ಕಾರವಾರ: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆಯ ಮೇರೆಗೆ ನಗರದಲ್ಲಿ ಕಾರ್ಮಿಕರು, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಮೆರವಣಿಗೆ, ಮುಷ್ಕರ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಬಹಿರಂಗ ಸಭೆ ನಡೆಸಿದರು.
ಜೆಸಿಟಿಯು ಸಂಚಾಲಕಿ, ಸಿಐಟಿಯು ರಾಜ್ಯ ಕಾರ್ಯದರ್ಶಿಯೂ ಆದ ಯಮುನಾ ಗಾಂವ್ಕರ್ ಹಾಗೂ ಬ್ಯಾಂಕ್ ನೌಕರರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆಸಿಟಿಯುನ ವಾಸುದೇವ ಶೇಟ್ ಕಾರ್ಮಿಕರ ಮುಷ್ಕರದ ಉದ್ದೇಶಗಳನ್ನು ವಿವರಿಸಿ ಮಾತನಾಡಿದರು.
ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆಯ ತಾಲೂಕು ಸಂಚಾಲಕ, ರಾಜ್ಯ ಸಮಿತಿ ಸದಸ್ಯ ವೀರೇಶ್ ರಾಠೋಡ ಮಾತಾಡಿದರು.ಉದ್ಯೋಗವನ್ನು ಕಾಯಂಗೊಳಿಸುವುದು, 8 ಗಂಟೆ ಕೆಲಸದ ಅವಧಿ, ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿಸಬೇಕು. ಎಲ್ಲರಿಗೂ ಉಚಿತ ಶಿಕ್ಷಣದ ಹಕ್ಕು ನೀಡಬೇಕು.ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಹಕ್ಕೊತ್ತಾಯ ಪ್ರತಿಭಟನಾಕಾರರು ಮಂಡಿಸಿದರು.
ಸಿಐಟಿಯು ತಾಲೂಕು ಸಂಚಾಲಕಿ ಮಂಜುಳಾ ಕಾಣಕೋಣಕರ್ ಹಕ್ಕೊತ್ತಾಯ ಓದಿ ಹೇಳಿದರು. ಸಿಐಟಿಯುನ ತಾರಾ ನಾಯ್ಕ, ಮಾಯಾ ಕಾಣೇಕರ್, ಜಯಶ್ರೀ ಗೌಡ, ಮೀನಾ ನಾಯ್ಕ, ನಿರ್ಮಲಾ ನಾಯ್ಕ, ವೀಣಾ ಅಸ್ನೋಟಿ, ವಿಮಲಾ ಪ್ರಭು, ನಿರ್ಮಲಾ ಕದ್ರಾ, ಪೂರ್ಣಿಮಾ ನಾಯ್ಕ ಮತ್ತಿತರರು ನೇತೃತ್ವ ವಹಿಸಿದ್ದರು.ಜಿಲ್ಲಾಧಿಕಾರಿಗಳ ಕಚೇರಿ ಎದುರು ಮುಷ್ಕರದ ಸಭೆಯ ವೇಳೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಹಕ್ಕೊತ್ತಾಯ ಪತ್ರ ನೀಡಿ ಕಾರ್ಮಿಕರ ಸಮಸ್ಯೆಗಳನ್ನು ವಿವರಿಸಲಾಯಿತು.
ತರುವಾಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮತ್ತು ಅಕ್ಷರ ದಾಸೋಹ ಯೋಜನಾಧಿಕಾರಿಗೆ ದುಡಿಯುವ ಮಹಿಳೆಯರ ಸಮಸ್ಯೆಗಳ ಬಗ್ಗೆ ಮನವಿ ನೀಡಲಾಯಿತು.ಆರಂಭದಲ್ಲಿ ರಂಗಮಂದಿರದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಸಿದರು.