ಬತ್ತಿದ ಉಲ್ಲಾಳ ಕೆರೆ; ಸಂಕಟದಲ್ಲಿ ಪ್ರಾಣಿ, ಪಕ್ಷಿಗಳ ಸಂಕುಲ!

KannadaprabhaNewsNetwork |  
Published : Feb 24, 2024, 02:37 AM ISTUpdated : Feb 24, 2024, 03:33 PM IST
Rangegowda | Kannada Prabha

ಸಾರಾಂಶ

ರಾಜಧಾನಿ ಬೆಂಗಳೂರಿನ ಹೊರ ವಲಯದಲ್ಲಿರುವ ಉಲ್ಲಾಳ ಕೆರೆಯ ನೀರು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ರಾಷ್ಟ್ರಪಕ್ಷಿ ನವಿಲು ಸೇರಿದಂತೆ ಅಲ್ಲಿನ ಇಡೀ ಜೀವವೈವಿಧ್ಯತೆಗೆ ಸಂಚಕಾರ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನ ಹೊರ ವಲಯದಲ್ಲಿರುವ ಉಲ್ಲಾಳ ಕೆರೆಯ ನೀರು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ರಾಷ್ಟ್ರಪಕ್ಷಿ ನವಿಲು ಸೇರಿದಂತೆ ಅಲ್ಲಿನ ಇಡೀ ಜೀವವೈವಿಧ್ಯತೆಗೆ ಸಂಚಕಾರ ಎದುರಾಗಿದೆ.

ಈ ಬಾರಿ ತಲೆದೋರಿರುವ ಬರದ ಪರಿಣಾಮ ಉಲ್ಲಾಳದ ಕೆರೆಯ ಮೇಲೂ ಉಂಟಾಗಿದೆ. ಸುಮಾರು 27 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯು ಮಳೆ ನೀರನ್ನು ಆಶ್ರಯಿಸಿದೆ. ನಗರದ ಬೇರೆ ಕೆರೆಗಳಂತೆ ಈ ಕೆರೆಗೆ ತ್ಯಾಜ್ಯ ನೀರು ಹರಿದು ಬರುವುದಿಲ್ಲ.

ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಬೇಸಿಗೆ ಆರಂಭಕ್ಕೂ ಮುನ್ನವೇ ಕೆರೆ ಸಂಪೂರ್ಣ ಬರಿದಾಗಿದೆ.

ಕೆರೆ ಬರಿದಾಗಿರುವುದರಿಂದ ಕೆರೆಯಲ್ಲಿರುವ ಜೀವ ಸಂಕುಲಕ್ಕೆ ಸಂಚಕಾರ ಎದುರಾಗಿದೆ. ಅದರಲ್ಲೂ ನವಿಲಿನ ದೊಡ್ಡ ಹಿಂಡು ಈ ಕೆರೆಯ ಅಂಗಳದಲ್ಲಿದೆ. ಸ್ಥಳೀಯರ ಮಾಹಿತಿ ಪ್ರಕಾರ ಸುಮಾರು 30ರಿಂದ 50 ನವಿಲುಗಳು ಈ ಕೆರೆಯಲ್ಲಿ ವಾಸವಾಗಿವೆ. 

ನವಿಲುಗಳ ಜತೆಗೆ ಸುಮಾರು 33-35 ವಿವಿಧ ಬಗೆಯ ಪಕ್ಷಿ ಸಂಕುಲಕ್ಕೆ ಈ ಕೆರೆ ಆಶ್ರಯ ನೀಡುತ್ತಿದ್ದು, ಈ ಪೈಕಿ ಅರ್ಧದಷ್ಟು ಪಕ್ಷಿಗಳು ವಿದೇಶಿ ಪಕ್ಷಿಗಳಾಗಿವೆ. 

ಉಲ್ಲಾಳ ಕೆರೆಯ ಸಮೀಪದಲ್ಲಿರುವ ಕೊಮ್ಮಘಟ್ಟ ಕೆರೆಯಲ್ಲಿ ಹೆಚ್ಚಿನ ಸಂಖ್ಯೆಯ ಪಕ್ಷಿಗಳಿದ್ದು, ಅಲ್ಲಿಂದ ಉಲ್ಲಾಳ ಕೆರೆಗೆ ಪಕ್ಷಿಗಳು ವಲಸೆ ಬರುತ್ತವೆ. ಉಳಿದಂತೆ ಆಮೆ, ಮೊಲ, ನಾಗರಹಾವು, ಕಪ್ಪೆ, ಮೀನು ಮೊದಲಾದವುಗಳಿವೆ.

ಬುಟ್ಟಿಯಲ್ಲಿ ನೀರು: ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿರುವುದರಿಂದ ಕೆರೆಯ ತಗ್ಗು, ಗುಂಡಿಗಳಲ್ಲಿ ನಿಂತಿರುವ ನೀರು ಸಹ ಸಂಪೂರ್ಣವಾಗಿ ಖಾಲಿಯಾಗಿದೆ. ಕೆರೆಯಲ್ಲಿರುವ ಜೀವ ಸಂಕುಲಕ್ಕೆ ನೀರಿಲ್ಲದಂತಾಗಿದೆ. 

