- ಸಂವಿಧಾನ ಆಶಯಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಜಿಗಳಿ ರಂಗನಾಥ್ ಅಭಿಮತ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕೆಲವರಲ್ಲಿ ಮಾತ್ರ ಅಧಿಕಾರ, ಸಂಪತ್ತು ಸಂಗ್ರಹವಾದರೆ ಸಾಮಾಜಿಕ ಶೋಷಣೆಗೆ ದಾರಿ ಮಾಡಿಕೊಡುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ವ್ಯವಸ್ಥೆ ಬರಬೇಕಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ಸಂಚಾಲಕ ಜಿಗಳಿ ರಂಗನಾಥ್ ಹೇಳಿದರು.ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಆಶಯಗಳ ಬಗ್ಗೆ ಜನಜಾಗೃತಿ ಬೀದಿನಾಟಕ, ಜನಪದ ಗೀತೆ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಟಕಗಳು, ಜನಪದ ಗೀತೆಗಳು ಜನರಲ್ಲಿ ಜಾಗೃತಿ ಮೂಡಿಸುವ ಬಹುಮುಖ್ಯ ಅಸ್ತ್ರಗಳಾಗಿವೆ. ಮಾನವ ಬಂಧುತ್ವ ವೇದಿಕೆ ನಡೆಸುತ್ತಿರುವ ಜಾತಿ, ಧರ್ಮ, ವರ್ಗ, ಪಕ್ಷರಹಿತವಾದ ಸಮಾನತೆ ಹೋರಾಟವನ್ನು ಜನರು ಬೆಂಬಲಿಸಬೇಕು. ಆಗ ಮಾತ್ರ ಸಂವಿಧಾನ ಆಶಯಗಳನ್ನು ಸಮಾಜಕ್ಕೆ ಮುಟ್ಟಿಸಲು ಸಹಕಾರಿ ಆಗುತ್ತದೆ ಎಂದು ಹೇಳಿದರು.ಪ್ರಸ್ತುತ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ದುರುಪಯೋಗಪಡಿಸಿಕೊಂಡು ದೇಶದ ಸಂಪತ್ತು, ಅಧಿಕಾರ, ಕೆಲವರ ಹಿಡಿತಕ್ಕೆ ಹೋಗುವಂತೆ ಮಾಡುವ ವ್ಯವಸ್ಥಿತ ಸಂಚುಗಳು ನಡೆಯುತ್ತಿವೆ. ದೇಶದ ಸಂಪತ್ತನ್ನು ಕೆಲವೇ ಕೆಲವರು ಹೊಂದುವ ಮೂಲಕ ಬಡವರು, ಕೆಲವರ್ಗದ ಶೋಷಿತರನ್ನು ಅಧಿಕಾರ, ಸಂಪತ್ತಿನಿಂದ ದೂರವಿಡಲಾಗುತ್ತಿದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಬೀದಿನಾಟಕ, ಜನಪದ ಗೀತೆಗಳ ಮೂಲಕ ತಮ್ಮ ವೇದಿಕೆ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಶಿಕ್ಷಣ, ಆರೋಗ್ಯ, ರಾಜಕಾರಣದಂತಹ ಬಹುಮುಖ್ಯ ಕ್ಷೇತ್ರಗಳು, ಉಳ್ಳವರು, ಪ್ರಭಾವಿಗಳ ಪಾಲಾಗುತ್ತಿವೆ. ಹಣವಿದ್ದವರಿಗೆ ಮಾತ್ರ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ, ರಾಜಕಾರಣದಲ್ಲಿ ಸ್ಥಾನಮಾನಗಳು ಎಂಬಂತಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬಲಹೀನರಾದವರಿಗೆ ಕಳಪೆ ಶಿಕ್ಷಣ, ಆರೋಗ್ಯ ಸೇವೆಗಳೇ ಗತಿಯಾಗಿವೆ. ರಾಜಕಾರಣದಲ್ಲಿ ಕೂಡ ಬೆಳೆಯಲು ಕಷ್ಟವಾಗಿರುವುದು ವಿಪರ್ಯಾಸ ಎಂದು ಹೇಳಿದರು.ಕಲಾತಂಡದ ಕಲಾವಿದರಾದ ಲಿಂಗರಾಜು, ಮಲ್ಲೇಶ್, ರುದ್ರಪ್ಪ ದಾವಣಗೆರೆ, ಶರಪ್ಪ ಗದಗ, ಡಿ.ಸಿ. ಕುಮಾರ್, ಸುಲೋಚನಾ, ನಾಗರತ್ನಮ್ಮ, ವಿನೋದ ಪವಾರ್ ವಾಣಿ, ಬೀದಿನಾಟಕದಲ್ಲಿ ಭಾಗವಹಿಸಿದ್ದರು. ಸ್ಥಳೀಯ ರಂಗಕರ್ಮಿ ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿದ್ದರು.
- - -(ಬಾಕ್ಸ್) * ಎಲ್ಲ ಪ್ರತಿ ಜಿಲ್ಲೆಗಳಲ್ಲಿ ಕಲಾತಂಡ ರಚನೆ ವೇದಿಕೆ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕಲಾತಂಡ ರಚನೆಯಾಗಿದೆ. ತರಬೇತಿ ಶಿಬಿರಗಳ ಮೂಲಕ ಈ ತಂಡಗಳನ್ನು ಬೀದಿನಾಟಕ ಮತ್ತು ಜನಪದ ಗೀತೆಗಳ ಕಲಾ ಪ್ರದರ್ಶನಕ್ಕೆ ಸಚ್ಚುಗೊಳಿಸಲಾಗಿದೆ. ಈ ಕಲಾ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ತಾಲೂಕು ಹಂತಗಳಲ್ಲಿ ಬೀದಿನಾಟಕ, ಜನಪದ ಗೀತೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ ಎಂದು ಜಿಗಳಿ ರಂಗನಾಥ್ ಹೇಳಿದರು.
- - --9ಎಚ್.ಎಲ್.ಐ1.ಜೆಪಿಜಿ:
ಹೊನ್ನಾಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರ ಮಾನವ ಬಂಧುತ್ವ ವೇದಿಕೆ ಕಲಾವಿದರ ತಂಡದಿಂದ ಜನಜಾಗೃತಿ ಬೀದಿನಾಟಕ, ಜನಪದ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಲಾಯಿತು.