ಕ್ಯಾಬ್‌ ಚಾಲಕರಿಗೆ ಖೋಟಾ ನೋಟು ನೀಡಿ ವಂಚಿಸುತ್ತಿದ್ದ ವೈದ್ಯನ ಸೆರೆ

KannadaprabhaNewsNetwork |  
Published : Apr 09, 2024, 01:45 AM ISTUpdated : Apr 09, 2024, 05:54 AM IST
fake note

ಸಾರಾಂಶ

ನಕಲಿ ನೋಟುಗಳನ್ನು ಮುದ್ರಿಸಿ ಆ ನೋಟುಗಳನ್ನು ಕ್ಯಾಬ್‌ ಚಾಲಕರಿಗೆ ನೀಡಿ ವಂಚಿಸಿ ಪರಾರಿಯಾಗುತ್ತಿದ್ದ ವೈದ್ಯ ಎನ್ನಲಾದ ವ್ಯಕ್ತಿಯೊಬ್ಬನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ನಕಲಿ ನೋಟುಗಳನ್ನು ಮುದ್ರಿಸಿ ಆ ನೋಟುಗಳನ್ನು ಕ್ಯಾಬ್‌ ಚಾಲಕರಿಗೆ ನೀಡಿ ವಂಚಿಸಿ ಪರಾರಿಯಾಗುತ್ತಿದ್ದ ವೈದ್ಯ ಎನ್ನಲಾದ ವ್ಯಕ್ತಿಯೊಬ್ಬನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ ಮೂಲದ ಡಾ.ಕೆ.ಆರ್‌.ಸಂಜಯ್‌(44) ಬಂಧಿತ. ಆರೋಪಿಯಿಂದ 500 ರು. ಮುಖಬೆಲೆಯ 72 ಖೋಟಾ ನೋಟುಗಳು, ಪ್ರಿಂಟರ್‌, 90 ಸಾವಿರ ರು. ಮೌಲ್ಯದ 9 ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆ ಮೂಲದ ಕ್ಯಾಬ್‌ ಚಾಲಕ ಜರಿಪಿಟಿ ಚಂದ್ರಶೇಖರ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?: ಆರೋಪಿ ಸಂಜಯ್‌ ಮಾ. 27ರಂದು ಇಂಟರ್‌ನೆಟ್‌ನಲ್ಲಿ ಟ್ರಾವೆಲ್ಸ್‌ವೊಂದರ ನಂಬರ್‌ ಪಡೆದು ಬೆಂಗಳೂರಿನಿಂದ ಕದ್ರಿಗೆ ಕ್ಯಾಬ್‌ ಬುಕ್‌ ಮಾಡಿದ್ದ. ಅದರಂತೆ ಕ್ಯಾಬ್‌ ಚಾಲಕ ಚಂದ್ರಶೇಖರ್‌ ಮಾ.27ರಂದು ರಾತ್ರಿ 8.30ಕ್ಕೆ ಕದ್ರಿಯಿಂದ ನಗರದ ಯಶವಂತಪುರದ ಮಣಿಪಾಲ್‌ ಆಸ್ಪತ್ರೆ ಬಳಿ ಬಂದಿದ್ದಾರೆ. ಈ ವೇಳೆ ಆರೋಪಿ ಸಂಜಯ್‌ ತಾನು ವೈದ್ಯನೆಂದು ಪರಿಚಯಿಸಿಕೊಂಡು ಕಾರು ಹತ್ತಿದ್ದಾನೆ.

