ವೈದ್ಯರು ಕಣ್ಣಿಗೆ ಕಾಣುವ ದೇವರು: ರಾಜು ಸಾಂಗ್ಲೀಕರ

KannadaprabhaNewsNetwork | Published : Jul 2, 2024 1:31 AM

ಸಾರಾಂಶ

ಗಜೇಂದ್ರಗಡ ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಸೋಮವಾರ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು.

ಗಜೇಂದ್ರಗಡ: ತಂದೆ, ತಾಯಿ ಜನ್ಮ ನೀಡಿದ ದೇವರಾದರೆ, ಮನುಷ್ಯನ ಅಳಿವು ಉಳಿವಿನ ಸಂದರ್ಭದಲ್ಲಿ ಚಿಕಿತ್ಸೆ ಮೂಲಕ ಮರುಜನ್ಮ ನೀಡುವ ವೈದ್ಯರು ಕಣ್ಣಿಗೆ ಕಾಣುವ ದೇವರು ಎಂದು ಪುರಸಭೆ ಸದಸ್ಯ, ಆರೋಗ್ಯ ಸಲಹಾ ಸಮಿತಿ ಸದಸ್ಯ ರಾಜು ಸಾಂಗ್ಲೀಕರ ಹೇಳಿದರು.

ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಸೋಮವಾರ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು. ಜಗತ್ತಿಗೆ ಅಳುತ್ತಾ ಕಾಲಿಡುವ ಮಗುವಿನ ಜೀವ ರಕ್ಷಣೆಯಿಂದ ಹಿಡಿದು ಬದುಕಿನ ಕೊನೆ ಕ್ಷಣದ ವರೆಗೆ ನಮ್ಮನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವ ಏಕೈಕ ವ್ಯಕ್ತಿ ಅಂದರೆ ಅದು ವೈದ್ಯರು. ಹೀಗಾಗಿ ವೈದ್ಯೋ ನಾರಾಯಣ ಹರಿಃ ಎಂದು ಹಿಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ಯೋಧ, ರೈತ ಹಾಗೂ ವೈದ್ಯರ ಸಮರ್ಪಣೆ ಹಾಗೂ ಸಹಾನುಭೂತಿಯ ಸೇವೆ ಗೌರವಯುತವಾದದ್ದು. ಸವಾಲಿನ ಮಧ್ಯೆಯೂ ಅವರ ಕೆಲಸ ಗಮನಾರ್ಹವಾದದ್ದು ಎಂದ ಅವರು, ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ದಿನಗಳಲ್ಲಿ ನಾವಿದ್ದೇವೆ. ಆದರೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರ ಸೇವೆ ಗಮನಾರ್ಹವಾಗಿರುವುದರಿಂದ ಚಿಕಿತ್ಸೆಗೆ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ನೂರಾರು ಜನರು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ ಎಂದರು.

ಆರೋಗ್ಯ ಸಲಹಾ ಸಮಿತಿ ಸದಸ್ಯ ಶರಣಪ್ಪ ಚಳಗೇರಿ ಮಾತನಾಡಿ, ಒಬ್ಬ ವೈದ್ಯನು ಆತ್ಮವಿಶ್ವಾಸದಿಂದ ಇದ್ದಾಗ ಮಾತ್ರ ಅವನು ತನ್ನ ರೋಗಿಗಳಿಗೆ ಭರವಸೆ ನೀಡಬಹುದು. ಚಿಕಿತ್ಸೆಗೆ ಬರುವ ರೋಗಿಗಳಿಗೆ ವೈದ್ಯರು ನೀಡುವ ಔಷಧಿಗಿಂತ ಪರಿಣಾಮಕಾರಿಯಾದದ್ದು ವೈದ್ಯರು ರೋಗವು ಸಣ್ಣದಿರಲಿ ಅಥವಾ ದೊಡ್ಡದಿರಲಿ ರೋಗವು ಗುಣಮುಖವಾಗುತ್ತದೆ ಎನ್ನುವ ಆತ್ಮವಿಶ್ವಾಸದ ಮಾತುಗಳನ್ನಾಡಿದರೆ ರೋಗಿ ಅರ್ಧದಷ್ಟು ಗುಣಮುಖವಾಗುತ್ತಾನೆ.ಇತ್ತ ರೋಗಿಗಳು ಸಹ ವೈದ್ಯರು ನಮ್ಮಂತೆ ಅವರು ಮನುಷ್ಯರು ನಮ್ಮನ್ನು ಬದುಕಿಸಲು ಪ್ರಯತ್ನಿಸುವ ಮಾನವತಾವಾಧಿಗಳನ್ನು ಎನ್ನುವದನ್ನು ಗಮನದಲ್ಲಿಟ್ಟಿಕೊಳ್ಳಬೇಕು. ರೋಗಿಗಳು ಹಾಗೂ ಅವರ ಕುಟುಂಬಸ್ಥರು ಅಂದುಕೊಂಡಂತೆ ಎಲ್ಲವು ನಡೆಯಬೇಕು ಎಂಬುದು ಸಮಂಜಸವಲ್ಲ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗೂ ಸಹ ಕಷ್ಟ ಸುಖ ಎನ್ನುವದಿರುತ್ತವೆ.ಆದರೆ ಅಂತಿಮವಾಗಿ ವೈದ್ಯರು ರೋಗಿಯನ್ನು ಗುಣಮುಖವನ್ನಾಗಿಸಲು ಹಾಗೂ ಅವರ ಜೀವ ರಕ್ಷಣೆಗಾಗಿ ಶ್ರಮಿಸುತ್ತಾರೆ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದರು.

ಈ ವೇಳೆ ಆರೋಗ್ಯ ಸಲಹಾ ಸಮಿತಿ ಸದಸ್ಯ ಅರಿಹಂತ ಬಾಗಮಾರ ಸೇರಿ ಇತರರು ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಸನ್ಮಾನಿಸಿದರು.

ಡಾ. ಅನಿಲಕುಮಾರ ತೋಟದ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ವೈದ್ಯರಾದ ವೀಣಾ ಹಾದಿಮನಿ, ಗಗನಾ, ಕಾಶೀನಾಥ ಪೂಜಾರ, ಸಂಗಮೇಶ, ರಾಘವೇಂದ್ರ ಕೊಪ್ಪಳ, ಶರಣು ವದೆಗೋಳ ಇದ್ದರು.

Share this article