ಯಲಬುರ್ಗಾ:
ಕೇಂದ್ರ ಸರ್ಕಾರದ ಕಾರ್ಮಿಕ, ಜನ ವಿರೋಧಿ ಮತ್ತು ಕಾರ್ಪೋರೇಟ್ ಪರವಾದ ನೀತಿ ಹಿಂಪಡೆಯಲು ಆಗ್ರಹಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ ಸಂಯೋಜಿತ) ವತಿಯಿಂದ ಪಟ್ಟಣದ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಮುಖಾಂತರ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಶಂಕ್ರಮ್ಮ ಹಳ್ಳಿಕೇರಿ, ಪ್ರಧಾನ ಕಾರ್ಯದರ್ಶಿ ದೀಪಾ ಗೊಂಧಳೆ ಮಾತನಾಡಿ, ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರದ ಇಲಾಖೆಗಳಲ್ಲಿ ಕೆಳಸ್ತರದ ಜನತೆಗೆ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರು ಹಲವು ದಶಕಗಳಿಂದ ಅತ್ಯಂತ ನಿಕೃಷ್ಟ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಗೌರವಧನ, ಪ್ರೋತ್ಸಾಹ ಧನದ ಹೆಸರಿನಲ್ಲಿ ಲಕ್ಷಾಂತರ ಮಹಿಳಾ ಕಾರ್ಮಿಕರನ್ನು ಕಾರ್ಯಕರ್ತೆಯರೆಂದು ಸೇವೆ ಪಡೆದುಕೊಳ್ಳುತ್ತಿದೆ. ಕನಿಷ್ಠ ವೇತನ, ಸೇವಾ ಭದ್ರತೆ ಇಲ್ಲದೆ ಹಗಲಿರುಳು ಸೇವೆ ಸಲ್ಲಿಸುತ್ತಿರುವ ನಮನ್ನು ಕಾರ್ಮಿಕ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಶಾಸನಬದ್ಧ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಒದಗಿಸಿ ಕಾಯಂ ಮಾಡಬೇಕು. ಕೂಡಲೇ ಪ್ರೋತ್ಸಾಹಧನದ ಹೆಚ್ಚಳದ ಆದೇಶಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಶೋಭಾ ಹೂಗಾರ, ಶಿವಮ್ಮ, ಅನ್ನಪೂರ್ಣ, ಶರಣಮ್ಮ, ಹನುಮವ್ವ, ಅನ್ನಪೂರ್ಣ ಚೌಡಾಪುರ, ಪರಿಮಳ, ಭಾಗ್ಯ, ಲಕ್ಷ್ಮೀ, ತಿಪ್ಪಮ್ಮ ಇದ್ದರು.ಹಕ್ಕೊತ್ತಾಯಗಳು:
ಆಶಾ, ಅಂಗನವಾಡಿ, ಬಿಸಿಯೂಟ ಮತ್ತು ಇತರ ವರ್ಕರ್‌ಗಳ ಸೇವೆ ಕಾಯಂಗೊಳಿಸಬೇಕು. ಅಲ್ಲಿಯವರೆಗು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ೨೮೦೦೦ ರೂ. ಮಾಸಿಕ ವೇತನ ಜಾರಿ ಮಾಡಬೇಕು.ಕಾರ್ಮಿಕ ವಿರೋಧಿ ೪ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ೩.ಯಾವುದೇ ರೂಪದಲ್ಲಿ ಖಾಸಗೀಕರಣ ಬೇಡ. ನರೇಗಾಕ್ಕೆ ಹೆಚ್ಚಿನ ಅನುದಾನ ನೀಡಿ, ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಬೇಕು. ೪.ಗುತ್ತಿಗೆ ಹೊರಗುತ್ತಿಗೆ ಸೇರಿದಂತೆ ಎಲ್ಲಾ ಅನೌಪಚಾರಿಕ ವಲಯದ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.