ಖೋಟಾ ನೋಟು ಕೈಗಿಟ್ಟು ಎಸ್ಕೇಪ್‌: ಬಳಿಕ ಮಾಗಡಿ ರಸ್ತೆಯ ಹೌಸಿಂಗ್‌ ಬೋರ್ಡ್‌ ಸಮೀಪದ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗೆ ತೆರಳಿದ್ದಾನೆ. ಈ ವೇಳೆ ಕ್ಯಾಬ್‌ ಚಾಲಕ ಚಂದ್ರಶೇಖರ್‌ಗೆ ‘ನನ್ನ ಬಳಿ ನಗದು ಹಣವಿದೆ. ನೀನು 10 ಸಾವಿರ ರು. ಹಣವನ್ನು ಫೋನ್‌ ಪೇ ಮುಖಾಂತರ ಕಳುಹಿಸುವೆಯಾ’ ಎಂದು ಕೇಳಿದ್ದಾನೆ. ಅದರಂತೆ ಚಂದ್ರಶೇಖರ್‌ 10 ಸಾವಿರ ರು. ಹಣವನ್ನು ಫೋನ್‌ ಪೇ ಮೂಲಕ ಕಳುಹಿಸಿದ್ದಾರೆ. ಬಳಿಕ ಆರೋಪಿಯು 500 ರು. ಮುಖಬೆಲೆಯ 21 ನೋಟುಗಳನ್ನು ಚಂದ್ರಶೇಖರ್‌ಗೆ ನೀಡಿದ್ದಾನೆ. ಇದೇ ವೇಳೆ ಆರೋಪಿ ಸಂಜಯ್‌ ಸ್ನೇಹಿತರೊಬ್ಬರಿಗೆ ಕರೆ ಮಾಡಬೇಕು ಎಂದು ಮೊಬೈಲ್‌ ಹಿಡಿದುಕೊಂಡು ಪಕ್ಕಕ್ಕೆ ಹೋಗಿದ್ದಾನೆ. ಬಳಿಕ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಬಿಲ್‌ ಸಹ ಪಾವತಿಸದೆ ಪರಾರಿಯಾಗಿದ್ದಾನೆ.

ಆರೋಪಿಯಿಂದ ಹಲವರಿಗೆ ವಂಚನೆ: ಆರೋಪಿ ಸಂಜಯ್‌ ತಾನು ಯುನಾನಿ ವೈದ್ಯನೆಂದು ಗುರುತಿನ ಚೀಟಿ ತೋರಿಸಿದ್ದಾರೆ. ಆದರೆ, ಅಸಲಿ ಪ್ರಮಾಣ ಪತ್ರ ಪರಿಶೀಲಿಸುವವರೆಗೂ ಆತ ವೈದ್ಯನೆಂದು ನಂಬುವುದು ಕಷ್ಟ. ಆರೋಪಿಯು ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಈ ಹಿಂದೆ ಸಿದ್ದಾಪುರ ಸೇರಿದಂತೆ ಚೆನ್ನೈನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ. ಈತ ಖೋಟಾ ನೋಟುಗಳನ್ನು ಬಳಸಿಕೊಂಡು ಹಲವರಿಗೆ ವಂಚಿಸಿದ್ದಾನೆ. ಈತನಿಗೆ ಈ ಖೋಟಾ ನೋಟುಗಳು ಎಲ್ಲಿ ಸಿಗುತ್ತಿದ್ದವು ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಲ್‌ ಪಾವತಿಯ ವೇಳೆ ನೋಟ್‌ ರಹಸ್ಯ ಬಯಲು: ಈ ವೇಳೆ ಕ್ಯಾಬ್‌ ಚಾಲಕ ಚಂದ್ರಶೇಖರ್‌ ಆರೋಪಿ ನೀಡಿದ್ದ 500 ರು. ಮುಖಬೆಲೆಯ ನೋಟುಗಳನ್ನು ನೀಡಿ ಬಿಲ್‌ ಪಾವತಿಸಲು ಮುಂದಾಗಿದ್ದಾರೆ. ಈ ವೇಳೆ ಕ್ಯಾಶಿಯರ್‌ ಇವು ಖೋಟ ನೋಟು ಎಂದಿದ್ದಾರೆ. ಬಳಿಕ ಚಂದ್ರಶೇಖರ್‌ ಮಾಗಡಿ ರಸ್ತೆ ಪೊಲೀಸ್‌ ಠಾಣೆಗೆ ತೆರಳಿ ಆರೋಪಿ ಸಂಜಯ್‌ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