ಅಕ್ರಮ ಚಟುವಟಿಕೆ ತಾಣವಾದ ಪಾಳುಬಿದ್ದ ವಸತಿಗೃಹ?

KannadaprabhaNewsNetwork | Published : Jun 24, 2024 1:32 AM

ಸಾರಾಂಶ

ಇಲ್ಲಿ ಅಕ್ರಮ ಚಟುವಟಿಕೆಗಳ ಜತೆ ಮುಂದಿನ ದಿನಗಳಲ್ಲಿ ಯಾವುದೇ ದೊಡ್ಡ ಪ್ರಮಾದ ಘಟಿಸುವ ಸಂಭವವೂ ತೋರುತ್ತಿದೆ ಎಂದು ಗ್ರಾಮಸ್ಥರು ಆತಂಕ ಪಡುತ್ತಿದ್ದಾರೆ.

ರಾಘು ಕಾಕರಮಠ

ಅಂಕೋಲಾ: ಹಟ್ಟಿಕೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವಾರದಲ್ಲಿ ಪಾಳುಬಿದ್ದ ಇಲಾಖೆಯ ವಸತಿಗೃಹಗಳು ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಇದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಬೆಳ್ಳಂಬೆಳಗ್ಗೆ ಹಾಗೂ ಕತ್ತಲೆಯ ಸಂದರ್ಭದಲ್ಲಿ ಈ ಜಾಗಕ್ಕೆ ಕಾರುಗಳು ಬರುತ್ತವೆ. ಎರಡ್ಮೂರು ತಾಸುಗಳವರೆಗೆ ಆ ಕಾರುಗಳು ಅದೇ ಜಾಗದ ಯಾವುದೋ ಸಂದಿಯಲ್ಲಿ ನಿಂತಿರುತ್ತದೆ. ನಂತರ ಅದರಿಂದ ವಸತಿಗೃಹದ ಪಾಳು ಬಿದ್ದ ಕೊಠಡಿಗಳಲ್ಲಿ ದಿನಗಟ್ಟಲೆ ಕಾಲ ಕಳೆಯುತ್ತಾರೆ. ನಂತರ ಯಾರೂ ಇಲ್ಲದ ಸಂದರ್ಭ ನೋಡಿ ಅಲ್ಲಿಂದ ಕಾಲು ಕೀಳುತ್ತಾರೆ. ಇದ್ದನ್ನೆಲ್ಲ ಗಮನಿಸಿದ ಅಲ್ಲಿಯ ನಿವಾಸಿಗಳಿಗೆ ಈ ಜಾಗದಲ್ಲಿ ವೇಶ್ಯಾವಟಿಕೆ ನಡೆಯುತ್ತಿದೆಯೋ? ಅಥವಾ ಅಮಾಯಕ ಹೆಣ್ಣುಮಕ್ಕಳನ್ನು ಪುಸಲಾಯಿಸಿ ಕರೆತಂದು ತೃಷೆ ತೀರಿಸಿಕೊಳ್ಳುತ್ತಿದ್ದಾರೋ ಎಂದು ಅನುಮಾನಗೊಂಡಿದ್ದಾರೆ. ಇದನ್ನು ತಡೆಗಟ್ಟಲು ಹೋರಾಟಕ್ಕೂ ಸಜ್ಜಾಗುತ್ತಿದ್ದಾರೆ.

