಓದುತ್ತಿದ್ದಾರೆ. ಇಂತಹ ಸಂಸ್ಥೆಯನ್ನು ಬೆಳೆಸಿದ ಹೆಮ್ಮೆ ನಮಗೆ ಇದೆ. ಆದರೆ ನಿಮ್ಮಿಂದ ತುಳಸಿಗೇರಿ ಹನಮಪ್ಪನ ಗುಡಿ ಉದ್ದಾರವಾಗಲಿಲ್ಲ ಎಂದ ಅವರು, ನನ್ನ ಮನೆಯಲ್ಲಿ ನನ್ನ ಮಗ ಕೂಡ ರಾಜಕಾರಣ ಮಾಡುವುದಿಲ್ಲ. ಪಕ್ಷದ ಎಲ್ಲ ಸಂಘಟನೆ ನನ್ನೊಂದಿಗೆ ಕಾರ್ಯಕರ್ತರೇ ಮಾಡುತ್ತಾರೆ. ಕಾರ್ಯಕರ್ತರು ಕೂಡ ನನ್ನ ಜತೆಗೆ ವೇದಿಕೆ ಹಂಚಿಕೊಳ್ಳುತ್ತಾರೆ. ಸಂಘದಲ್ಲಿ ಅಂಗಡಿ ಬೇಕು ಎಂದು ಅರ್ಜಿ ಹಾಕಿದವರಿಗೆಲ್ಲ ನೀಡಿದ್ದೇವೆ. ಪೂಜಾರವರು ಅರ್ಜಿ ಹಾಕಿದರೆ ಅವರಿಗೂ ನೀಡುತ್ತೇವೆ ಎಂದು ಹೇಳಿದರು.ಒಬ್ಬ ಸಾಮಾನ್ಯ ಹುಡುಗ ರಾಜು ನಾಯ್ಕರ ಒಬ್ಬ ದೊಡ್ಡ ಗುತ್ತಿಗೆದಾರ ಆಗಿದ್ದಾನೆ. ಕೊಪ್ಪಳ, ಗದಗ ಹಾಗೂ ಬಾಗಲಕೋಟೆಯಲ್ಲಿ ಬಿಜೆಪಿ ಕಚೇರಿಯನ್ನು ಕಟ್ಟಿ ತೋರಿಸಿದ್ದಾರೆ. ಇನ್ನು ಬಾಗಲಕೋಟೆಯಲ್ಲಿ ಆರ್.ಎಸ್.ಎಸ್. ಕಾರ್ಯಾಲಯದ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇವರು ಒಳ್ಳೆಯ ಕೆಲಸ ಮಾಡಿದ್ದರಿಂದಲೇ ನಮ್ಮ ನಾಯಕರು ಅವರಿಗೆ ಜವಾಬ್ದಾರಿ ನೀಡಿದ್ದಾರೆ ಎಂದರು.
ಪಕ್ಷದೊಂದಿಗೆ ಕಾರ್ಯಕರ್ತರು ಬೆಳೆಯಬೇಕು ಎಂಬ ಕಾರಣದಿಂದ ಅರ್ಹತೆ ಇದ್ದವರಿಗೆ ಕಾನೂನು ಚೌಕಟ್ಟಿನಲ್ಲಿ ಕೆಲಸ ನೀಡಲಾಗಿದೆ. ಆದರೆ, ನೀವು ಎಲ್ಲಿಯವರೆಗೆ ಯಾವ ಕಾರ್ಯಕರ್ತರಿಗೆ ಏನು ಕೆಲಸ ಮಾಡಿದ್ದೀರಿ? ಸಂಘದ ವಾಣಿಜ್ಯ ಮಳಿಗೆಗಳನ್ನು ಕೇಳಿದವರಿಗೆ ನೀಡಲಾಗಿದೆ. ನೀನು ಟೆಂಡರ್ ಹಾಗೂ ಮಳಿಗೆಗೆ ಅರ್ಜಿ ಹಾಕು. ನಿನಗೂ ಕೊಡುತ್ತೇನೆ. ಈತ ಬಂದ ಮೇಲೆ ಬಿಜೆಪಿಯಲ್ಲಿ ಗೊಂದಲ ಪ್ರಾರಂಭವಾಗಿದೆ ಎಂದು ಕಿಡಿಕಾರಿದರು.ಪೂಜಾರ ಫಿಟ್ ರಾಜಕಾರಣಿಸರ್ಕಾರಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ ಎಂದು ವಿಪ ಸದಸ್ಯ ಪಿ.ಎಚ್.ಪೂಜಾರ ಕೋಟಿ ಕೋಟಿ ರು. ಆಸ್ತಿಯನ್ನು (ಬಾರ್) ಕಡಿಮೆ ಹಣಕೊಟ್ಟು ಖರೀದಿ ಮಾಡಿರುವುದು. ಚೆಕ್ ಬೌನ್ಸ್ ಆಗುವಂತೆ ನೋಡಿಕೊಳ್ಳುವುದು, ಸಾಂವಿಧಾನಿಕ ಸಂಸ್ಥೆ ಬಿಟಿಡಿಎ ರದ್ದುಪಡಿಸಲು ನ್ಯಾಯಾಲಯಕ್ಕೆ ಹೋಗಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ ನಾನು ಅನ್‌ಫಿಟ್ ರಾಜಕಾರಣಿಯಾಗಿದ್ದೇನೆ. ಇಂತಹ ಅನ್ಯಾಯದ ಕೆಲಸ ಮಾಡಲು ಪೂಜಾರವರು ಫಿಟ್ ರಾಜಕಾರಣಿ ಎಂದು ಲೇವಡಿ ಮಾಡಿದರು.
ಸ್ವಂತ ಗ್ರಾಮವಾದ ತುಳಸಿಗೇರಿ ಆಂಜನೇಯ ದೇವಸ್ಥಾನ ಅಭಿವೃದ್ಧಿಪಡಿಸಿಲ್ಲ. ಹುಂಡಿಯ ಕಾಸನ್ನು ಹೊಡೆಯುವ ಈತನಿಂದ ಅಭಿವೃದ್ಧಿ ಆಗಲ್ಲ. ಕಾರಣ, ನಾನು ಶಾಸಕನಾಗಿದ್ದಾಗ ದೇವಸ್ಥಾನದ ಉಸ್ತುವಾರಿ ಮುಜರಾಯಿ ಇಲಾಖೆಗೆ ವಹಿಸಿದೆ.ವೀರಣ್ಣ ಚರಂತಿಮಠ, ಮಾಜಿ ಶಾಸಕ