ಯಾದಗಿರಿ: ಉದ್ಘಾಟನೆಗೆ ಸಜ್ಜಾಗಿ 5 ತಿಂಗಳು ಕಳೆದರೂ ನಗರ ಪೊಲೀಸ್ ಠಾಣೆಗೆ ಉದ್ಘಾಟನೆ ಭಾಗ್ಯ ನೀಡದ ಸರ್ಕಾರದ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ವಿವಿಧ ಭಾಗ್ಯಗಳನ್ನು ಕೊಟ್ಟಿದ್ದೇವೆ ಎನ್ನುವ ಸರ್ಕಾರ ಪೊಲೀಸ್ ಠಾಣೆ ಸಿದ್ಧಗೊಂಡಿದ್ದರೂ ಉದ್ಘಾಟನೆ ಭಾಗ್ಯ ಕೊಡದೇ ನಿರ್ಲಕ್ಷ್ಯವಹಿಸಿರುವುದು ಜನಪರ ಕಾಳಜಿ ಎಷ್ಟು ಎಂಬುದನ್ನು ಎತ್ತಿ ತೋರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಕೂಡಲೇ ಪೊಲೀಸ್ ಠಾಣೆ ಕಟ್ಟಡ ಲೋಕಾರ್ಪಣೆ ಮಾಡಿ ಪೊಲೀಸರಿಗೆ ಒಪ್ಪಿಸಬೇಕು. ಆ ಮೂಲಕ ಜನಸಾಮಾನ್ಯರಿಗೆ ಪೊಲೀಸ್ ಠಾಣೆಯ ಬಳಕೆಯಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಇದಲ್ಲದೇ ನೂತನ ಪೊಲೀಸ್ ಠಾಣೆಯ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡಕ್ಕೆ ಆದ್ಯತೆ ನೀಡಬೇಕು. ಹಾಲಿ ಆಂಗ್ಲ ಭಾಷೆಗೆ ಹೆಚ್ಚು ಒತ್ತು ಕೊಟ್ಟಿರುವುದು ನಾಚಿಕೆಗೇಡು ಸಂಗತಿಯಾಗಿದೆ. ಇವೆಲ್ಲವನ್ನು ಸರಿಪಡಿಸಿ ಕೂಡಲೇ ಠಾಣೆಗೆ ಉದ್ಘಾಟನೆ ಭಾಗ್ಯ ಒದಗಿಸಿಕೊಡದಿದ್ದರೆ ಠಾಣೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾದ್ಯ ದಿಮ್ಮೆ, ಅಂಬ್ರೇಷ್ ಹತ್ತಿಮನಿ, ಅಬ್ದುಲ್ ಚಿಗಾನೂರ, ಸಾಹೇಬಗೌಡ ನಾಯಕ ಗೌಡಗೇರಿ, ವಿಶ್ವರಾಜ ಹೊನಿಗೇರ, ರಮೇಶ ಡಿ.ನಾಯಕ, ಕಾಶಿನಾಥ ನಾನೇಕ ಇನ್ನಿತರರು ಎಚ್ಚರಿಸಿದ್ದಾರೆ.