ಕೆಲ ದಲಿತ ಸಂಘಟನೆಗಳಿಂದ ದಿಕ್ಕು ತಪ್ಪಿಸುವ ಯತ್ನ

KannadaprabhaNewsNetwork | Published : Apr 19, 2024 1:07 AM

ಸಾರಾಂಶ

ದಲಿತ ಸಂಘಟನೆಗಳು ಹಲವಾರಿದ್ದು ಕೆಲ ದಲಿತ ಸಂಘಟನೆಗಳು ಕಾಂಗ್ರೆಸ್ ಪರವಾಗಿ ಸ್ವಾಭಿಮಾನ ಮರೆತು ದಲಿತರನ್ನು ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿವೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರದಲಿತ ಸಂಘಟನೆಗಳು ಹಲವಾರಿದ್ದು ಕೆಲ ದಲಿತ ಸಂಘಟನೆಗಳು ಕಾಂಗ್ರೆಸ್ ಪರವಾಗಿ ಸ್ವಾಭಿಮಾನ ಮರೆತು ದಲಿತರನ್ನು ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿವೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಹೇಳಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಚ್.ಸಿ ಮಹದೇವಪ್ಪ ಅವರಿಗೆ ಚುನಾವಣೆಗಳು ಬಂತೆಂದರೆ ಮಾತ್ರ ದಲಿತ ಸಂಘಟನೆಗಳು, ಸಂವಿಧಾನ ನೆನಪಿಗೆ ಬರುತ್ತವೆ ಎಂದು ಆರೋಪಿಸಿದರು.ದಲಿತ ಸಮಾವೇಶ ಎಂದು ಕಾಂಗ್ರೆಸ್ ಕಚೇರಿಗಳಲ್ಲಿ ಅವರ ಕಾರ್ಯಕರ್ತರೇ ಮಾಡಿ, ನಮ್ಮ ಬೆಂಬಲ ಕಾಂಗ್ರೆಸ್‌ಗೆ ಎಂದು ದಲಿತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.ಡಾ.ಅಂಬೇಡ್ಕರ್ ಅವರು ಕಾಂಗ್ರೆಸ್‌ನ್ನು ಉರಿಯುವ ಬೆಂಕಿ ಎಂದಿದ್ದರು. ನಿಜವಾಗಿಯು ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿರುವುದು ಪ್ರಧಾನಿ ನರೇಂದ್ರ ಮೋದಿ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಕ್ಷೇತ್ರಗಳನ್ನು ಪಂಚ ಕ್ಷೇತ್ರಗಳನ್ನಾಗಿ ಮಾಡಿ ನೂರಾರು ಕೋಟಿ ವೆಚ್ಚದಲ್ಲಿ ಅವುಗಳನ್ನು ತೀರ್ಥ ಕ್ಷೇತ್ರಗಳನ್ನಾಗಿ ಮಾಡಿದ್ದಾರೆ. ಅಂಬೇಡ್ಕರರಿಗೆ ಕಾಂಗ್ರೆಸ್ಸೇತರ ಸರ್ಕಾರ ಭಾರತ ರತ್ನ ಕೊಟ್ಟು ಗೌರವಿಸಿದೆ ಎಂದರು.ಕಾಂಗ್ರೆಸ್ ಅಂಬೇಡ್ಕರ್ ಇರುವವರೆಗೂ ಗೌರವಿಸಲಿಲ್ಲ, ಇವರ ಭಾವಚಿತ್ರವನ್ನು ಕಾಂಗ್ರೆಸ್ ೮೩-೮೪ರಿಂದ ಬಳಸುತ್ತಿದೆ ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದರು.ಎಸ್ಸಿ, ಎಸ್ಟಿ ವಿಶೇಷ ಅನುದಾನದ ಶೇ.೨೫ ರಷ್ಟು, ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿದ್ದಾರೆ. ನಿಜವಾಗಿಯೂ ಕೆಲ ದಲಿತ ಸಂಘಟನೆಗಳಿಗೆ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವ ಅನೇಕ ಅವಕಾಶಗಳಿತ್ತು. ಆದರೆ, ಇವರು ಸಿದ್ದರಾಮಯ್ಯ ಹಾಗೂ ಎಚ್.ಸಿ.ಮಹದೇವಪ್ಪ ಅವರಿಗೆ ತಮ್ಮ ಸ್ವಾಭಿಮಾನವನ್ನು ಮಾರಿಕೊಂಡಿದ್ದಾರೆ ಎಂದು ದೂರಿದರು. ನರೇಂದ್ರ ಮೋದಿ ಅವರು ಪೌರಕಾರ್ಮಿಕರ ಪಾದಪೂಜೆ ಮಾಡಿದಾಗ ಯಾವುದೇ ಚುನಾವಣೆ ಇರಲಿಲ್ಲ. ಆಗ ಪೌರಕಾರ್ಮಿಕರಿಗೆ ಗೌರವ ಹೆಚ್ಚಾಯಿತು. ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಪೌರಕಾರ್ಮಿಕರ ಪಾದಪೂಜೆ ಮಾಡಲಿ ಎಂದು ಸವಾಲು ಹಾಕಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆಯಾಗುತ್ತದೆ ಎಂದು ಆರೋಪಿಸುವವರಿಗೆ ನರೇಂದ್ರ ಮೋದಿ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಎಸ್ಸಿ, ಎಸ್ಪಿ ಸಮುದಾಯಕ್ಕೆ ಸಾಕಷ್ಟು ಕಾರ್ಯಕ್ರಮ ಕೊಟ್ಟಿದೆ. ಇದನ್ನು ದಲಿತ ಸಮುದಾಯ ಅರಿತು ದಲಿತ ಸಮುದಾಯದ ಬಿಜೆಪಿ ಅಭ್ಯರ್ಥಿ ಬಾಲರಾಜು ಅವರನ್ನು ಬೆಂಬಲಿಸಬೇಕು ಎಂದರು.ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಿ ಬಾಲರಾಜು ಅವರ ಬಗ್ಗೆ ಅಪಪ್ರಚಾರ ಮಾಡಲಾಗಿದೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಲ್ಲೇದೇವರು, ಮುಕುಂದಮೂರ್ತಿ, ನಲ್ಲೂರು ಪರಮೇಶ್, ವೇಣುಗೋಪಾಲ್, ಪರಶಿವಯ್ಯ, ಕಾಡಳ್ಳಿ ಕುಮಾರ್ ಇದ್ದರು.

Share this article