ಕನ್ನಡಪ್ರಭ ವಾರ್ತೆ ರಾಮನಗರ
ಮಂಡ್ಯ ಜಿಲ್ಲೆಯ ವದೆ ಸಮುದ್ರ ಗ್ರಾಮದ ರಂಗ ನಿರ್ದೇಶಕ, ಹರಿಕಥೆ ವಿದ್ವಾಂಸ ವಿ.ಸಿ. ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ತಿಂಗಳ ಕಲಾ ಬೆಳಕು ಕಾರ್ಯಕ್ರಮದಲ್ಲಿ ‘ರಂಗ ಕಲಾಭೂಷಣ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.ದೃಶ್ಯ ಮಾಧ್ಯಮದ ವ್ಯಾಮೋಹ ಹಾಗೂ ಧಾರಾವಾಹಿಗಳಿಗೆ ಜನರು ಹೆಚ್ಚು ಒತ್ತು ಕೊಡುತ್ತಿರುವುದರಿಂದ ಪೌರಾಣಿಕ ನಾಟಕಗಳು ನಶಿಸುತ್ತಾ ಬಂದಿದೆ. ಪೌರಾಣಿಕ ನಾಟಕಗಳು ಅಲ್ಲೊಂದು ಇಲ್ಲೊಂದು ಪ್ರದರ್ಶನವಾಗುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ನಾಟಕ ಕಲೆ ಅದರಲ್ಲೂ ಪೌರಾಣಿಕ ನಾಟಕಗಳನ್ನು ಉಳಿಸಿ ಬೆಳೆಸಿದಾಗ ಮನುಷ್ಯನ ಮನಸ್ಸು ಪರಿವರ್ತನೆಯಾಗಲು ಸಾಧ್ಯ. ನಿಜವಾದ ಕಲೆ, ಕಲಾವಿದರನ್ನು ನಾವು ಕಾಣುವುದು ಭಕ್ತಿ ಪ್ರಧಾನ ನಾಟಕಗಳಿಂದ ಮಾತ್ರ ಎಂದರು.
ಆಧುನಿಕ ಯುಗದಲ್ಲಿ ಕಲೆ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಪೌರಾಣಿಕ ನಾಟಕಗಳನ್ನು ಏರ್ಪಡಿಸುವ ಮೂಲಕ ಕಲೆಯನ್ನು ಪೋಷಿಸುವ ಕೆಲಸ ಮಾಡಬೇಕು ಎಂದರು.
ಒಂದು ಕಾಲದಲ್ಲಿ ಪೌರಾಣಿಕ ನಾಟಕಗಳು ಗ್ರಾಮಿಣ ಭಾಗದ ಜನರಿಗೆ ಮನರಂಜನೆಯ ಬಹುಮುಖ್ಯ ಮಾಧ್ಯಮಗಳಾಗಿದ್ದವು. ನಾಟಕಗಳ ಮೂಲಕ ನಮ್ಮ ಹಿರಿಯರು ಜೀವನ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುತ್ತಾ ಅವರಿಗೆ ಬದುಕಿನ ಸನ್ಮಾರ್ಗವನ್ನು ತೋರಿಸುತ್ತಿದ್ದರು. ಪುರಾಣದ ಪಾತ್ರಗಳ ಮೂಲಕ ಬದುಕಿನ ಆದರ್ಶಗಳನ್ನು ಮಕ್ಕಳ ಮನಸ್ಸಿಗೆ ತುಂಬಿಸುತ್ತಾ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬೇರುಗಳನ್ನು ಗಟ್ಟಿಗೊಳಿಸುತ್ತಿದ್ದರು. ಇಂದು ಮೊಬೈಲ್ ಸಂಸ್ಕೃತಿ ಎಲ್ಲವನ್ನೂ ಮರೆಮಾಚುತ್ತಿದೆ ಎಂದು ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.
ನಾಡಪ್ರಭು ಕೆಂಪೇಗೌಡ ಕಲಾ ಬಳಗದ ಗೌರವಾಧ್ಯಕ್ಷ ಶಂಭೂಗೌಡ, ರಂಗಭೂಮಿ ಕಲಾವಿದರಾದ ಅಬ್ದುಲ್ ಸಮದ್, ಸಂಪತ್ ಕುಮಾರ್, ತಬಲವಾದಕರಾದ ಮಹದೇವಚಾರ್, ಆದರ್ಶ ಸಿಂ.ಲಿಂ. ನಾಗರಾಜು, ಶಿಕ್ಷಕ ರಾಜಶೇಖರ್, ಗಾಯಕ ಮಹದೇವ್ ಉಪಸ್ಥಿತರಿದ್ದರು.