ಕನ್ನಡಪ್ರಭ ವಾರ್ತೆ ಬನ್ನೂರು
ಪಟ್ಟಣದ ಸಂತೆಮಾಳದಲ್ಲಿ ಎಲ್ಲ ರೈತರು ಒಂದೆಡೆ ಸೇರಿ ಮೈಸೂರು, ಮಳವಳ್ಳಿ, ನರಸೀಪುರ, ಮಂಡ್ಯ ರಸ್ತೆಯ ವರ್ತುಲ ರಸ್ತೆಯನ್ನು ತಡೆದು ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಅಧ್ಯಕ್ಷ ನಾರಾಯಣ, ತುರಗನೂರು ಬ್ರಾಂಚ್ ಉಕ್ಕಲಗೆರೆ ನಾಲೆ ಹಾಗೂ ಕೆರೆಕಟ್ಟೆಗಳಿಗೆ ನೀರು ತುಂಬಿಸುವಂತೆ ಸಂಬಂಧಿಸಿದ ನೀರಾವರಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದೆ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಇದರಿಂದ ವ್ಯವಸಾಯ ನಂಬಿ ಕುಳಿತ ರೈತರಿಗೆ ನಾಟಿ ಮಾಡಲು ಸಾಧ್ಯವಾಗಿಲ್ಲ. ಅಲ್ಲದೇ ನಾಲೆಗಳಲ್ಲಿ ಜೊಂಡು ಸೇರಿದಂತೆ ಕಸದ ರಾಶಿಯಿಂದ ನೀರು ಸಮರ್ಪಕವಾಗಿ ಕೊನೆ ಹಂತವನ್ನು ತಲುಪದೇ ರೈತರು ಪರಿತಪಿಸುವಂತಾಗಿದೆ ಎಂದು ತಿಳಿಸಿದರು.ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಎಂಜಿನಿಯರ್ವಾಸುದೇವು ಮಾತನಾಡಿ, ಕೂಡಲೆ ನೀರನ್ನು ಬಿಡುವುದಾಗಿ ಭರವಸೆ ನೀಡಿ, ಕಾಲುವೆಯನ್ನು ಜೊಂಡುಗಳಿಂದ ತೆರವುಗೊಳಿಸುವಂತ ಕಾರ್ಯ ಪ್ರಗತಿಯಲ್ಲಿದ್ದು, ಕೊನೆ ಹಂತದವರೆಗೂ ನೀರು ತಲುಪಲಿದೆ ಎಂದು ರೈತರಿಗೆ ಭರವಸೆ ನೀಡಿದ ಹಿನ್ನೆಲೆ ರೈತರು ರಸ್ತೆ ತಡೆ ವಾಪಸ್ ಪಡೆದರು.