ಹೋಟೆಲ್, ಚಿಕನ್ ಶಾಪ್ ಹಾಗೂ ಟೀ ಸ್ಟಾಲ್‌ಗಳ ಮೇಲೆ ದಾಳಿ ನಡೆಸಿ ಒಟ್ಟು 16 ಇಂಡೇನ್ ಕಂಪನಿಯ ಸಿಲಿಂಡರ್‌ಗಳನ್ನ ಆಹಾರ ನಿರೀಕ್ಷಕಿ ವೆಂಕಟಲಕ್ಷ್ಮಮ್ಮ ಮತ್ತು ಆಹಾರ ಶಿರಸ್ತೇದಾರ ಪ್ರಕಾಶ್ ಜಪ್ತಿ ಮಾಡಿದ್ದಾರೆ.

ಶಿಡ್ಲಘಟ್ಟ: ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ತಹಸೀಲ್ದಾರ್ ಸೂಚನೆಯ ಮೇರೆಗೆ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಅಧಿಕಾರಿಗಳು ನಗರದಲ್ಲಿ ಸೋಮವಾರ ವಿವಿಧ ಕಡೆ ದಾಳಿ ಮಾಡಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ 16 ಗೃಹಬಳಕೆ ಸಿಲಿಂಡರ್ ಗಳನ್ನು ಜಪ್ತಿ ಮಾಡಿದ್ದಾರೆ. ಗೃಹ ಬಳಕೆ ಉದ್ದೇಶಕ್ಕೆ ಮಾತ್ರ ಸೀಮಿತವಾಗಿರುವ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಎಗ್ಗಿಲ್ಲದೆ ಬಳಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ನಗರದ ಹೋಟೆಲ್, ಚಿಕನ್ ಶಾಪ್ ಹಾಗೂ ಟೀ ಸ್ಟಾಲ್‌ಗಳ ಮೇಲೆ ದಾಳಿ ನಡೆಸಿ ಒಟ್ಟು 16 ಇಂಡೇನ್ ಕಂಪನಿಯ ಸಿಲಿಂಡರ್‌ಗಳನ್ನ ಆಹಾರ ನಿರೀಕ್ಷಕಿ ವೆಂಕಟಲಕ್ಷ್ಮಮ್ಮ ಮತ್ತು ಆಹಾರ ಶಿರಸ್ತೇದಾರ ಪ್ರಕಾಶ್ ಜಪ್ತಿ ಮಾಡಿದ್ದಾರೆ.

ನಗರದ ಹಲವು ಹೋಟೆಲ್‌ಗಳಲ್ಲಿ ದಾಳಿ ಮಾಡಿ 16 ಸಿಲಿಂಡರ್‌ಗಳನ್ನು ವಶಕ್ಕೆ ಪಡೆದು ಅವುಗಳನ್ನ ಕರ್ನಾಟಕ ಅಗತ್ಯ ವಸ್ತುಗಳ ಕಾಯಿದೆ 1955/2000ರ ಅನ್ವಯ ವಶಪಡಿಸಿಕೊಂಡು ಸುರಕ್ಷಿತೆಯ ದೃಷ್ಟಿಯಿಂದ ಮುಂದಿನ ಆದೇಶದವರೆಗೂ ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಇಂಡಿಯನ್ ಗ್ಯಾಸ್ ಏಜನ್ಸಿ ರವರ ವಶಕ್ಕೆ ನೀಡಲಾಗಿದೆ. ಇನ್ನು ಈ ದಾಳಿಯಲ್ಲಿ ಆಹಾರ ಇಲಾಖೆಯ ಹೇಮಂತ್ ಹಾಗೂ ಮತ್ತಿತರರು ಇದ್ದರು.