ಹಾಗಾಗಿ, ಸ್ಥಳೀಯರು, ಕೆರೆಯ ಅಂಗಳ, ಅಲ್ಲಲ್ಲಿ ಪ್ರತಿ ದಿನ ಬುಟ್ಟಿಯಲ್ಲಿ ನೀರಿ ತುಂಬಿಸಿ ಇಡುವ ಕೆಲಸ ಮಾಡಿದ್ದಾರೆ. ಇದರಿಂದ ಕೆಲವು ಜೀವಿಗಳು ಬದುಕುಳಿದುಕೊಂಡಿವೆ.

ಮಲ್ಲಸಂದ್ರ ಕೆರೆಯಿಂದ ನೀರು ಬರುತ್ತಿಲ್ಲ: ಸಹಜವಾಗಿ ಮಲ್ಲಸಂದ್ರ ಕೆರೆಯಿಂದ ಉಲ್ಲಾಳ ಕೆರೆಗೆ ನೀರು ಹರಿದು ಬರುತ್ತದೆ. ಆದರೆ, ಮಳೆ ಕಡಿಮೆಯಾಗಿರುವುದರಿಂದ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣ ನೀರು ಬಂದಿಲ್ಲ.

ಜತೆಗೆ, ಮಲ್ಲಸಂದ್ರ ಕೆರೆಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು 5 ಎಂಎಲ್‌ಡಿಯಿಂದ 11 ಎಂಎಲ್‌ಡಿಗೆ ಹೆಚ್ಚಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಕೆರೆ ಹರಿಸುವ ಕೆಲಸವಾಗುತ್ತಿಲ್ಲ. 

ಉಲ್ಲಾಳ ಕೆರೆಯಲ್ಲಿರುವ 0.365 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಅಗತ್ಯವಿರುವ ತ್ಯಾಜ್ಯ ನೀರಿನ ಪೂರೈಕೆ ಆಗುತ್ತಿಲ್ಲ. ಹೀಗಾಗಿ, ಈ ಘಟಕ ಕಾರ್ಯಚಾರಣೆಯನ್ನು ನಿಲ್ಲಿಸಿದೆ. ಹೀಗಾಗಿ, ಕೆರೆ ಒಣಗುತ್ತಿದೆ.

ಹೀಗೆ ಮುಂದುವರಿದರೆ ಮುಂಬರುವ ಬೇಸಿಗೆ ದಿನಗಳಲ್ಲಿ ಕೆರೆಯ ನೀರನ್ನೇ ಆಶ್ರಯಿಸಿರುವ ಜೀವ ಸಂಕುಲದ ಕಥೆ ಏನು ಎಂಬ ಪ್ರಶ್ನೆ ಸ್ಥಳೀಯಲ್ಲಿ ಕಾಡುತ್ತಿದೆ. 

ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ತುರ್ತು ಪರಿಹಾರ ಒದಗಿಸದಿದ್ದರೆ ಪ್ರಾಣಿ-ಪಕ್ಷಿ ಸಂಕುಲಗಳ ಸ್ಥಿತಿ ಚಿಂತಾಜನಕವಾಗಲಿದೆ.

ಉಲ್ಲಾಳ ಕೆರೆಯಲ್ಲಿ ಪ್ರತಿ ವರ್ಷ ಅಲ್ಪ ಸ್ವಲ್ಪವಾದರೂ ನೀರು ಇರುತ್ತಿತ್ತು. ಆದರೆ, ಈ ಬಾರಿ ಸಂಪೂರ್ಣವಾಗಿ ಖಾಲಿಯಾಗಿದೆ. ಕೆರೆ ನೀರು ನಂಬಿರುವ ಜೀವಿಗಳಿಗೆ ತೊಂದರೆ ಉಂಟಾಗಿದೆ. ಸರ್ಕಾರ ಅಥವಾ ಬಿಬಿಎಂಪಿ ಕೆರೆಗೆ ನೀರಿನ ವ್ಯವಸ್ಥೆ ಮಾಡಿದರೆ ಪ್ರಾಣಿ ಪಕ್ಷಿಗಳು ಬದುಕುಳಿಯಲಿವೆ. - ವಿಶ್ವನಾಥ, ಸ್ಥಳೀಯ ನಿವಾಸಿ

ಕೆರೆ ಮತ್ತು ಉದ್ಯಾನವನವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಕೆರೆಗೆ ನೀರು ಬರುವ ಮಾರ್ಗಗಳನ್ನು ಮುಚ್ಚಿಹಾಕಲಾಗಿದೆ. ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. - ರಂಗೇಗೌಡ, ಸ್ಥಳೀಯ ನಿವಾಸಿ

ಮಳೆ ಕೊರತೆ, ಮಲ್ಲತ್ತಹಳ್ಳಿ ಕೆರೆಯಲ್ಲಿ ಎಸ್‌ಟಿಪಿ ಕಾಮಗಾರಿ ಹಿನ್ನೆಲೆಯಲ್ಲಿ ಉಲ್ಲಾಳ ಕೆರೆಯಲ್ಲಿ ನೀರು ಬತ್ತಿ ಹೋಗಿದೆ. ಪ್ರಾಣಿ ಪಕ್ಷಿಗಳಿಗೆ ತೊಂದರೆ ಉಂಟಾಗದಂತೆ ತಾತ್ಕಾಲಿಕ ಪರಿಹಾರೋಪಾಯ ಮಾಡಲಾಗುವುದು.

ವಿಜಯಕುಮಾರ್‌ ಹರಿದಾಸ್‌, ಮುಖ್ಯ ಎಂಜಿನಿಯರ್‌, ಬಿಬಿಎಂಪಿ ಕೆರೆ ವಿಭಾಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