ದೊಡ್ಡಬಳ್ಳಾಪುರ: ಇತ್ತೀಚೆಗೆ ಸಾರ್ವಜನಿಕರಿಂದ ಪುನಶ್ಚೇತನಗೊಂಡಿದ್ದ ಪುರಾತನ ಕಲ್ಯಾಣಿಯ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವ ನಗರಸಭೆ ಕ್ರಮಕ್ಕೆ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿರುವ ಘಟನೆ ಇಲ್ಲಿನ ನ್ಯಾಯಾಲಯ ಮುಂಭಾಗದ ವಾರ್ಡ್ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕೋರ್ಟ್ ಮುಂಭಾಗದಲ್ಲಿನ ಪುರಾತನ ಕಲ್ಯಾಣಿ ಸ್ಥಳೀಯರಿಂದ ಪುನಶ್ಚೇತನಗೊಂಡಿದೆ, ಸದ್ಯ ಕಲ್ಯಾಣ ಪಕ್ಕದಲ್ಲಿ ಉದ್ಯಾನ ನಿರ್ಮಿಸಬೇಕೆಂದು ಸ್ಥಳೀಯ ನಿವಾಸಿಗಳ ಬೇಡಿಕೆಯಾಗಿದೆ. ಆದರೆ ಇದೇ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ದೊಡ್ಡಬಳ್ಳಾಪುರ ನಗರಸಭೆ ಮುಂದಾಗಿದ್ದು, ನಗರಸಭೆ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ದೊಡ್ಡಬಳ್ಳಾಪುರದ ಕೋರ್ಟ್ ಮುಂಭಾಗದಲ್ಲಿರುವ ಕಲ್ಯಾಣಿಗೆ 100 ವರ್ಷಗಳ ಇತಿಹಾಸವಿದೆ, ಸದಾ ನೀರಿನಿಂದ ತುಂಬಿರುವ ಕಲ್ಯಾಣಿ ರೋಜಿಪುರ ಮತ್ತು ವಿನಾಯಕನಗರ ನಿವಾಸಿಗಳ ಆಕರ್ಷಣೆ ಕೇಂದ್ರವಾಗಿದೆ. ಈ ಜಾಗದಲ್ಲಿ ಸುಂದರವಾದ ಉದ್ಯಾನ ನಿರ್ಮಿಸ ಬೇಕೆಂಬ ಬೇಡಿಕೆ ಇದ್ದು, ನಗರಸಭೆ ಸಹ ಉದ್ಯಾನ ನಿರ್ಮಾಣ ಮಾಡುವುದಾಗಿ ಹೇಳಿತ್ತು. ಈಗ ನಿರ್ಧಾರ ಬದಲಾಯಿಸಿರುವ ದೊಡ್ಡಬಳ್ಳಾಪುರ ನಗರಸಭೆ ಈ ಜಾಗದಲ್ಲಿ ಸಾರ್ವಜನಿಕರ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಲ್ಯಾಣಿ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸ್ಥಳೀಯರ ವಿರೋಧ ಇದೆ. ದೊಡ್ಡಬಳ್ಳಾಪುರ ನಗರದಲ್ಲಿ ಕಲ್ಯಾಣಿಗಳಿರುವುದೇ ಮೂರು, ಇಂತಹ ಪರಿಸ್ಥಿತಿಯಲ್ಲಿ ಜಲ ಸಂಪನ್ಮೂಲವಾಗಿರುವ ಕಲ್ಯಾಣಿಗಳನ್ನ ರಕ್ಷಣೆ ಮಾಡಬೇಕಿರುವುದು ನಮ್ಮ ಜವಾಬ್ದಾರಿಯಾಗಿದೆ. ಒಂದು ವೇಳೆ ಈ ಜಾಗದಲ್ಲಿ ಶೌಚಾಲಯ ನಿರ್ಮಾಣವಾದಲ್ಲಿ, ಶೌಚಾಲಯದಿಂದ ಕೊಳಚೆ ನೀರು ಸೋರಿಕೆಯಾಗಿ ಕಲ್ಯಾಣಿ ಪರಿಸರವನ್ನ ಹಾಳು ಮಾಡುತ್ತದೆ, ಈ ಜಾಗವನ್ನು ಬಿಟ್ಟು ಬೇರೆಡೆ ಶೌಚಾಲಯ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ ಎಂದರು.ರೋಜಿಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆ.ಪನ್ನೂರುರವರು ಮಾತನಾಡಿ, ಹಿಂದೆ ಈ ಜಾಗ ಪಾಳುಬಿದ್ದಿತ್ತು, ಸ್ಥಳೀಯ ನಿವಾಸಿಗಳು ದೇಣಿಗೆ ಸಂಗ್ರಹಿಸಿ ಸುಮಾರು 2 ಲಕ್ಷ ರುಪಾಯಿ ಹಣದಲ್ಲಿ ಕಲ್ಯಾಣಿ ಪುನಶ್ಚೇತನ ಮಾಡಲಾಗಿದೆ, ಕಲ್ಯಾಣಿ ಪಕ್ಕದಲ್ಲಿ ಪಾರ್ಕ್ ನಿರ್ಮಾಣ ಮಾಡುವುದರಿಂದ ವಯೋವೃದ್ಧರು ಸಂಜೆ ಮತ್ತು ಬೆಳಗ್ಗೆ ವಾಕಿಂಗ್ ಮಾಡಬಹುದು ಮತ್ತು ಮಕ್ಕಳು ಆಟವಾಡಬಹುದು ಎಂದರು.
ನಗರಸಭೆ ಮಾಜಿ ಸದಸ್ಯ ಎಸ್.ದಯನಂದ್ ಮಾತನಾಡಿ, ಕಲ್ಯಾಣಿ ಪಕ್ಕದಲ್ಲಿನ ಜಾಗವನ್ನ ಪಾರ್ಕ್ ನಿರ್ಮಾಣಕ್ಕಾಗಿ ಮೀಸಲು ಇಡಲಾಗಿದೆ, ಸುತ್ತಲೂ ಬೇಲಿ ಹಾಕುವ ಮೂಲಕ ಜಾಗವನ್ನ ರಕ್ಷಣೆ ಮಾಡಲಾಗಿದೆ. ಪಾರ್ಕ್ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವುದು ಸರಿಯಲ್ಲ ಎಂದರು.ರೈತ ಸಂಘದ ಮುಖಂಡರಾದ ಸುಲೋಚನಮ್ಮ, ತಾಪಂ ಮಾಜಿ ಸದಸ್ಯ ರವಿ ಹಸನಘಟ್ಟ ಮತ್ತಿತರರು ಹಾಜರಿದ್ದರು.
23ಕೆಡಿಬಿಪಿ2-ದೊಡ್ಡಬಳ್ಳಾಪುರ ನ್ಯಾಯಾಲಯ ಬಳಿಯ ಕಲ್ಯಾಣಿ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.