ನಗರದಾದ್ಯಂತ ಸುರಿದ ತುಂತುರು ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಜನರು ಧಮ್ಮ ನಡಿಗೆಯಲ್ಲಿ ಪಾಲ್ಗೊಂಡು ಬುದ್ಧನ ಶಾಂತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶ ಸಾರಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದಾದ್ಯಂತ ಸುರಿದ ತುಂತುರು ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಜನರು ಧಮ್ಮ ನಡಿಗೆಯಲ್ಲಿ ಪಾಲ್ಗೊಂಡು ಬುದ್ಧನ ಶಾಂತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶ ಸಾರಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದ ಅಂಗವಾಗಿ ರಾಮಸಮುದ್ರದಲ್ಲಿರುವ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಮುಂಭಾಗದಿಂದ ಧಮ್ಮ ನಡಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ನೀಲಿ ಮತ್ತು ಬಿಳಿ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ ಬೌದ್ಧ ಅನುಯಾಯಿಗಳು, ವಿವಿಧ ಸಂಘಟನೆಗಳ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಬುದ್ಧನ ವಚನಗಳನ್ನು ಸ್ಮರಿಸಿದರು. ‘ಬುದ್ಧಂ ಶರಣಂ ಗಚ್ಛಾಮಿ’ ಘೋಷಣೆಗಳೊಂದಿಗೆ ಸಾಗಿದ ಮೆರವಣಿಗೆ ಸಮ್ಮೇಳನದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಮಳೆಯ ನಡುವೆಯೂ ಮೆರವಣಿಗೆಯಲ್ಲಿ ಪಾಲ್ಗೊಂಡವರ ಉತ್ಸಾಹ ಕುಂದಲಿಲ್ಲ. ಬುದ್ಧನ ತತ್ವಗಳು, ಅಂಬೇಡ್ಕರ್ ಅವರ ಆಶಯಗಳು ಹಾಗೂ ಸಮಾನತೆಯ ಸಮಾಜ ನಿರ್ಮಾಣದ ಸಂದೇಶವನ್ನು ಸಾರುವ ಉದ್ದೇಶದಿಂದ ವಿವಿಧೆಡೆಯಿಂದ ಜನರು ಆಗಮಿಸಿದ್ದರು.
ಮೆರವಣಿಗೆಯ ಬಳಿಕ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿದ್ದ ಬೌದ್ಧ ಭಂತೇಜಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಸಮ್ಮೇಳನದ ಮೂಲಕ ಬೌದ್ಧ ಧಮ್ಮದ ಶಾಂತಿ, ಸಹಬಾಳ್ವೆ, ಕರುಣೆ ಮತ್ತು ಸಮಾನತೆಯ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆಯಿತು.
ಮೆರವಣಿಗೆಯಲ್ಲಿ ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಸಚಿವ ಸಿ.ಪುಟ್ಟರಂಗಶೆಟ್ಟಿ, ಸಮ್ಮೇಳನ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎ.ಆರ್.ಕೃಷ್ಣಮೂರ್ತಿ, ಗೌರವಾಧ್ಯಕ್ಷ ಮನೋರಖ್ಖಿತ ಭಂತೇಜಿ, ಸ್ವಾಗತ ಸಮಿತಿ ಸಂಚಾಲಕ ವೆಂಕಟರಮಣಸ್ವಾಮಿ(ಪಾಪು), ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜ್, ಆರ್.ನರೇಂದ್ರ, ಎ.ಆರ್.ಬಾಲರಾಜ್, ಮುಖಂಡರಾದ ಅಯ್ಯನಪುರ ಶಿವಕುಮಾರ್, ಎನ್.ನಾಗಯ್ಯ, ಪಿ.ಮರಿಸ್ವಾಮಿ, ಎಸ್ಸಿ ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರಯ್ಯ, ಆರ್.ಮಹದೇವ್ ಇತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.