ಕನ್ನಡಪ್ರಭ ವಾರ್ತೆ, ತುಮಕೂರು ಮಹಾನಗರ ಪಾಲಿಕೆಯ ನೌಕರರಿಗೂ ಏಳನೇ ವೇತನ ಆಯೋಗದ ಸೌಲಭ್ಯಗಳನ್ನು ವಿಸ್ತರಿಸಬೇಕು, ಅನುದಾನವನ್ನು ಆರ್ಥಿಕ ಇಲಾಖೆಯಿಂದಲೇ ಬಿಡುಗಡೆ ಮಾಡಬೇಕು, ನಿಯಮದಂತೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ನೌಕರರು ತಮ್ಮ ಕಾರ್ಯಗಳನ್ನು ಸ್ಥಗಿತಗೊಳಿಸಿ ನಗರದ ಕಚೇರಿ ಆವರಣದಲ್ಲಿ ಅನಿರ್ದಿಷ್ಠಾವಧಿ ಮುಷ್ಕರ ನಡೆಸಿದ್ದಾರೆ.ನಗರದ ಮಹಾನಗರ ಪಾಲಿಕೆ ಕಚೇರಿಯ ಆವರಣದಲ್ಲಿ ಪೆಂಡಾಲ್ ಹಾಕಿಕೊಂಡು ಕಚೇರಿಯ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿರುವ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮಹಾನಗರ ಪಾಲಿಕೆ ನೌಕರರ ಮುಷ್ಕರದಲ್ಲಿ ಶಾಸಕ ಜ್ಯೋತಿಗಣೇಶ್ ಅವರು ಭಾಗವಹಿಸಿ ನೌಕರರ ಅಹವಾಲುಗಳನ್ನು ಆಲಿಸಿದರು.ನಂತರ ಮಾತನಾಡಿದ ಶಾಸಕರು, ರಾಜ್ಯದ 10 ಮಹಾನಗರ ಪಾಲಿಕೆಗಳ ನೌಕರರು ನಿನ್ನೆಯಿಂದ ಮುಷ್ಕರ ನಡೆಸುತ್ತಿದ್ದಾರೆ. ಇಂದು ಮುಂದುವರಿದ ಭಾಗವಾಗಿ ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಬೇಡಿಕೆಗಳ ಆಲಿಸಿ, ಈಡೇರಿಸಲು ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.ಪಾಲಿಕೆ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ವಿಸ್ತರಿಸಬೇಕು. ಆರ್.ಓ.ಗಳಿಗೆ ಮುಂಬಡ್ತಿ ನೀಡುತ್ತಿಲ್ಲ ಎಂಬ ಬೇಡಿಕೆಗಳನ್ನು ಕೇಳಿ ಬಂದಿದ್ದು, ಅಗತ್ಯ ಇರುವ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಮಹಾನಗರ ಪಾಲಿಕೆ ನೌಕರರ ಸಮಸ್ಯೆಗಳನ್ನು ಪರಿಹರಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿ, ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದರು. ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ತನ್ನ ನೌಕರರಿಗೆ ಜಾರಿಗೆ ತಂದಿರುವ ಆರೋಗ್ಯ ಸಂಜಿವಿನಿ ಯೋಜನೆಯನ್ನು ಮಹಾನಗರ ಪಾಲಿಕೆ ನೌಕರರಿಗೂ ವಿಸ್ತರಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಜನರೊಂದಿಗೆ ಬೆರೆತು ಕೆಲಸ ಮಾಡುವ ಪಾಲಿಕೆಯ ಆರೋಗ್ಯ ಅಧಿಕಾರಿಗಳು, ನಿರೀಕ್ಷಕರು, ಕಂದಾಯ ಅಧಿಕಾರಿಗಳು, ಪೌರ ಕಾರ್ಮಿಕರುಗಳಿಗೆ ಆರೋಗ್ಯ ಸಂಜೀವಿನಿ ಯೋಜನೆ ಅತಿ ಅಗತ್ಯವಾಗಿದೆ. ಈಗಿರುವ ಮರು ಪಾವತಿ ಯೋಜನೆಯಲ್ಲಿ ಖರ್ಚು ಮಾಡಿದರೆ ಶೇ. 