ಡಾ.ನಂಜುಂಡಪ್ಪ ವರದಿ ಸಲ್ಲಿಕೆ ಬಳಿಕವೂ ಉತ್ತರ ಕರ್ನಾಟಕ ನಿರೀಕ್ಷಿತ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ಗೋವಿಂದರಾವ್ ವರದಿ ಸ್ಪಷ್ಟಪಡಿಸಿದೆ. ಈ ಹಿನ್ನೆಲೆ ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಆದರೆ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧ್ಯವೆಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಡಾ.ನಂಜುಂಡಪ್ಪ ವರದಿ ಸಲ್ಲಿಕೆ ಬಳಿಕವೂ ಉತ್ತರ ಕರ್ನಾಟಕ ನಿರೀಕ್ಷಿತ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ಗೋವಿಂದರಾವ್ ವರದಿ ಸ್ಪಷ್ಟಪಡಿಸಿದೆ. ಈ ಹಿನ್ನೆಲೆ ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಆದರೆ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧ್ಯವೆಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ತಿಳಿಸಿದೆ.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ನಡುವೆ ಅಭಿವೃದ್ಧಿ ತಾರತಮ್ಯ ನಡೆಯುತ್ತಲೇ ಬಂದಿದೆ. ಹೀಗಾಗಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟುಕೊಂಡು ಹೋರಾಟ ತೀವ್ರಗೊಳಿಸುವುದು ಅಗತ್ಯವಾಗಿದೆ ಎಂದರು.
ಫೆ.20ರಂದು ಮಧ್ಯಾಹ್ನ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ನಮ್ಮ ನಿಯೋಗ ತೆರಳುತ್ತಿದೆ. ನಮಗೆ 10 ನಿಮಿಷಗಳ ಕಾಲಾವಕಾಶ ನೀಡಿದ್ದು, 8 ಜನರಿಗೆ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.ಗೋವಿಂದರಾವ್ ನೀಡಿರುವ ವರದಿಯಲ್ಲಿ ಹಿಂದುಳಿದ 20 ಜಿಲ್ಲೆಗಳಲ್ಲಿ 15 ಜಿಲ್ಲೆಗಳು ಉತ್ತರ ಕರ್ನಾಟಕದವು. ಹೀಗಾಗಿ ಉತ್ತರದ ಅಭಿವೃದ್ಧಿ ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಇನ್ನೂ ತಾಳ್ಮೆ ವಹಿಸಿಕೊಂಡರೆ ನಾವು ತಮ್ಮ ನಿರುದ್ಯೋಗಿ ಯುವಕರಿಗೆ ಅನ್ಯಾಯ ಮಾಡಿದಂತಾಗುತ್ತದೆ. ವಿಳಂಬ ಮಾಡದೇ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಧ್ವನಿಗೂಡಿಸಬೇಕು ಎಂದು ಹೇಳಿದರು.ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಸಂಚಾಲಕ ಪ್ರಕಾಶ ಅಂತರಗೊಂಡ ಮಾತನಾಡಿ, ಬೆಂಗಳೂರು ಮತ್ತು ಮೈಸೂರು ಭಾಗಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಅನಾಥಾಶ್ರಮ ಆಗಿದೆ. ಶೇ.68ರಷ್ಟು ಜಲಸಂಪನ್ಮೂಲ ಹೊಂದಿದ್ದರೂ ಉತ್ತರದ ಕೃಷ್ಣಾ, ಮಹದಾಯಿ, ನವಲಿ ಯೋಜನೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಇಲ್ಲಿ ಅಷ್ಟದಿಕ್ಕುಗಳಲ್ಲಿ ಸಕ್ಕರೆ, ಸಿಮೆಂಟ್ ಕಾರ್ಖಾನೆ ಹೊರತುಪಡಿಸಿದರೆ ಮಹತ್ವದ ಕೈಗಾರಿಕೆಗಳು ಬಂದಿಲ್ಲ. ಮೈಕ್ರೋ ಇಂಡಸ್ಟ್ರೀಜ್ ಬೆಳವಣಿಗೆ ಆಗಿಲ್ಲ. ಕೈಗಾರಿಕೆ ವಿಕೇಂದ್ರೀಕರಣ ಆಗುತ್ತಿಲ್ಲ. ಭೂಸ್ವಾಧೀನದಲ್ಲೂ ನಮಗೆ ಅನ್ಯಾಯ ಆಗುತ್ತಿದೆ. ಕೃಷ್ಣಾ ಸಂತ್ರಸ್ತರಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ಕೊಡಲು ಆಗಲ್ಲ ಎಂದು ಜಲಸಂಪನ್ಮೂಲ ಸಚಿವರು ನೇರವಾಗಿ ಹೇಳುತ್ತಾರೆ. ಅಷ್ಟಾದರೂ ಇಲ್ಲಿನ ಶಾಸಕರು ಅವರನ್ನು ಪ್ರಶ್ನೆ ಮಾಡಲ್ಲ. ನಮ್ಮ ಭಾಗದ ಶಾಸಕರು, ಸಂಸದರ ಬೇಜವಾಬ್ದಾರಿಯಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ನಮ್ಮ ಶಾಸಕರು ಅಧಿಕಾರಿಗಳ ವರ್ಗಾವಣೆ ಬಗ್ಗೆ ತೋರುವ ಕಾಳಜಿ ಅಭಿವೃದ್ಧಿ ಬಗ್ಗೆ ವಹಿಸಿದ್ದರೆ ಉತ್ತರ ಅಭಿವೃದ್ಧಿ ಆಗುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಎ.ಎ. ದಂಡಿಯಾ, ಬಸವರಾಜ ಗವಿಮಠ, ರವಿ ಕುಮಟಗಿ ಮಾತನಾಡಿದರು.