ಪ್ರಸ್ತುತ ಕಟ್ಟಡದ ಚಾವಣಿ ಸಂಪೂರ್ಣ ತೆರೆದುಕೊಂಡಿದ್ದು, ಕೇವಲ ಗೋಡೆಗಳು ಮಾತ್ರ ಜೀವಂತ ಇದ್ದು, ಆರೋಗ್ಯ ಇಲಾಖೆಗೆ ಯಾವುದೇ ಪ್ರಯೋಜನಕ್ಕೆ ಬಾರದಂತಿದೆ. ಗೋಡೆಗಳ ಸಿಮೆಂಟ್ ಹೊದಿಕೆ ಮಾಯವಾಗಿದ್ದು, ನೆಲ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೋಣೆ ಒಳಭಾಗದಲ್ಲಿ ಮುಳ್ಳಿನ ಪೊದೆಗಳು ಬೆಳೆದಿವೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಕೋಣೆಗಳನ್ನು ಹೊಂದಿರುವ ಐದಾರು ನಿರುಪಯುಕ್ತ ಕಟ್ಟಡಗಳಿವೆ. ಇಲ್ಲಿ ಅಕ್ರಮ ಚಟುವಟಿಕೆಗಳ ಜತೆ ಮುಂದಿನ ದಿನಗಳಲ್ಲಿ ಯಾವುದೇ ದೊಡ್ಡ ಪ್ರಮಾದ ಘಟಿಸುವ ಸಂಭವವೂ ತೋರುತ್ತಿದೆ ಎಂದು ಗ್ರಾಮಸ್ಥರು ಆತಂಕ ಪಡುತ್ತಿದ್ದಾರೆ.

ಹಲ್ಲೆ ನಡೆದಿತ್ತು: ಕೆಲ ದಿನಗಳ ಹಿಂದೆ ತಾಲೂಕಿನ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಯೂ ಇದೇ ಜಾಗದಲ್ಲಿ ನಡೆದಿತ್ತು. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಪಾಳುಬಿದ್ದ ವಸತಿಗೃಹದ ಸಮೀಪದಲ್ಲೆ ಸರ್ಕಾರಿ ಶಾಲೆ ಇದೆ. ಈ ಮಾರ್ಗವಾಗಿ ಮಕ್ಕಳು, ಮಹಿಳೆಯರು ಆಗಾಗ ಓಡಾಡುತ್ತಿರುತ್ತಾರೆ. ಇಂತಹ ಸನ್ನಿವೇಶಗಳು ಊರಿನ ಮಹಿಳೆಯರಿಗೆ ಇರಿಸುಮುರಿಸು ತಂದು ಕೊಡುತ್ತಿವೆ. ಹಾಗಾಗಿ ಇಲಾಖೆಯ ಯಾವುದೇ ಉಪಯೋಗಕ್ಕೆ ಬಾರದ ಈ ಕಟ್ಟಡಗಳನ್ನು ಶೀಘ್ರದಲ್ಲಿ ಕೆಡವಿ ಭವಿಷ್ಯದ ಅನಾಹುತಗಳನ್ನು ತಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರತಿಭಟನೆ ಎಚ್ಚರಿಕೆ: ಪ್ರತಿದಿನ ಈ ಜಾಗಕ್ಕೆ ಪರ ಊರಿನ ಕೆಲವು ಕಾರುಗಳು ಬರುತ್ತವೆ. ಅದರಲ್ಲಿ ಹೆಣ್ಣುಮಕ್ಕಳು ಇರುವುದನ್ನು ಕಂಡಿದ್ದೇವೆ. ಆರೋಗ್ಯ ಇಲಾಖೆ ಎಚ್ಚೆತ್ತು ಪಾಳುಬಿದ್ದ ಕಟ್ಟಡಗಳನ್ನು ನೆಲಸಮ ಮಾಡಿದರೆ ಎಷ್ಟೋ ಹೆಣ್ಣುಮಕ್ಕಳ ಮಾನ, ಪ್ರಾಣ ರಕ್ಷಿಸುವುದರ ಜತೆಗೆ ಮುಂದೆ ಆಗಬಹುದಾದ ದೊಡ್ಡ ಅನಾಹುತಗಳನ್ನು ತಡೆಯಬಹುದು. ಈ ಬಗ್ಗೆ ಕ್ರಮ ಕೈಗೊಳ್ಳದೆ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಮೋಹಿನಿ ನಾಯ್ಕಮೋಹಿನಿ ನಾಯ್ಕ ತಿಳಿಸಿದರು.

Share this article