ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರ ನೀತಿಗಳನ್ನು ವಿರೋಧಿಸಿ ರಾಷ್ಟ್ರಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಮುಷ್ಕರವನ್ನು ಬೆಂಬಲಿಸಿ ಮಂಡ್ಯ ನಗರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದರು.ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಶ್ರಮಿಕ ಸಂಘಟನೆಗಳ ಮುಖಂಡರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ರಸ್ತೆಯಲ್ಲಿ ಕುಳಿತು ಪ್ರತಿಭಟಿಸುತ್ತಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪ್ರತಿಭಟನೆ ಕೈಬಿಡದೆ ಮುಂದುವರೆಸಿದ ಕಾರ್ಮಿಕ ಮುಖಂಡರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
೮ ಗಂಟೆ ಕೆಲಸದ ಅವಧಿ, ಕಾಯಂ ಕೆಲಸ, ೩೬ ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು. ಗುತ್ತಿಗೆ, ಮುಂತಾದ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಕ್ಷಣ ಜಾರಿ ಮಾಡಬೇಕು. ಕಟ್ಟಡ ಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಮನೆಕೆಲಸಗಾರರು. ಬಸ್ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಟೈಲರ್‌ಗಳು, ಫೋಟೋಗ್ರಾಫರ್ಸ್ ಮೆಕಾನಿಕ್ಸ್, ಬೀಡಿ-ಅಗರಬತ್ತಿ ಕಾರ್ಮಿಕರು, ಮೀನುಗಾರರು, ಇನ್ನಿತರ ಎಲ್ಲಾ ಅಸಂಘಟಿತ ಕಾರ್ಮಿಕರು ಮತ್ತು ಕೃಷಿ-ತೋಟ ಕಾರ್ಮಿಕರು ಸೇರಿದಂತೆ ಎಲ್ಲಾ ವಿಭಾಗದ ಕಾರ್ಮಿಕರಿಗೆ ಕನಿಷ್ಠ ಮಾಸಿಕ ೯ ಸಾವಿರ ರು.ಪಿಂಚಣಿ ಹಾಗೂ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದರು.ಎನ್ಪಿಎಸ್ ಮತ್ತು ಯುಪಿಎಸ್ ರದ್ದುಪಡಿಸಿ, ಹಳೆಯ ಪೆನ್ಸನ್ ಸ್ವೀಂ ನ್ನು ಮರುಸ್ಥಾಪಿಸಬೇಕು. ಇಎಸ್‌ಐ, ಪಿ.ಎಫ್. ಬೋನಸ್ ಪಾವತಿಗಿರುವ ಎಲ್ಲಾ ವೇತನ ಮಿತಿಯನ್ನು ತೆಗೆಯಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಆಹಾರ, ಔಷಧಿಗಳು, ಕೃಷಿ ಸಾಮಾಗ್ರಿ ಮುಂತಾದ ಅಗತ್ಯ ವಸ್ತುಗಳ ಮೇಲಿನ ಜಿಎಸ್ ತೆಗೆಯಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮೇಲಿನ ಕೇಂದ್ರೀಯ ಅಬಕಾರಿ ಸುಂಕ ಇಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಅಧ್ಯಕ್ಷ ವರದರಾಜೇಂದ್ರ, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮಹಿಳಾ ಮುನ್ನಡೆಯ ಶಿಲ್ಪಾ,ಕರ್ನಾಟಕ ರಾಜ್ಯ ರಾಜ್ಯ ಲೋಡಿಂಗ್ ಅನ್ಲೋಡಿಂಗ್ ಕಾರ್ಮಿಕ ಒಕ್ಕೂಟದ ಮುಖಂಡರಾದ ಕೃಷ್ಣಪ್ಪ, ಪುಟ್ಟಸ್ವಾಮಿ, ನರಸಿಂಹ ಭಾಗವಹಿಸಿದ್ದರು.