35 ರಷ್ಟು ಮಾತ್ರ ವಾಪಸ್ ಬರುತ್ತದೆ. ಸಣ್ಣ ಪುಟ್ಟ ಹುದ್ದೆಯಲ್ಲಿ ಕೆಲಸ ಮಾಡುವ ನೌಕರರಿಗೆ ಇದರಿಂದ ಬಹಳ ತೊಂದರೆಯಾಗಲಿದೆ. ಹಾಗಾಗಿ ನಮಗೆ ಆರೋಗ್ಯ ಸಂಜೀವಿನಿ ಯೋಜನೆಯನ್ನು ತುರ್ತಾಗಿ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ನಿಯಮಾವಳಿಗಳ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ವೃಂದ ಮತ್ತು ನೇಮಕಾತಿ ನಿಮಯಗಳ ತಿದ್ದುಪಡಿ ಮಾಡಬೇಕಾಗಿದೆ. ಆದರೆ ೧೫ ವರ್ಷ ಕಳೆದರೂ ತಿದ್ದುಪಡಿ ಸಾಧ್ಯವಾಗಿಲ್ಲ. ಇದರಿಂದ ಮಹಾನಗರಪಾಲಿಕೆಯಲ್ಲಿ ಕೆಲಸ ಮಾಡುವ ನೌಕರರಿಗೆ ಮುಂಬಡ್ತಿ, ನೇರ ನೇಮಕಾತಿಗಳಲ್ಲಿ ಸಾಕಷ್ಟು ಅನ್ಯಾಯವಾಗಿದೆ. ಬಹುತೇಕ ಹುದ್ದೆಗಳಿಗೆ ಎರವಲು ಸೇವೆಯನ್ನೇ ಬಳಸಿಕೊಳ್ಳುವುದರಿಂದ ಹತ್ತಾರು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕೆಲಸ ಮಾಡುವುದಲ್ಲದೆ, ವೇತನದಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಇದರ ಬಗ್ಗೆ ಹಲವಾರು ಬಾರಿ ಸರ್ಕಾರಕ್ಕೆ, ಸಂಬಂಧಪಟ್ಟ ಮಂತ್ರಿಗಳಿಗೆ, ಎಲ್ಲಾ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.ಆದರೂ ಏನು ಪ್ರಯೋಜನವಾಗಿಲ್ಲ. ಹಾಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು. ಮಹಾನಗರ ಪಾಲಿಕೆಯ ನೌಕರರು ಕಚೇರಿಯ ಹೊರ ಭಾಗದಲ್ಲಿ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿದ್ದರೆ, ಪಾಲಿಕೆಯ ಆಯುಕ್ತೆ ಬಿ.ವಿ. ಅಶ್ವಿಜ ರವರು ಒಬ್ಬರೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದದ್ದು ಕಂಡು ಬಂತು. ಮುಷ್ಕರದಲ್ಲಿ ಮಹಾನಗರ ಪಾಲಿಕೆಯ ನೌಕರರ ಸಂಘದ ಪದಾಧಿಕಾರಿಗಳಾದ ಶಬ್ಬೀರ್ ಅಹಮದ್, ಪುಷ್ಪಲತಾ, ಸಿದ್ದಲಿಂಗಪ್ಪ, ಮಧು, ವಿಶ್ವನಾಥ್, ಶೇಖರಬಾಬು, ಮಹೇಶ್ ಸೇರಿದಂತೆ ಪಾಲಿಕೆಯ ನೌಕರರುಗಳು ಪಾಲ್ಗೊಂಡಿದ್ದರು.